ಜೂನ್ 6ರಂದು ಸಂಪುಟ ವಿಸ್ತರಣೆ
ಮೈಸೂರು

ಜೂನ್ 6ರಂದು ಸಂಪುಟ ವಿಸ್ತರಣೆ

June 2, 2018

ಬೆಂಗಳೂರು: ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲವನ್ನು ಜೂ. 6 (ಬುಧವಾರ)ರ ಮಧ್ಯಾಹ್ನ 2 ಗಂಟೆಗೆ ವಿಸ್ತರಿಸಲಿದ್ದಾರೆ.

ಸರ್ಕಾರ ರಚನೆ ಮಾಡಿ ಹಲವು ದಿನದ ನಂತರ ಮೈತ್ರಿ ಪಕ್ಷಗಳು ಮಂತ್ರಿಮಂಡಲಕ್ಕೆ ತಮ್ಮ ಸದಸ್ಯರ ಆಯ್ಕೆ ಮತ್ತು ಖಾತೆ ಹಂಚಿಕೆ ವಿಷಯದಲ್ಲಿ ಸಫಲರಾಗಿದ್ದಾರೆ. ಉಭಯ ಪಕ್ಷಗಳ ಮುಖಂಡರು ಸುದೀರ್ಘ ಸಭೆಯ ನಂತರ ಸಂಜೆ ಮೈತ್ರಿ ಪಕ್ಷದ ಮುಖಂಡರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪು-ರೇಷೆ ಹಾಗೂ ಸಮನ್ವಯ ಸಮಿತಿ ಕುರಿತಂತೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಮಾತ ನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಮಂತ್ರಿ ಮಂಡಲವನ್ನು ಬುಧವಾರ ವಿಸ್ತರಣೆ ಮಾಡಲಿದ್ದೇವೆ ಎಂದರು.

ದೆಹಲಿಯಲ್ಲಿ ನಡೆಯಲಿರುವ ರಾಜ್ಯ ಪಾಲರ ಸಮ್ಮೇಳನದಲ್ಲಿ ಭಾಗವಹಿಸಲು ರಾಜ್ಯಪಾಲ ವಜೂಭಾಯ್ ವಾಲಾ ಅವರು ತೆರಳುತ್ತಿರುವುದರಿಂದ ಭಾನುವಾರ ನಡೆಯ ಬೇಕಿದ್ದ ಸಂಪುಟ ವಿಸ್ತರಣೆಯನ್ನು ಬುಧ ವಾರಕ್ಕೆ ಮುಂದೂಡಿದ್ದೇವೆ ಎಂದರು.
ಇದು ಪೂರ್ಣ ಪ್ರಮಾಣದ ಸಂಪುಟ ರಚನೆ ಅಲ್ಲ ಎಂಬ ಸುಳಿವು ನೀಡಿದ ಮುಖ್ಯಮಂತ್ರಿ ಅವರು, ಎಷ್ಟು ಮಂದಿ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿ ಸುತ್ತಾರೆ ಎಂಬುದನ್ನು ನಂತರ ಉಭಯ ಪಕ್ಷದ ನಾಯಕರು ತೀರ್ಮಾನಿಸಲಿದ್ದಾರೆ ಎಂದು ಹೇಳಿ, ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೆ ಪತ್ರಿಕಾಗೋಷ್ಠಿ ಕೊನೆಗೊಳಿಸಿದರು. ಇದಕ್ಕೂ ಮುನ್ನ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು, ವಿದೇಶ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸಂಪರ್ಕಿಸಿ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ನಡೆಸಿದ ಮಾತುಕತೆ ಯಶಸ್ವಿಯಾಗುತ್ತಿದ್ದಂತೆ ಮುಖ್ಯಮಂತ್ರಿ ಅವರು ವಿಸ್ತರಣೆ ನಿರ್ಧಾರ ಕೈಗೊಂಡರು. ಉಭಯ ಪಕ್ಷಗಳ ರಾಷ್ಟ್ರೀಯ ನಾಯಕರು ಸಂಪುಟ ವಿಸ್ತರಣೆಗೆ ಅನುಮತಿ ನೀಡುತ್ತಿದ್ದಂತೆ ಮುಖ್ಯಮಂತ್ರಿ ಅವರು, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರ ಜೊತೆಗೂಡಿ ಇಂದು ಮಧ್ಯಾಹ್ನ ರಾಜ್ಯಪಾಲ ವಜೂಭಾಯ್ ವಾಲಾ ಅವರನ್ನು ಭೇಟಿ ಮಾಡಿ, ಮಂತ್ರಿ ಮಂಡಲ ವಿಸ್ತರಣೆಗೆ ಸಮಯ ನಿಗದಿಗೆ ಕೋರಿದರು.

ಚರ್ಚೆ ಸಂದರ್ಭದಲ್ಲಿ ರಾಜ್ಯಪಾಲರು ಭಾನುವಾರ ಮಧ್ಯಾಹ್ನದಿಂದ ಬರುವ ಮಂಗಳವಾರದವರೆಗೆ ತಾವು ಪ್ರವಾಸದಲ್ಲಿದ್ದು, ನಮ್ಮ ಪ್ರವಾಸಕ್ಕೂ ಮುನ್ನ, ಇಲ್ಲವೇ ಆನಂತರ ನಿಮ್ಮ ಕಾರ್ಯವನ್ನು ಕೈಗೆತ್ತಿಕೊಳ್ಳಿ ಎಂದು ಸಲಹೆ ಮಾಡಿದರು. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರು, ಅಲ್ಲಿಯೇ ಸಮಾಲೋಚನೆ ಮಾಡಿ, ಸಮಯ ನಿಗದಿಪಡಿಸಿದ್ದಲ್ಲದೆ, ಮೊದಲ ಕಂತಿನಲ್ಲಿ ಸಂಪುಟ ಸೇರ್ಪಡೆ ಗೊಳ್ಳುವವರ ಪಟ್ಟಿಯನ್ನೂ ನೀಡಿದರೆಂದು ಉನ್ನತ ಮೂಲಗಳು ತಿಳಿಸಿವೆ.

ಹಣಕಾಸು, ಇಂಧನ, ಲೋಕೋಪಯೋಗಿ, ಜಲ ಸಂಪನ್ಮೂಲ, ಕಂದಾಯ, ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ಕೆಲವು ಪ್ರಮುಖ ಖಾತೆಗಳನ್ನು ಹಂಚಿಕೊಳ್ಳುವ ವಿಷಯ ದಲ್ಲಿ ಮೊದಲು ಸಹಮತ ಕಂಡುಬರದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಗೆ ವಿಳಂಬವಾಗಿತ್ತು. ಖಾತೆ ಹಂಚಿಕೆ ನಂತರ ಮಂತ್ರಿ ಮಂಡಲಕ್ಕೆ ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕೆಂಬ ಬಗ್ಗೆ ಉಭಯ ಪಕ್ಷಗಳಲ್ಲೂ ಗೊಂದಲ ನಿರ್ಮಾಣವಾಗಿತ್ತು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಕಾರಣಕರ್ತರಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬೀ ಅಜಾದ್, ತಮ್ಮ ಪಕ್ಷದ ಮುಖಂಡರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ಮಾಡಿ, ಅಲ್ಲಿಂದಲೇ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿದ್ದರು.
ಇದಾದ ನಂತರ ನಿನ್ನೆ ಉಭಯ ಪಕ್ಷದ ಪ್ರಮುಖ ನಾಯಕರು ನಗರದ ಪಂಚತಾರಾ ಹೊಟೇಲ್‍ವೊಂದರಲ್ಲಿ ಸಭೆ ಸೇರಿ, ಎರಡೂ ಪಕ್ಷಗಳ ಸದಸ್ಯರ ಪಟ್ಟಿಯನ್ನು ಅವಲೋಕಿಸಿ ಮಂತ್ರಿ ಮಂಡಲದಲ್ಲಿ ವಿಭಾಗ ಮತ್ತು ಜಾತಿ ಪ್ರಾತಿನಿಧ್ಯದಡಿ ಯಾರಿಗೆ ಯಾವ ಖಾತೆ ನೀಡಬೇಕು, ಎಲ್ಲಕ್ಕಿಂತ ಮಿಗಿಲಾಗಿ ಜಿಲ್ಲಾ ಉಸ್ತುವಾರಿ ಹೊಣೆ ಯಾರಿಗೆ ವಹಿಸಬೇಕೆಂಬ ಬಗ್ಗೆ ಅಂತಿಮಗೊಳಿಸಿದರು. ಸಿದ್ಧಪಡಿಸಿದ ಪಟ್ಟಿಗೆ ರಾಷ್ಟ್ರೀಯ ನಾಯಕರ ಒಪ್ಪಿಗೆ ಪಡೆಯಲು ಮುಖ್ಯಮಂತ್ರಿ ಅವರ ಪಕ್ಷದ ರಾಷ್ಟ್ರೀಯ ನಾಯಕ ಡ್ಯಾನಿಷ್ ಅಲಿ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಜೆಡಿಎಸ್ ರಾಷ್ಟ್ರೀಯ ನಾಯಕ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಅಲ್ಲಿಂದಲೇ ಗೌಡರು, ರಾಹುಲ್ ಜೊತೆ ದೂರವಾಣ ಯಲ್ಲಿ ಮಾತುಕತೆ ನಡೆಸಿ, ಒಟ್ಟಿಗೆ ಅನುಮತಿ ದೊರೆಯುತ್ತಿದ್ದಂತೆ ಮಂತ್ರಿ ಮಂಡಲ ವಿಸ್ತರಣೆಗೆ ಇದ್ದ ಕಂಟಕ ಪರಿಹಾರವಾಯಿತು.

Translate »