ಭಾರತ್ ಬಂದ್ ಕರೆ
ಮೈಸೂರು

ಭಾರತ್ ಬಂದ್ ಕರೆ

December 8, 2020

ಬೆಂಗಳೂರು,ಡಿ.7-ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ತಿದ್ದುಪಡಿ ಕಾಯಿದೆಗಳನ್ನು ವಿರೋಧಿಸಿ ಮಂಗಳವಾರ ರೈತ ಸಂಘಟನೆಗಳು ಕರೆ ನೀಡಿರುವ ‘ಭಾರತ್ ಬಂದ್’ಗೆ ರಾಜ್ಯದಲ್ಲಿ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಉದ್ದಿಮೆದಾರರು ಹಾಗೂ ವರ್ತಕರು ಕೇವಲ ನೈತಿಕ ಬೆಂಬಲದ ಮಾತುಗಳನ್ನಾಡಿದ್ದಾರೆ.

ಭಾರತ್ ಬಂದ್‍ಗೆ ಕಾಂಗ್ರೆಸ್, ಜೆಡಿಎಸ್, ಬಿಎಸ್‍ಪಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ರಾಜ್ಯ ರೈತ ಸಂಘ, ನಾರಾಯಣ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ಪಡೆ, ಕನ್ನಡ ಚಳುವಳಿ ವಾಟಾಳ್ ಪಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಲಾರಿ ಮಾಲೀಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ, ಆಟೋ ಮತ್ತು ಟ್ಯಾಕ್ಸಿ ಯೂನಿಯನ್‍ಗಳು, ಕೆಲ ಕಾರ್ಮಿಕ ಸಂಘಟನೆಗಳು, ಬೀದಿಬದಿ ವ್ಯಾಪಾರಿಗಳ ಸಂಘ, ಎಪಿಎಂಸಿ ಕೂಲಿ ಕಾರ್ಮಿಕರ ಸಂಘ ಬಂದ್‍ಗೆ ಬೆಂಬಲ ಸೂಚಿಸಿವೆ.

ಬಂದ್ ಬಗ್ಗೆ ಯಾವುದೇ ಉದ್ದಿಮೆ ಸಂಘಟನೆಗಳು ತಮ್ಮ ನಿಲುವನ್ನು ಪ್ರಕಟಿಸದೇ ಇರುವ ಮೂಲಕ ಪರೋಕ್ಷವಾಗಿ ಬಂದ್‍ಗೆ ಬೆಂಬಲ ಇಲ್ಲ ಎಂಬ ಸಂದೇಶ ವನ್ನು ರವಾನೆ ಮಾಡಿವೆ. ವರ್ತ ಕರ ಸಂಘಟನೆಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿಲ್ಲ. ಹೋಟೆಲ್ ಮಾಲೀಕರ ಸಂಘಟನೆಗಳು ನೈತಿಕ ಬೆಂಬಲ ಘೋಷಿಸಿದ್ದು, ಮಂಗಳ ವಾರ ಹೋಟೆಲ್ ಹಾಗೂ ರೆಸ್ಟೋ ರೆಂಟ್‍ಗಳು ತೆರೆದಿರುತ್ತವೆ. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಬ್ಯಾಂಕ್ ನೌಕ ರರ ಯೂನಿಯನ್ ಬಂದ್‍ಗೆ ಬೆಂಬಲ ಘೋಷಿಸಿದ್ದರೂ ನೌಕರರು ಕಪ್ಪು ಪಟ್ಟಿ ಧರಿಸಿ, ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದು ಹೇಳಲಾಗಿದ್ದು, ಬ್ಯಾಂಕ್ ವಹಿವಾಟಿನ ಮೇಲೆ ಬಂದ್‍ನಿಂದಾಗಿ ಯಾವುದೇ ರೀತಿಯ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ಟ್ಯಾಕ್ಸಿ ಹಾಗೂ ಆಟೋ ಸಂಚಾರ ಸ್ತಬ್ದವಾಗಲಿದ್ದು, ಬೆಂಗಳೂರಿನ ಜನತೆ ಬಿಎಂಟಿಸಿ ಬಸ್ ಹಾಗೂ ಮೆಟ್ರೊ ಮೊರೆಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಎಂದಿನಂತೆ ಇರಲಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ. ಅದೇ ವೇಳೆ ಬಂದ್‍ಗೆ ಬೆಂಬಲ ನೀಡುತ್ತಿರುವ ಸಂಘಟನೆಗಳು ಬಸ್ ಸಂಚಾರಕ್ಕೆ ಅಡ್ಡಿ ಪಡಿಸುವುದಾಗಿ ಹೇಳಿಲ್ಲವಾದ್ದರಿಂದ ಬಸ್ ಸಂಚಾರ ಎಂದಿನಂತೆ ಇರುವ ಸಾಧ್ಯತೆ ಇದೆ. ಅತ್ಯಾವಶ್ಯಕ ವಸ್ತುಗಳಾದ ಹಾಲು, ಔಷಧಿ ಸರಬರಾಜಿಗೆ ಬಂದ್‍ನಿಂದ ವಿನಾಯಿತಿ ನೀಡಲಾಗಿದೆ. ಮೆಡಿಕಲ್ ಶಾಪ್‍ಗಳು ಮತ್ತು ಆಸ್ಪತ್ರೆಗಳು ಕಾರ್ಯನಿರ್ವಹಿಸಲಿವೆ. ಪೆಟ್ರೋಲ್ ಬಂಕ್‍ಗಳು ತೆರೆದಿರುತ್ತವೆ.

ನಾಳೆ (ಡಿ. 8) ಸರಕು ಲಾರಿಗಳ ಸಂಚಾರ ಸ್ತಬ್ದಗೊಳ್ಳುತ್ತಿರುವ ಕಾರಣ ಕೆಲ ವ್ಯಾಪಾರ-ವಹಿವಾಟುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಎಪಿಎಂಸಿ ಕೂಲಿ ಕಾರ್ಮಿಕರು ಕಾರ್ಯ ನಿರ್ವಹಿಸದೇ ಇರುವುದರಿಂದ ಮಾರುಕಟ್ಟೆ ವ್ಯವಹಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಇನ್ನು ಬೆಂಗಳೂರಿನ ಮಾರುಕಟ್ಟೆಗಳನ್ನು ಬಂದ್ ಮಾಡುವುದಾಗಿ ಅಲ್ಲಿನ ವರ್ತಕರು ಘೋಷಿಸಿದ್ದಾರೆ. ಮಾರುಕಟ್ಟೆ ಹಾಗೂ ಬೀದಿಬದಿ ವ್ಯಾಪಾರ ಸಂಪೂರ್ಣವಾಗಿ ಬಂದ್ ಆಗುವುದರಿಂದ ಸಾರ್ವಜನಿಕರು ತರಕಾರಿ ಹಾಗೂ ಹಣ್ಣು ಖರೀದಿಗೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.

ಹೆದ್ದಾರಿಗಳನ್ನು ಬಂದ್ ಮಾಡಲಾಗುತ್ತದೆ ಎಂದು ರೈತ ಮುಖಂಡರು ಘೋಷಿಸಿ ದ್ದಾರೆ. ಇದರಿಂದಾಗಿ ರಾಜ್ಯದ ಹೆದ್ದಾರಿಗಳಲ್ಲಿ ವಾಹನ ಸಂಚಾರ ವ್ಯತ್ಯಯ ಉಂಟಾ ಗುವ ಸಾಧ್ಯತೆ ಇದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್ ಮಾಡಲಾಗುತ್ತದೆ ಎಂದು ರೈತ ಸಂಘಟನೆಗಳು ಹೇಳಿವೆ. ನಮ್ಮ ಹಕ್ಕಿಗಾಗಿ ರಾಜ್ಯಾದ್ಯಂತ ಶಾಂತಿಯುತ ಹೋರಾಟ ನಡೆಸುತ್ತೇವೆ. ನಾವು ಯಾರಿಗೂ ತೊಂದರೆ ಕೊಡುವುದಿಲ್ಲ. ನಮ್ಮ ಹೋರಾಟವನ್ನು ಸಹಿಸದವರು ಕಾನೂನು-ಸುವ್ಯವಸ್ಥೆಗೆ ಧಕ್ಕೆ ತಂದರೆ ಅದಕ್ಕೆ ನಾವು ಹೊಣೆಗಾರರಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ.

ಬಂದ್‍ಗೆ ಮೈಸೂರಲ್ಲಿ ರೈತ ಸಂಘಟನೆಗಳು ಪೂರ್ಣ, ಇತರ ಸಂಘಟನೆಗಳ ಬಾಹ್ಯ ಬೆಂಬಲ
ಮೈಸೂರು,ಡಿ.7(ಆರ್‍ಕೆ)-ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಕೃಷಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ರೈತ ಪರ ಸಂಘಟನೆಗಳು ನಾಳೆ (ಡಿ.8) ಕರೆ ನೀಡಿರುವ ‘ಭಾರತ್ ಬಂದ್’ಗೆ ಮೈಸೂರಲ್ಲಿ ರೈತ ಸಂಘಟನೆಗಳು ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರೆ, ಇತರೆ ಸಂಘ-ಸಂಸ್ಥೆಗಳು ಬರಿ ಬಾಹ್ಯ ಬೆಂಬಲ ಘೋಷಿಸಿವೆ.

ರೈತರು, ಕಾರ್ಮಿಕ ವಿರೋಧಿ ನೀತಿ ವಿರುದ್ಧ ರೊಚ್ಚಿಗೆದ್ದಿರುವ ರೈತ ಸಮು ದಾಯವು ಮಂಗಳವಾರ ದೇಶದಾದ್ಯಂತ ಉಗ್ರ ಹೋರಾಟ ನಡೆಸಲು ನಿರ್ಧ ರಿಸಿದ್ದು, ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ರೈತಪರ ಹಾಗೂ ಕಾರ್ಮಿಕ ಸಂಘಟನೆಗಳು ಬಂದ್ ಬೆಂಬಲಿಸುತ್ತಿವೆ. ಎಡಪಕ್ಷಗಳು, ಕೃಷಿ ಕಾರ್ಮಿಕರು, ಪ್ರಗತಿಪರ ಸಂಘಟನೆಗಳು, ಕೃಷಿ ಆಧಾರಿತ ಮಾರುಕಟ್ಟೆ, ತಂಬಾಕು ಮಾರುಕಟ್ಟೆಗಳು ಸಹ ಬಂದ್‍ಗೆ ಬೆಂಬಲ ಸೂಚಿಸಿದ್ದು, ರೈತ ಮುಖಂಡ ಹೊಸಕೋಟೆ ಬಸವರಾಜು ನೇತೃತ್ವದಲ್ಲಿ ಇಂದು ಮೈಸೂರಿನ ದೇವರಾಜ ಮಾರುಕಟ್ಟೆ, ಸಂತೆಪೇಟೆ, ಶಿವರಾಂ ಪೇಟೆಗಳ ಅಂಗಡಿ ಮಳಿಗೆದಾರರ ಭೇಟಿ ಮಾಡಿ, ಮಂಗಳವಾರದ ಬಂದ್‍ಗೆ ಬೆಂಬಲ ನೀಡುವಂತೆ ಕರಪತ್ರ ಹಂಚುವ ಮೂಲಕ ಮನವಿ ಮಾಡಿದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘವು ರೈತರ ಹೋರಾಟಕ್ಕೆ ಬೆಂಬಲ ನೀಡಲಿದೆ ಎಂದು ಸಂಘದ ಅಧ್ಯಕ್ಷ ಜಿ. ಮಂಜು ತಿಳಿಸಿದ್ದಾರೆ. ಭಾರತ್ ಬಂದ್‍ಗೆ ಬೆಂಬಲ ಸೂಚಿಸುವುದಾಗಿ ತಿಳಿಸಿರುವ ಮೈಸೂರು-ಮಂಡ್ಯ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಜೆ. ಸುರೇಶ್‍ಗೌಡ, ಎಪಿಎಂಸಿ ತಿದ್ದುಪಡಿ ಕಾಯ್ದೆಯು ರೈತ ಸಮುದಾಯದ ವಿರೋಧಿಯಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ದಸಂಸ, ವಿದ್ಯಾರ್ಥಿ ಸಂಘಟನೆ, ಮಹಿಳಾ ಸಂಘಟನೆಗಳು, ಕಮ್ಯುನಿಸ್ಟ್ ಪಕ್ಷಗಳು, ಸಿಐಟಿಯು, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರಾಜ್ಯ ರೈತ ಐಕ್ಯ ಹೋರಾಟ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಅನ್ನದಾತನ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಮೈಸೂರಿನ ಬಂಡೀಪಾಳ್ಯದ ಎಪಿಎಂಸಿ ಮಾರುಕಟ್ಟೆಯ ಎಲ್ಲಾ ಅಂಗಡಿ ಮಳಿಗೆಗಳನ್ನು ಬಂದ್ ಮಾಡಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲು ಅಲ್ಲಿನ ವರ್ತಕರು ನಿರ್ಧರಿಸಿದ್ದಾರೆ. ಬೀದಿ ದೀಪ ವ್ಯಾಪಾರಿಗಳು, ಅಂಗಡಿ ಮುಂಗಟ್ಟುಗಳು ಪರಿಸ್ಥಿತಿ ಅವಲೋಕಿಸಿ ನಿರ್ಧರಿಸುವುದಾಗಿ ತಿಳಿಸಿದ್ದಾರೆ.

ನೈತಿಕ ಬೆಂಬಲ: ಈಗಾಗಲೇ ಕೋವಿಡ್-19 ಪರಿಸ್ಥಿತಿಯಿಂದಾಗಿ ವ್ಯಾಪಾರವಿಲ್ಲದೇ ತತ್ತರಿಸಿರುವುದರಿಂದ ನಾವು ಭಾರತ್ ಬಂದ್ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತ ಹೋರಾಟಕ್ಕೆ ನೈತಿಕ ಬೆಂಬಲ ನೀಡುತ್ತೇವೆಯೇ ಹೊರತು, ಹೋಟೆಲ್‍ಗಳನ್ನು ಮುಚ್ಚುವುದಿಲ್ಲ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ. ಮಂಗಳವಾರದ ಬಂದ್‍ಗೆ ಬಾಹ್ಯ ಬೆಂಬಲ ನೀಡುತ್ತೇವೆಯೇ ಹೊರತು, ಆಟೋಗಳ ಸಂಚಾರ ಸ್ಥಗಿತಗೊಳಿಸುವುದಿಲ್ಲ ಎಂದು ಮೈಸೂರಿನ ವಿವಿಧ ಆಟೋ ಚಾಲಕರು, ಮಾಲೀಕರ ಸಂಘಗಳ ಪದಾಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟದ ಬಿ.ಎಸ್.ಪ್ರಶಾಂತ್ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಹೋಟೆಲ್, ಟ್ರಾವೆಲ್ ಏಜೆಂಟ್ಸ್, ಬಸ್, ಕ್ಯಾಬ್, ಪ್ರವಾಸಿ ಮಾರ್ಗ ದರ್ಶಿಗಳು, ಪೆಟ್ರೋಲ್ ಡೀಲರ್‍ಗಳು, ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಸೇರಿದಂತೆ ಹಲವು ಸಂಘಟನೆಗಳು ಭಾರತ್ ಬಂದ್‍ಗೆ ಕೇವಲ ನೈತಿಕ ಬೆಂಬಲ ಸೂಚಿಸಲು ನಿರ್ಧರಿಸಲಾಗಿದೆ ಎಂದರು. ದೇವರಾಜ, ಕೆಆರ್, ಮಂಡಿ, ವಿವಿ ಮಾರುಕಟ್ಟೆ, ಡಿ.ದೇವರಾಜ ಅರಸು ರಸ್ತೆ, ಲ್ಯಾನ್ಸ್‍ಡೌನ್ ಕಟ್ಟಡ, ಕೆಆರ್ ಸರ್ಕಲ್‍ನ ವಿಶ್ವೇಶ್ವರಯ್ಯ ಭವನದ ಅಂಗಡಿ ಮಳಿಗೆದಾರರು ರೈತರ ಹೋರಾಟಕ್ಕೆ ಬಾಹ್ಯ ಬೆಂಬಲ ನೀಡಲಿದ್ದು, ವ್ಯಾಪಾರ-ವಹಿವಾಟನ್ನು ಯಥಾಸ್ಥಿತಿ ಮುಂದುವರೆಸಲು ನಿರ್ಧರಿಸಿದ್ದಾರೆ ಎಂದು ದೇವರಜ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ ಮಹದೇವು ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಎಲ್ಲಾ ಬ್ಯಾಂಕುಗಳು ಎಂದಿನಂತೆ ಕರ್ತವ್ಯ ನಿರ್ವಹಿಸಲಿವೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಮೈಸೂರು ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ತಿಳಿಸಿದ್ದಾರೆ. ಉಳಿದಂತೆ ಡಿಆರ್‍ಸಿ ಸಿನೆಮಾ, ಕಲ್ಯಾಣ ಮಂಟಪ, ಚಿನ್ನಾಭರಣ ಅಂಗಡಿಗಳು, ಪ್ರವಾಸಿ ವಾಹನಗಳು, ಸಾರಿಗೆ ಸಂಸ್ಥೆ ಬಸ್ಸುಗಳು, ಕಾಲೇಜುಗಳು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಮಂಗಳವಾರ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಕೃಷಿ ಉತ್ಪನ್ನಗಳು, ಇನ್ನಿತರ ಸರಕು ಸಾಗಣೆ ಮಾಡುವ ಲಾರಿಗಳನ್ನು ಸ್ಥಗಿತಗೊಳಿಸಿ ಮಂಗಳವಾರದ ರೈತರ ಪ್ರತಿಭಟನೆಯಲ್ಲಿ ಲಾರಿ ಮಾಲೀಕರು ಭಾಗವಹಿಸಲು ನಿರ್ಧರಿಸಿದ್ದಾರೆ ಎಂದು ಮೈಸೂರು ಲಾರಿ ಮಾಲೀಕರ ಸಂಘದ ವಿ. ಕೋದಂಡರಾಮು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಬಸ್ ಸಂಚಾರ ಸ್ಥಗಿತಗೊಳಿಸುವುದಿಲ್ಲ, ಆದರೆ ಪರಿಸ್ಥಿತಿಗನುಗುಣವಾಗಿ ನಿರ್ಧಾರ ಕೈಗೊಳ್ಳುವುದಾಗಿ ಕೆಎಸ್‍ಆರ್‍ಟಿಸಿ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಗರ ಕಾನೂನು-ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎ.ಎನ್. ಪ್ರಕಾಶ್‍ಗೌಡ ನೇತೃತ್ವದಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಭಾರೀ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Translate »