ಬಂದ್ ಯಶಸ್ವಿಗೊಳಿಸಲು ಮೈಸೂರಿನ ಕೆಲ ಸಂಘ ಸಂಸ್ಥೆಗಳ ಪಣ
ಮೈಸೂರು

ಬಂದ್ ಯಶಸ್ವಿಗೊಳಿಸಲು ಮೈಸೂರಿನ ಕೆಲ ಸಂಘ ಸಂಸ್ಥೆಗಳ ಪಣ

December 8, 2020

ಮೈಸೂರು,ಡಿ.7(ಎಂಟಿವೈ)-ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನ ವಿರೋಧಿ ನೀತಿ ಹಾಗೂ ಮಾರಕ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಅಖಿಲ ಭಾರತ ರೈತ ಸಂಘರ್ಷ ಸಮಿತಿ ಮಂಗಳವಾರ (ಡಿ.8) ಕರೆ ನೀಡಿರುವ `ಭಾರತ್ ಬಂದ್’ ಬೆಂಬಲಿಸಿ, ಮೈಸೂರು ಜಿಲ್ಲೆಯನ್ನು ಪೂರ್ಣ ಪ್ರಮಾಣದಲ್ಲಿ ಬಂದ್ ಮಾಡಲು ವಿವಿಧ ಸಂಘಟನೆಗಳ ಮುಖಂ ಡರು ಒಕ್ಕೊರಲಿನಿಂದ ನಿರ್ಣಯ ಕೈಗೊಂಡರು.

ಮೈಸೂರಿನ ಪುರಭವನದ ಆವರಣದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಸೋಮವಾರ ಬೆಳಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಕರ್ನಾ ಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಎಸ್‍ಯು ಸಿಐ, ಕಮ್ಯುನಿಸ್ಟ್ ಪಕ್ಷಗಳು, ದಲಿತ ಸಂಘರ್ಷ ಸಮಿತಿ, ವಿದ್ಯಾರ್ಥಿ ಸಂಘಟನೆ, ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಮೈಸೂರಲ್ಲಿ ಪೂರ್ಣ ಬಂದ್ ಮಾಡಿಸಿ, ಭಾರತ್ ಬಂದ್‍ಗೆ ಬೆಂಬಲ ನೀಡುವ ಮೂಲಕ ಸಂದೇಶ ರವಾನಿಸಲು ನಿರ್ಧರಿಸಿದರು.

ಅಲ್ಲದೆ ಮೈಸೂರಿನ ಪ್ರಮುಖ ರಸ್ತೆಗಳು, ಬಸ್ ನಿಲ್ದಾಣ ಗಳು, ವೃತ್ತಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿ ಸಿವೆ. ನಾಳೆ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಮೈಸೂರು ಪೂರ್ಣ ಬಂದ್‍ಗೆ ಸಂಘ ಸಂಸ್ಥೆಗಳ ಮನವೊಲಿ ಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಪ್ರಗತಿಪರ ಚಿಂತಕ ಪ.ಮಲ್ಲೇಶ್ ಮಾತನಾಡಿ, ಕೇಂದ್ರ ಸರ್ಕಾರ ಬಂಡವಾಳಶಾಹಿಗಳಿಗೆ ಮನ್ನಣೆ ನೀಡುತ್ತಿದೆ. ಆ ಮೂಲಕ ರೈತರು, ಕಾರ್ಮಿಕರು, ದಲಿತರನ್ನು ಶೋಷಿಸುತ್ತಿದೆ. ಕೃಷಿ ಮಸೂದೆಗಳಿಗೆ ತಮಗೆ ಬೇಕಾದಂತೆ ತಿದ್ದುಮಾಡಿ ರೈತರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ. ರೈತರ ವಿರುದ್ದ ನಿರಂಕುಶಮತಿ ಯಾಗಿ ಜಾರಿಗೆ ತಂದಿರುವ ನೂತನ ಮೂರು ಕೃಷಿ ಕಾಯ್ದೆಗಳು ರೈತರ ಪಾಲಿಗೆ ಮರಣಶಾಸನವಾಗಲಿವೆ. ಈ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ದೆಹಲಿಯಲ್ಲಿ ಕಳೆದ 12 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಪ್ರತಿಭಟನಾನಿರತ ರೈತರ ಶಕ್ತಿ ಕುಂದಿಸಲು ಕೇಂದ್ರ ಸರ್ಕಾರ ದೌರ್ಜನ್ಯ ಎಸಗುತ್ತಿದೆ. ಜಲಪಿರಂಗಿ ದಾಳಿ ಮೂಲಕ ಪ್ರತಿಭಟನೆಯಿಂದ ಹಿಂದೆ ಸರಿಸಲು ಸಂಚು ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ನಾಳೆ ಆಖಿಲ ಭಾರತ ಬಂದ್‍ಗೆ ನೀಡಿರುವ ಕರೆಗೆ ಮೈಸೂರಿಗರು ಬೆಂಬಲ ನೀಡಲೇಬೇಕು. ಆ ಹೋರಾಟಕ್ಕೆ ಸಾಥ್ ನೀಡಿ ಮೈಸೂರು ನಗರದ ಕೇಂದ್ರ ಭಾಗದಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರಕ್ಕೆ ರೈತರ ಶಕ್ತಿ ಏನೆಂದು ತೋರಿಸಲಾಗುವುದು ಎಂದು ಎಚ್ಚರಿಸಿದರು.

ನಾಳೆ ಬೆಳಿಗ್ಗೆ 6ಕ್ಕೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ (ಸಬ್ ಅರ್ಬನ್ ಬಸ್ ನಿಲ್ದಾಣ) ಬಂದ್ ಬೆಂಬಲ ಬೆಂಬಲಿಸುವ ಸಂಘಟನೆಗಳ ಪದಾಧಿಕಾರಿಗಳು ಬಂದು ಸೇರಲಿದ್ದಾರೆ. ಬಸ್‍ಗಳು ಸಂಚರಿಸದಂತೆ ತಡೆಯೊಡ್ಡಲಾಗುವುದು. ಎಲ್ಲ ಪ್ರಮುಖ ರಸ್ತೆಗಳಲ್ಲಿಯೂ ಹೋರಾಟಗಾರರು ಮೆರವಣಿಗೆ ನಡೆಸಲಿದ್ದಾರೆ. ಅಂಗಡಿ ಮುಂಗಟ್ಟು ಗಳು, ಹೋಟೆಲ್ ಮಾಲೀಕರು, ವರ್ತಕರ ಮನವೊಲಿಸಿ ಅವರೂ ಬಂದ್‍ಗೆ ಬೆಂಬಲ ಸೂಚಿಸಿ, ಯಶಸ್ವಿಗೊಳಿಸುವಂತೆ ಕೋರುತ್ತೇವೆ ಎಂದರು.

ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಉಗ್ರ ನರಸಿಂಹೇಗೌಡ ಮಾತನಾಡಿ, ರೈತ ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರವೇ ಮಾರಕವಾದ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ರೈತರ ಬೆನ್ನು ಮೂಳೆ ಮುರಿಯಲು ಯತ್ನಿಸಿದೆ. ಇದೊಂದು ಅನಾಗರಿಕ ಸರ್ಕಾರ. ಈ ಕಾಯ್ದೆಗಳು ಜಾರಿಯಾದರೆ ತಿನ್ನುವ ಆಹಾರದ ಬೆಲೆಯನ್ನು ಕಾಪೆರ್Çರೇಟ್ ಕುಳಗಳು ನಿರ್ಧರಿಸುವಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ, ಸಿಪಿಐ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ, ಪತ್ರಕರ್ತ ಜಿ.ಪಿ.ಬಸವರಾಜು, ಎನ್. ವಿಜಯ್‍ಕುಮಾರ್, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ, ಪಿ.ಎಸ್.ಸಂಧ್ಯಾ, ಆಸಿಯಾ ಬೇಗಂ, ದಲಿತ ಸಂಘರ್ಷ ಸಮಿತಿ ಸಂಚಾಲಕ ಶಂಭುಲಿಂಗಸ್ವಾಮಿ, ಮುದ್ದುಕೃಷ್ಣ, ಉಮಾದೇವಿ, ಪೆÇ್ರ.ಶಬ್ಬಿರ್ ಮುಸ್ತಾಫ, ಎನ್.ಎಸ್.ಗೋಪಿನಾಥ್, ಅಭಿರುಚಿ ಗಣೇಶ್, ಜನಾರ್ಧನ್ (ಜನ್ನಿ), ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.

 

Translate »