ಮೈಸೂರು,ಡಿ.2(ಎಂಟಿವೈ)-ಹಿಂದುಳಿದ ವರ್ಗಗಳಲ್ಲೊಂದಾದ ಗಾಣಿಗ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದೆ. ಗಾಣಿಗ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ `ಗಾಣಿಗ ಅಭಿವೃದ್ಧಿ ಪ್ರಾಧಿಕಾರ’ ರಚಿಸಿ, 50 ಕೋಟಿ ರೂ. ಅನುದಾನ ಮೀಸಲಿಡುವಂತೆ ಮೈಸೂರು ಜಿಲ್ಲಾ ಗಾಣಿಗರ ಸಂಘ ಅಧ್ಯಕ್ಷ ಎನ್.ಸಿ.ಉಮೇಶ್ ಒತ್ತಾಯಿಸಿದ್ದಾರೆ.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಗಾಣಿಗ ಜನಾಂಗ 2ಎ ವರ್ಗದಲ್ಲಿ ಸೇರಿದ ಸಣ್ಣ ಸಮುದಾಯ. ಗಾಣಿಗ ಜನಾಂಗ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದೆ. ಪ್ರಸ್ತುತ 2ಎಗೆ ದೊಡ್ಡ ಸಮುದಾಯವನ್ನು ಸೇರಿಸಲಾಗಿದೆ. ನಮ್ಮದು ಸಣ್ಣ ಸಮಾಜ ಎಂದರು. ಪ್ರಾಧಿಕಾರ ರಚಿಸಿದರೆ ಅತಿ ಕಡಿಮೆ ಜನಸಂಖ್ಯೆ ಇರುವ ಗಾಣಿಗ ಸಮುದಾಯ ಅಭಿವೃದ್ಧಿಯಾಗಲಿದೆ. ಪ್ರಾಧಿಕಾರ ರಚನೆಗಾಗಿ ಸರ್ಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಶೀಘ್ರವೇ ಬೃಹತ್ ಸಮಾವೇಶ ನಡೆಸುವುದಾಗಿ ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿರುವ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 98860 28262 ಸಂಪರ್ಕಿಸುವಂತೆ ಕೋರಿದರು. ಮೈಸೂರು ಜಿಲ್ಲಾ ಗಾಣಿಗರ ಸಂಘ ಕಾರ್ಯದರ್ಶಿ ಎನ್.ಟಿ.ಶ್ರೀನಿವಾಸ್, ಸಹ ಕಾರ್ಯದರ್ಶಿ ಎಂ.ಮಹದೇವ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.