ಫೆ.7ರಂದು ಮೈಸೂರು ನಗರ ಬಂದ್‍ಗೆ ಕರೆ
ಮೈಸೂರು

ಫೆ.7ರಂದು ಮೈಸೂರು ನಗರ ಬಂದ್‍ಗೆ ಕರೆ

February 4, 2022

ಮೈಸೂರು,ಫೆ.3(ಪಿಎಂ)- ಗಣರಾಜ್ಯೋತ್ಸವದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಫೋಟೋ ತೆಗೆಸಿದ ಆರೋಪ ಎದುರಿಸುತ್ತಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ, ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಫೆ.7ರಂದು ಮೈಸೂರು ನಗರ ಬಂದ್‍ಗೆ ಕರೆ ನೀಡಿವೆ.

ಅಂದು ಬೆಳಗ್ಗೆ 6ರಿಂದ ಸಂಜೆ 5ರವರೆಗೆ ನಗರದಲ್ಲಿ ಬಂದ್ ಆಚರಣೆಗೆ ಕರೆ ನೀಡಲಾಗಿದೆ. ಈ ಸಂಬಂಧ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಸೇವೆ ಯಿಂದ ವಜಾಗೊಳಿಸಬೇಕು. ಜೊತೆಗೆ ನ್ಯಾಯಾಧೀಶರ ನೇಮಕಾತಿಯಲ್ಲಿ ಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಈ ಬಂದ್‍ಗೆ ಕರೆ ನೀಡಲಾಗಿದೆ ಎಂದು ತಿಳಿಸಿದರು.

ಬಂದ್ ಸಂಬಂಧ ಫೆ.5ರಂದು ಬೆಳಗ್ಗೆ 10.30ಕ್ಕೆ ಪುರ ಭವನ ಆವರಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಗು ವುದು. ಎಲ್ಲಾ ಸ್ತರದ ಜನಪ್ರತಿನಿಧಿಗಳು, ವಿದ್ಯಾರ್ಥಿ ಸಂಘ ಟನೆಗಳು, ಪ್ರಗತಿಪರ ಚಿಂತಕರು, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವ್ಯಾಪಾರಿ ಸಂಘಗಳು ಸೇರಿದಂತೆ ಮೈಸೂ ರಿನ ಸಮಸ್ತ ನಾಗರಿಕರು ಬಂದ್ ಬೆಂಬಲಿಸಬೇಕು. ಜೊತೆಗೆ ಅಂದು ನಗರದಲ್ಲಿ ನಡೆಸಲಿರುವ `ಸಂವಿಧಾನ ಜಾಗೃತಿ ಅಭಿಯಾನದ ಬೃಹತ್ ರ್ಯಾಲಿ’ಯಲ್ಲಿ ಪಾಲ್ಗೊಳ್ಳ ಬೇಕೆಂದು ಕೋರಿದರು. ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಮಾತನಾಡಿ, ಮುಖ್ಯಮಂತ್ರಿಗಳು, ಕಾನೂನು ಸಚಿವರು, ಗೃಹ ಸಚಿವರು ಈ ಘಟನೆ ಬಗ್ಗೆ ಯಾವುದೇ ಹೇಳಿಕೆ ನೀಡುತ್ತಿಲ್ಲ. ಸದರಿ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕಳೆದ 7 ವರ್ಷ ಗಳಲ್ಲಿ ದಲಿತ ಸಮುದಾಯದ ಮೇಲಿನ ದೌರ್ಜನ್ಯ ವ್ಯಾಪಕ ವಾಗುತ್ತಿದೆ. ಬಂದ್‍ಗೆ ಮೈಸೂರಿನ ಪ್ರತಿಯೊಬ್ಬರು ಒಮ್ಮತ ದಿಂದ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಎಸ್‍ಸಿ-ಎಸ್‍ಟಿ ವಕೀಲರ ಸಂಘದ ಅಧ್ಯಕ್ಷ ತಿಮ್ಮಯ್ಯ ಮಾತನಾಡಿ, ನಿರಂತರ ಹೋರಾಟ ನಡೆಸುತ್ತಿದ್ದರೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಸರ್ಕಾರ, ಸದರಿ ನ್ಯಾಯಾಧೀಶರ ವಿರುದ್ಧ ಕ್ರಮ ಜರುಗಿಸುತ್ತೇವೆಂಬ ಸಂದೇಶ ನೀಡಿಲ್ಲ. ಇದು ದುರದೃಷ್ಟಕರ. ನ್ಯಾಯಾಧೀಶರ ವಿಚಾರಣಾ ಕಾಯ್ದೆ 1968 ಮತ್ತು ನ್ಯಾಯಾಧೀಶರ ವಿಚಾರಣೆ ಅಧಿನಿಯಮ 1989ರ ನಿಯಮಗಳ ಅನುಸಾರ `ಅಸಮರ್ಥನೆ ಮತ್ತು ಅನುಚಿತ ವರ್ತನೆ’ ಆಧಾರದಲ್ಲಿ ಸದರಿ ನ್ಯಾಯಾಧೀಶರನ್ನು ಹುದ್ದೆಯಿಂದ ವಜಾಗೊಳಿಸಲು ಅವಕಾಶವಿದೆ. ಆದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್.ಭಾಸ್ಕರ್, ವಕೀಲ ಎ.ಆರ್.ಕಾಂತರಾಜು, ಮುಖಂಡರಾದ ಚಿಕ್ಕ ಅನ್ನದಾನಿ, ದ್ಯಾವಪ್ಪನಾಯಕ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »