ಮೈಸೂರಲ್ಲಿ ಗ್ಯಾಸ್ ಪೈಪ್‍ಲೈನ್ ಯೋಜನೆ ಮತ್ತಷ್ಟು ವಿಳಂಬ
ಮೈಸೂರು

ಮೈಸೂರಲ್ಲಿ ಗ್ಯಾಸ್ ಪೈಪ್‍ಲೈನ್ ಯೋಜನೆ ಮತ್ತಷ್ಟು ವಿಳಂಬ

February 4, 2022

ಮೈಸೂರು, ಫೆ.3(ಆರ್‍ಕೆ)-ಸಂಸದ, ಶಾಸಕರು, ಕೆಲ ಕಾರ್ಪೊರೇಟರ್‍ಗಳ ನಡುವಿನ ಜಟಾಪಟಿಯಿಂ ದಾಗಿ ಮೈಸೂರು ನಗರದಲ್ಲಿ ಜಾರಿಗೆ ತರಲುದ್ದೇಶಿಸಿ ರುವ ಗ್ಯಾಸ್ ಪೈಪ್‍ಲೈನ್ ಅಳವಡಿಸುವ ಮಹತ್ವದ ಯೋಜನೆ ಜಾರಿ ಮತ್ತಷ್ಟು ವಿಳಂಬವಾಗಬಹುದು.

ಜನವರಿ 27ರಂದು ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಿ ಯೋಜ ನೆಗೆ ಅನುಮೋದನೆ ದೊರೆಯಬೇಕಿತ್ತು. ಮೇಯರ್ ಸುನಂದಾ ಪಾಲನೇತ್ರ ಅವರ ಕಡೇ ಸಭೆಯಾಗಿದ್ದ ಅಂದು ಬಿಜೆಪಿ ಸೇರಿದಂತೆ ಬಹುತೇಕ ಕಾರ್ಪೊ ರೇಟರ್‍ಗಳು ಗೈರು ಹಾಜರಾದ ಕಾರಣ ಕೋರಂ ಅಭಾವದಿಂದಾಗಿ ಕೌನ್ಸಿಲ್ ಸಭೆ ನಡೆಯಲಿಲ್ಲ.

ಜನವರಿ 23ರಂದು ಮೇಯರ್ ಅಧಿಕಾರಾವಧಿ ಅಂತ್ಯಗೊಳ್ಳುವುದರಿಂದ ಈ ತಿಂಗಳಲ್ಲಿ ಪಾಲಿಕೆ ಕೌನ್ಸಿಲ್ ಸಭೆ ನಡೆಯುವುದಿಲ್ಲ. ಸರ್ಕಾರ ಕ್ಯಾಟಗರಿ ನಿಗದಿ ಗೊಳಿಸಿ ಹೊಸ ಮೇಯರ್, ಉಪ ಮೇಯರ್ ಚುನಾ ವಣೆ ನಡೆಯುವವರೆಗೆ ಸಭೆ ಆಯೋಜಿಸಲಾಗುವು ದಿಲ್ಲವಾದ್ದರಿಂದ ಉದ್ದೇಶಿತ ಗ್ಯಾಸ್ ಪೈಪ್‍ಲೈನ್ ಅಳವಡಿ ಸುವ ಕೇಂದ್ರ ಪುರಸ್ಕøತ ಯೋಜನೆ ಮರೀಚಿಕೆಯೇ ಸರಿ.

ಹೊಸ ಮೇಯರ್ ಆಯ್ಕೆಯಾಗಿ ಸ್ಥಾಯಿ ಸಮಿತಿ ಗಳಿಗೆ ನೂತನ ಪದಾಧಿಕಾರಿಗಳು ಬಂದು ಅವರ ಮೊದಲ ಕೌನ್ಸಿಲ್ ಸಭೆ ನಿಗದಿ ಮಾಡುವವರೆಗೆ ಇನ್ನೂ ಕನಿಷ್ಠ ಒಂದೂವರೆ ತಿಂಗಳಾದರೂ ಬೇಕಾಗುತ್ತದೆ.

ಈ ಹಿಂದೆ ಜನವರಿ 17ರಂದು ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಪೈಪ್‍ಲೈನ್ ಅಳವಡಿಕೆಯನ್ನು ವಿಶೇಷ ವಿಷಯವನ್ನಾಗಿ ಸಭೆ ಅಂತ್ಯಗೊಳ್ಳುವ ವೇಳೆ ತರಾ ತುರಿಯಲ್ಲಿ ತಂದಿದ್ದ ಕಾರಣ ಕಾರ್ಪೊರೇಟರ್‍ಗಳು ಆ ಕುರಿತು ಚರ್ಚಿಸಲು ನಿರಾಕರಿಸಿದ್ದರು. ಆದರೆ ಕೇಂದ್ರ ಸರ್ಕಾರದಿಂದ ಗ್ಯಾಸ್ ಪೈಪ್‍ಲೈನ್ ಅಳವಡಿ ಸಲು ಯೋಜನೆ ಒಪ್ಪಿಸಿದ್ದ ಕಂಪನಿಯವರು ಅಷ್ಟರ ಲ್ಲಾಗಲೇ ಮನೆ ಮನೆ ಸಮೀಕ್ಷೆ ಆರಂಭಿಸಿ ಕೆಲವೆಡೆ ರಸ್ತೆ ಅಗೆಯುವ ಕೆಲಸಕ್ಕೆ ಕೈಹಾಕಿದ್ದರು.

ಇದರಿಂದ ರೊಚ್ಚಿಗೆದ್ದ ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್ ಅವರು ತೀವ್ರ ವಿರೋಧ ವ್ಯಕ್ತಪಡಿ ಸಿದ್ದರಿಂದ ಸಿಟ್ಟಿಗೆದ್ದ ಸಂಸದ ಪ್ರತಾಪ್ ಸಿಂಹ, ಸ್ವಪಕ್ಷದ ಶಾಸಕರ ವಿರುದ್ಧ ತಿರುಗಿ ಬಿದ್ದು, ಅವರ ನಡುವೆ ಜಟಾಪಟಿ ಆರಂಭವಾಗಿದ್ದರಿಂದ ಈ ಯೋಜನೆ ವಿವಾದಕ್ಕೆ ಸಿಲುಕಿದೆ. ನಂತರ ಜನವರಿ 27ರಂದು ಮುಂದುವರಿದ ಕೌನ್ಸಿಲ್ ಸಭೆ ಕರೆಯಲಾಗಿತ್ತಾದರೂ, ಸದಸ್ಯರು ಹಾಜರಾಗದ ಹಿನ್ನೆಲೆಯಲ್ಲಿ ಕೋರಂ ಅಭಾವ ಉಂಟಾಗಿ, ಅಂದಿನ ಸಭೆಯೇ ನಡೆಯದ ಕಾರಣ ಮನೆ ಮನೆಗೆ ಗ್ಯಾಸ್ ಪೈಪ್‍ಲೈನ್ ಅಳವಡಿಸುವ ಯೋಜನೆ ಕುರಿತು ಚರ್ಚೆಯೇ ಆಗದೆ ನೆಲ ಕಚ್ಚಿತು.

ಅಂದು ಸಭೆ ನಡೆದಿದ್ದರೆ ಈ ಯೋಜನೆ ಬಗ್ಗೆ ಚರ್ಚೆಯಾಗಿ ಅನುಮೋದನೆ ಸಿಗುವ ಸಾಧ್ಯತೆ ಇತ್ತು. ಆತುರಾತುರವಾಗಿ ಯೋಜನೆಗೆ ಅನುಮೋದನೆ ಸಿಗ ಬಹುದೆಂಬ ಕಾರಣದಿಂದಲೇ ಬಹುತೇಕ ಬಿಜೆಪಿ ಸದಸ್ಯರೇ ಸಭೆಯಿಂದ ದೂರ ಉಳಿದ ಕಾರಣ, ಅಸಮಾ ಧಾನಗೊಂಡ ಮೇಯರ್ ಸುನಂದಾ ಪಾಲನೇತ್ರ ಅವರು ಸಭೆಯನ್ನು ರದ್ದುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಯೋಜನೆಗೆ ಹಸಿರು ನಿಶಾನೆ ಸಿಗುತ್ತದೆಂದು ನಿರೀ ಕ್ಷಿಸಿದ್ದ ಸಂಸದ ಪ್ರತಾಪ್ ಸಿಂಹ, ಸಭೆಯೇ ನಡೆಯದಿದ್ದ ರಿಂದ ಶಾಸಕರು, ಕಾರ್ಪೊರೇಟರ್‍ಗಳ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಶಾಸಕ ಎಲ್.ನಾಗೇಂದ್ರ ಅವರು ಯೋಜನೆ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿ ಸಿದ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ನಾಗೇಂದ್ರ ನಡುವೆ ಮಾತಿನ ಚಕಮಕಿ ತಾರಕಕ್ಕೇರಿತ್ತು.

ಅದಕ್ಕೆ ಮೈಸೂರಿನ ಕೆಲ ಜನಪ್ರತಿನಿಧಿಗಳು, ನಾಗರಿಕರು ಯೋಜನೆ ಪರ-ವಿರುದ್ಧ ಅಭಿಪ್ರಾಯಗಳನ್ನು ವ್ಯಕ್ತಪಡಿ ಸಿದ್ದರಾದರೂ, ಕೌನ್ಸಿಲ್ ಸಭೆ ಅನುಮೋದನೆ ನೀಡದೇ ಗ್ಯಾಸ್ ಪೈಪ್‍ಲೈನ್ ಕಾಮಗಾರಿ ನಡೆಸಲಾಗದು. ಒಟ್ಟಾರೆ ಹೊಸ ಮೇಯರ್ ಆಯ್ಕೆಯಾಗುವವರೆಗೆ ಈ ಯೋಜನೆ ಜಾರಿ ಪ್ರಕ್ರಿಯೆ ಸ್ಥಗಿತವಾಗುವುದು ಅನಿವಾರ್ಯ.

Translate »