ಹಠ ಬಿಟ್ಟು ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದುಪಡಿಸಿ
ಮೈಸೂರು

ಹಠ ಬಿಟ್ಟು ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದುಪಡಿಸಿ

July 5, 2021

ಮೈಸೂರು,ಜು.4(ಪಿಎಂ)-ಹಠ ಬಿಟ್ಟು ಎಸ್‍ಎಸ್ ಎಲ್‍ಸಿ ಪರೀಕ್ಷೆ ರದ್ದುಪಡಿಸಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರನ್ನು ಆಗ್ರಹಿಸಿರುವ ವಿಧಾನಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್, ಇಲ್ಲವಾದರೆ ಕೋವಿಡ್ ಹಿನ್ನೆಲೆ ಯಲ್ಲಿ ಮುಂದೆ ಎದುರಾಗುವ ಅನಾಹುತಗಳಿಗೆ ನೀವೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನು ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್, ಡೆಲ್ಟಾ ಹರಡುತ್ತಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಮೂರನೇ ಅಲೆ ಆತಂಕವಿದೆ. ಅಲ್ಲದೆ, ಸರಿಯಾಗಿ ಪಾಠ-ಪ್ರವಚನ ನಡೆಯದೇ ಮಕ್ಕಳು ಪರೀಕ್ಷೆಗೆ ಸಿದ್ಧರೂ ಆಗಿಲ್ಲ. ಪರೀಕ್ಷೆಯಲ್ಲಿ ಅನುತ್ತೀರ್ಣ ರಾದ ದುರ್ಬಲ ಮನಸ್ಥಿತಿಯ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳು ನಮ್ಮ ಮುಂದಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ಪಾವತಿ ಸದೇ ಪರೀಕ್ಷಾ ಪ್ರವೇಶ ಪತ್ರ ಕೊಡುವುದಿಲ್ಲ ಎಂದು ಒತ್ತಡ ಹೇರಲಾಗುತ್ತಿವೆ. ಈ ರೀತಿಯ ಅನೇಕ ಅಂಶಗಳ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಪಡಿಸುವುದೇ ಸೂಕ್ತ ಎಂದು ಪ್ರತಿಪಾದಿಸಿದರು.

ಅಕ್ಷರ-ಆರೋಗ್ಯ ಉತ್ತಮವಾಗಿರುವ ದೇಶದಲ್ಲಿ ಆಡಳಿತ ಮತ್ತು ಅಭಿವೃದ್ಧಿಯೂ ಉತ್ತಮವಾಗಿ ಇರುತ್ತದೆ. ಶಿಕ್ಷಣ ಇಲಾಖೆ ಎಂದರೆ, ಪಾಠ-ಪ್ರವಚನ ವಲ್ಲ ಮತ್ತು ಪರೀಕ್ಷೆ ಮಾತ್ರವಲ್ಲ. ಇಲ್ಲಿ ಮಗುವಿನ ಆರೋಗ್ಯ ಕಾಪಾಡುವ ಜೊತೆಗೆ ಸನ್ನಡೆ ರೂಪಿಸು ವುದು ಮುಖ್ಯವಾಗುತ್ತದೆ. ಆ ನಂತರ ಶಿಕ್ಷಣ ಪ್ರಾಮು ಖ್ಯತೆ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.

ಪಿಯುಸಿ ಮಕ್ಕಳಿಗಿಂತ ಇವರು ಚಿಕ್ಕವರು: ಸಿಬಿ ಎಸ್‍ಇ ಪಠ್ಯಕ್ರಮ ಸಂಬಂಧ ಎನ್‍ಸಿಆರ್‍ಟಿ (ನ್ಯಾಷ ನಲ್ ಕೌನ್ಸಿಲ್ ಆಫ್ ಎಜುಕೇಷನ್ ರೀಸರ್ಚ್ ಅಂಡ್ ಟ್ರೇನಿಂಗ್) ದ್ವಿತೀಯ ಪಿಯುಸಿ ಪರೀಕ್ಷೆ ಬೇಡವೆಂದು ಸಲಹೆ ನೀಡಿತು. ಅಂತೆಯೇ ರಾಜ್ಯದಲ್ಲೂ ಇದೇ ಕ್ರಮ ವಹಿಸಲಾಗಿದೆ. ಆದರೆ ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವ ಸಂಬಂಧ ಡಿಎಸ್‍ಇ ಆರ್‍ಟಿ (ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ), ಆರೋಗ್ಯ ಇಲಾಖೆ ಅಭಿಪ್ರಾಯ ಪಡೆಯಲಾಗಿದೆಯೇ? ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದುಪಡಿಸಿ, ಅವರಿಗಿಂತ 2 ವರ್ಷ ಚಿಕ್ಕ ಮಕ್ಕಳಿಗೆ (ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ) ಪರೀಕ್ಷೆ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದರು.

ಈ ಮಕ್ಕಳಿಗೆ ಸದ್ಯಕ್ಕೆ ಲಸಿಕೆಯೂ ಇಲ್ಲ: ಕೋವಿಡ್ ಮತ್ತು ಡೆಲ್ಟಾ ಹರಡುತ್ತಿದೆ ಎಂಬ ಕಾರಣಕ್ಕೆ ಹಲವು ರಾಜ್ಯಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕೈಬಿಡಲಾಗಿದೆ. ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಲಸಿಕೆ ನೀಡುವುದೂ ಸದ್ಯಕ್ಕೆ ಇಲ್ಲವಾಗಿದೆ. ಮೈಸೂರು ಜಿಲ್ಲೆಯ 39 ಸಾವಿರ ಮಕ್ಕಳು ಸೇರಿದಂತೆ ರಾಜ್ಯದಲ್ಲಿ ಎಂಟೂವರೆ ಲಕ್ಷ ಮಕ್ಕಳು ಪರೀಕ್ಷೆ ಬರೆಯಬೇಕೆಂದರೆ, ಈ ಮಕ್ಕಳು ಸೇರಿದಂತೆ ಪರೀಕ್ಷಾ ಕರ್ತವ್ಯ ನಿರ್ವಹಿಸುವ ಬೋಧ ಕರು, ಬೋಧಕೇತರರು ಸೇರಿದಂತೆ 32 ಲಕ್ಷ ಜನರು ಗುಂಪುಗೂಡುವ ಅನಿವಾರ್ಯತೆ ಸೃಷ್ಟಿಯಾಗಲಿದೆ. ಕೋವಿಡ್ ಆತಂಕದ ನಡುವೆ ಪರೀಕ್ಷೆ ನಡೆಸಿದರೆ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾ ಗಲಿದೆ ಎಂದರು. ಮೊನ್ನೆಯಷ್ಟೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರಾಜ್ಯದಲ್ಲಿ ಡೆಲ್ಟಾ ಪ್ರಕರಣಗಳು ಇವೆ. ಆದರೆ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಅಂದರೆ ಸೋಂಕನ್ನು ಕಟ್ಟಿ ಹಾಕಲಾಗುತ್ತದೆಯೇ? ಎಂದು ಪ್ರಶ್ನಿಸಿದರಲ್ಲದೆ, 3ನೇ ಅಲೆ ಮಕ್ಕಳನ್ನೇ ಗುರಿಯಾಗಿ ಸಲಿದೆ ಎನ್ನಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಪರೀಕ್ಷೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಎಂಟೂವರೆ ಲಕ್ಷ ಮಕ್ಕಳ ಪೈಕಿ ಎಷ್ಟು ಮಕ್ಕಳು ಪರೀಕ್ಷೆ ಬರೆಯಲು ತಯಾರಿದ್ದಾರೆ? ಕೇವಲ ಶೇ.40 ರಷ್ಟು ಆನ್‍ಲೈನ್‍ನಲ್ಲಿ ಪಾಠ-ಪ್ರವಚನ ಮಾಡಿ, ಪರೀಕ್ಷೆ ಮಾಡುವುದು ಎಷ್ಟು ಸರಿ? ಮೈಸೂರಿನ ಕೀರ್ತನಾ ಎಂಬ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿ ಆನ್‍ಲೈನ್ ಪಾಠ ಕೇಳಲು ಟ್ಯಾಬ್ ಖರೀದಿಸಲು ಸೊಪ್ಪು ಮಾರಾಟ ಮಾಡುತ್ತಿದ್ದನ್ನು ಗಮನಿಸಿ, ಮುಖ್ಯಮಂತ್ರಿಗಳ ಪರವಾಗಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿಯವರು ಆಕೆಗೆ ಟ್ಯಾಬ್ ಕೊಡಿಸಿರು ವುದು ಮಾಧ್ಯಮದ ಮೂಲಕ ತಿಳಿಯಿತು ಎಂದು ಮಹದೇವಸ್ವಾಮಿಯವರಿಗೆ ಇದಕ್ಕಾಗಿ ಧನ್ಯವಾದ ತಿಳಿಸಿದರಲ್ಲದೆ, ಎಷ್ಟು ವಿದ್ಯಾರ್ಥಿಗಳಿಗೆ ಹೀಗೆ ಟ್ಯಾಬ್ ಕೊಡಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಮಕ್ಕಳಿಗೆ ಯಾವುದೇ ಸೌಲಭ್ಯ ಕೊಟ್ಟಿಲ್ಲ. ಡಿಎಸ್‍ಇಆರ್‍ಟಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪರೀಕ್ಷೆ ಸಂಬಂಧ ಯಾವ ಅಭಿಪ್ರಾಯ ಮಂಡಿಸಿವೆ ಎಂದು ಗೊತ್ತಿಲ್ಲ. ಪರೀಕ್ಷೆಯಿಂದ ಅನಾಹುತವಾದರೂ ಈ ಎಲ್ಲಾ ವ್ಯವಸ್ಥೆಗಳು ಜವಾಬ್ದಾರರಾಗ ಬೇಕಾಗುತ್ತದೆ. ಮಕ್ಕಳು ಶಾಲೆಗೂ ಹೋಗಿಲ್ಲ. ಆನ್‍ಲೈನ್ ತರಗತಿಯೂ ಸಂಪೂರ್ಣ ಯಶಸ್ವಿಯಾಗಿ ನಡೆದಿಲ್ಲ. ಅಲ್ಲದೆ, ಒಂದೇ ದಿನಕ್ಕೆ ಮೂರು ವಿಷಯಗಳ ಪರೀಕ್ಷೆ ನಡೆಸಿದರೆ ಮಕ್ಕಳು ಒತ್ತಡ ತಡೆಯುವುದು ಹೇಗೆ? ಎಂದು ಆತಂಕ ವ್ಯಕ್ತಪಡಿಸಿದರು.

Translate »