170 ಕಾರ್ಮಿಕರ ಖಾಯಂ ತಾತ್ಕಾಲಿಕ ಪಟ್ಟಿ ರದ್ದು
ಮೈಸೂರು

170 ಕಾರ್ಮಿಕರ ಖಾಯಂ ತಾತ್ಕಾಲಿಕ ಪಟ್ಟಿ ರದ್ದು

March 7, 2023

ಮೈಸೂರು, ಮಾ.6(ಆರ್‍ಕೆ)- ಮೈಸೂರು ನಗರ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರನ್ನು ಖಾಯಂ ಗೊಳಿಸುವಂತೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ 170 ಕಾರ್ಮಿಕರ ಖಾಯಮಾತಿ ತಾತ್ಕಾಲಿಕ ಪಟ್ಟಿಯನ್ನು ಸೋಮವಾರ ರದ್ದು ಪಡಿಸಲಾಗಿದೆ. ನೇರಪಾವತಿ ಹಾಗೂ ಹೆಚ್ಚುವರಿ ಕಾರ್ಮಿಕರು ಸೇರಿ ಒಟ್ಟು 1680 ಪೌರಕಾರ್ಮಿಕರನ್ನೂ ಖಾಯಂಗೊಳಿಸಬೇಕೆಂಬ ಬೇಡಿಕೆಯೊಂದಿಗೆ ನಗರ ಪಾಲಿಕೆ ಮುಂಭಾಗ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ತಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಮೇಯರ್ ಶಿವಕುಮಾರ್ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದ್ದಲ್ಲದೆ ಮಾತುಕತೆಗೆ ಆಹ್ವಾನಿಸಿ ದ್ದರು. ಈ ವೇಳೆ ಪ್ರತಿಭಟನಾನಿರತ ಎಲ್ಲಾ ಪೌರಕಾರ್ಮಿಕರೂ ಮೇಯರ್ ಕೊಠಡಿಗೆ ದೌಡಾಯಿಸಿದ್ದರಿಂದ ಒಂದು ರೀತಿಯಲ್ಲಿ ಮುತ್ತಿಗೆ ಹಾಕಿದಂತಹ ವಾತಾವರಣ ಸೃಷ್ಟಿಯಾಯಿತು.

ಮಾಜಿ ಮೇಯರ್‍ಗಳಾದ ನಾರಾಯಣ, ಪುರುಷೋತ್ತಮ್ ನೇತೃತ್ವದಲ್ಲಿ ಪೌರಕಾರ್ಮಿಕರು, ಮೇಯರ್ ಶಿವಕುಮಾರ್ ಹಾಗೂ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ ಅವರನ್ನು ಭೇಟಿ ಮಾಡಿ, ಚರ್ಚಿ ಸಿದರು. 170 ಮಂದಿಗೆ ಮಾತ್ರ ಖಾಯಂ ಮಾಡುತ್ತಿರುವ ಕ್ರಮ ಸರಿಯಲ್ಲ. 20-25 ವರ್ಷಗಳಿಂದ ಪಾಲಿಕೆಯಲ್ಲಿ 1680 ಮಂದಿ ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಅವರಲ್ಲಿ ಕೆಲವರು ನಿವೃತ್ತಿ ಅಂಚಿನಲ್ಲಿದ್ದಾರೆ. ಅಂತಹ ಹಿರಿಯರನ್ನೂ ಕಡೆಗಾಣಿಸಿ ಕೇವಲ 170 ಮಂದಿಯನ್ನು ಖಾಯಂ ಮಾಡಲು ಹೊರಡಿಸಿರುವ ತಾತ್ಕಾಲಿಕ ಪಟ್ಟಿ ಅವೈಜ್ಞಾನಿಕವಾಗಿದ್ದು, ಅದರಿಂದ ಉಳಿದೆಲ್ಲಾ ಕಾರ್ಮಿಕರಿಗೆ ಅನ್ಯಾಯವಾಗುತ್ತದೆ ಎಂದು ನಾರಾಯಣ್ ವಾದಿಸಿದರು.

ಸಾಮಾಜಿಕ ನ್ಯಾಯದಡಿ ಮಾನವೀಯತೆ ಆಧಾರದಲ್ಲಿ ಎಲ್ಲರನ್ನೂ ಖಾಯಂಗೊಳಿಸಿ ನ್ಯಾಯ ಒದಗಿಸಬೇಕು. ಆವರೆಗೆ ಸದ್ಯ ಪ್ರಕಟಿಸಿರುವ 170 ಮಂದಿಯ ಪಟ್ಟಿಯನ್ನು ರದ್ದುಪಡಿಸಬೇಕು. ತಾರತಮ್ಯ ಮಾಡದೆ ಎಲ್ಲಾ ಕಾರ್ಮಿಕರನ್ನೂ ಖಾಯಂ ಮಾಡಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು. ಈ ವೇಳೆ ಏಕಕಾಲದಲ್ಲಿ ಹಲವು ಕಾರ್ಮಿಕರು ಮಾತನಾಡಿದ್ದರಿಂದ ಕೆಲಕಾಲ ಗದ್ದಲ ಉಂಟಾಗಿತ್ತು.

ಈ ವೇಳೆ ಮೇಯರ್ ಶಿವಕುಮಾರ್ ಮಾತನಾಡಿ, ನಗರದ ಎಲ್ಲಾ 65 ವಾರ್ಡ್‍ಗಳಲ್ಲೂ ಸ್ವಚ್ಛತಾ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ನಾವು ಅತ್ಯಂತ ಪ್ರೀತಿ, ಗೌರವದಿಂದ ಕಾಣುತ್ತೇವೆ. ನಿಮ್ಮ ಸೇವೆ ಅತ್ಯಂತ ಮಹತ್ವಾದ್ದಾಗಿದೆ. ಪ್ರತಿಯೊಬ್ಬ ನಾಗರಿಕನೂ ನಿಮ್ಮ ಸೇವೆಯನ್ನು ಸ್ಮರಿಸಿಕೊಳ್ಳಲೇಬೇಕು. ಆ ಕಾರಣದಿಂದಲೇ ಪೌರಕಾರ್ಮಿಕರಿಗೆ ಉಪಹಾರ, ಸಮವಸ್ತ್ರ, ಸುರಕ್ಷತಾ ಸಾಮಗ್ರಿ ಕಲ್ಪಿಸಿಕೊಡಲಾಗಿದೆ. ಅವರ ಆರೋಗ್ಯ, ವಸತಿ, ಕುಟುಂಬದವರ ಯೋಗಕ್ಷೇಮ, ಮಕ್ಕಳ ಶಿಕ್ಷಣಕ್ಕೂ ಪಾಲಿಕೆ ನೆರವಾಗಿದೆ ಎಂದು ಹೇಳಿದರು.

ಪೌರಕಾರ್ಮಿಕರ ಖಾಯಂಗೊಳಿಸಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆ. ಇದನ್ನು ಮನಗಂಡ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಮೈಸೂರು ಮಹಾನಗರ ಪಾಲಿಕೆಯ ಒಟ್ಟು 205 ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿ ಸಲು ಒಪ್ಪಿ, ಕೆಲ ಮಾರ್ಗಸೂಚಿಯನ್ವಯ ಸೇವೆ ಖಾಯಂಗೋಳಿಸುವಂತೆ ಸೂಚಿಸಿತ್ತು. ಅದರನ್ವಯ ಸೇವಾ ದಾಖಲಾತಿಗಳು ಸಮಂಜಸವಾಗಿದ್ದ 170 ಮಂದಿಯ ಖಾಯಂ ಮಾತಿಗೆ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿದೆ ಇದರಲ್ಲಿ ಏನೇ ಬದಲಾವಣೆ ಯಾಗಬೇಕಿದ್ದರೂ ಸರ್ಕಾರದಿಂದಲೇ ಆಗಬೇಕು. ಪಾಲಿಕೆ ಹಂತದಲ್ಲಿ ನಿರ್ಧಾರ ಕೈಗೊಳ್ಳಲಾಗದು ಎಂದು ಶಿವಕುಮಾರ್ ಪ್ರತಿಭಟನಾಕಾರರಿಗೆ ಸ್ಪಷ್ಟನೆ ನೀಡಿದರು.

ಆದರೆ ಇದನ್ನು ಒಪ್ಪದ ಕಾರ್ಮಿಕರು, ನಾವೆಲ್ಲಾ ಒಂದೇ. 170 ಜನರ ಸೇವೆಯನ್ನು ಮಾತ್ರ ಖಾಯಂ ಮಾಡಿದರೆ ಉಳಿದವರಿಗೆಲ್ಲಾ ಅನ್ಯಾಯವಾಗುತ್ತದೆ. ನಿವೃತ್ತಿ ಅಂಚಿನಲ್ಲಿರುವ ಕಾರ್ಮಿಕರ ಇಷ್ಟು ವರ್ಷದ ಸೇವೆ ವ್ಯರ್ಥವಾಗುತ್ತದೆ. ಯಾವ ಕಾರಣಕೂ ಅವೈಜ್ಞಾನಿಕ ಕ್ರಮ ಕೈಗೊಳ್ಳಬೇಡಿ. ಉಳಿದ 1680 ಕಾರ್ಮಿಕರ ಸೇವೆಯನ್ನೂ ಖಾಯಂಗೊಳಿಸಿ. ಇಲ್ಲವೇ ಈಗ ಪ್ರಕಟಿಸಿರುವ 170 ಜನರ ತಾತ್ಕಾಲಿಕ ಪಟ್ಟಿಯನ್ನೂ ರದ್ದು ಮಾಡಿ ಒಟ್ಟಿಗೆ ಕ್ರಮ ವಹಿಸಿ ಎಂದು ಬಿಗಿಪಟ್ಟು ಹಿಡಿದರು.

ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆಯಲ್ಲಿ ಮೇಯರ್ ಶಿವಕುಮಾರ್ ಹಾಗೂ ಪಾಲಿಕೆ ಆಯುಕ್ತ ಜಿ.ಲಕ್ಷ್ಮಿಕಾಂತ ರೆಡ್ಡಿ ಸರ್ಕಾರದ ನಿಯಮಾವಳಿ ಬಗ್ಗೆ ತಿಳಿಹೇಳಿ ಮನವೊಲಿಸಲು ಯತ್ನಿಸಿದರಾದರೂ ಪೌರಕಾರ್ಮಿಕರು ತಮ್ಮ ಪಟ್ಟು ಸಡಿಲಿಸಲಿಲ್ಲ. ನಮ್ಮ ಬೇಡಿಕೆಯಂತೆ ಸೂಕ್ತ ನಿರ್ಧಾರ ಪ್ರಕಟಿಸುವವರೆಗೂ ಇಲ್ಲಿಂದ ಹೊರಹೋಗುವುದಿಲ್ಲ ಎಂದರು. ಆಗ ಮೇಯರ್ ಶಿವಕುಮಾರ್ ಅನಿವಾರ್ಯವಾಗಿ 170 ಪೌರಕಾರ್ಮಿಕರ ಸೇವೆ ಖಾಯಂಗೊಳಿಸಿದ ತಾತ್ಕಾಲಿಕ ಪಟ್ಟಿಯನ್ನು ರದ್ದು ಗೊಳಿಸಲು ಆಯುಕ್ತರಿಗೆ ಸೂಚನೆ ನೀಡಿದರು. ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳದಿ ದ್ದರೆ ಸ್ವಚ್ಛತಾ ಕಾರ್ಯ ಬಹಿಷ್ಕರಿಸಿ, ಉಗ್ರ ಸ್ವರೂಪದ ಪ್ರತಿಭಟನೆ ಮಾಡುವುದಾಗಿ ಪೌರಕಾರ್ಮಿಕರು ಎಚ್ಚರಿಸಿದ್ದರಿಂದ, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗ ಬೇಕು. ನಾಳೆ (ಮಾ.7) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‍ರವರು ಮೈಸೂರಿಗೆ ಬರುತ್ತಿದ್ದು, ನಿಮ್ಮ ಬೇಡಿಕೆಯನ್ನು ಅವರ ಮುಂದಿಟ್ಟು, ಪರಿಹಾರೋಪಾಯಕ್ಕೆ ಮನವಿ ಮಾಡುತ್ತೇವೆ. ಸರ್ಕಾರ ಕ್ರಮ ಕೈಗೊಳ್ಳುವವರೆಗೆ ತಾವು ಎಂದಿನಂತೆ ಸೇವೆ ಮುಂದುವರೆಸುವಂತೆ ಮೇಯರ್ ಮನವಿ ಮಾಡಿದ್ದರಿಂದ ಪೌರಕಾರ್ಮಿಕರು ಅಲ್ಲಿಂದ ತೆರಳಿದರು.

Translate »