ಮೈಸೂರಲ್ಲಿ ಕ್ಯಾನ್ಸರ್ ರೋಗಿಗಳಿಗೆ ಆರೈಕಾ ಕೇಂದ್ರ ಕಿದ್ವಾಯಿಗೆ ೧೮ ಎಕರೆ ಭೂಮಿ ನೀಡಲು ಕಂದಾಯ ಇಲಾಖೆಗೆ ಪ್ರಸ್ತಾವನೆ
ಮೈಸೂರು

ಮೈಸೂರಲ್ಲಿ ಕ್ಯಾನ್ಸರ್ ರೋಗಿಗಳಿಗೆ ಆರೈಕಾ ಕೇಂದ್ರ ಕಿದ್ವಾಯಿಗೆ ೧೮ ಎಕರೆ ಭೂಮಿ ನೀಡಲು ಕಂದಾಯ ಇಲಾಖೆಗೆ ಪ್ರಸ್ತಾವನೆ

May 3, 2022

ಮೈಸೂರು, ಮೇ ೨(ಆರ್‌ಕೆ)- ಕ್ಯಾನ್ಸರ್ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಗಾಗಿ ಮೈಸೂರಿನಲ್ಲಿ ಕಿದ್ವಾಯಿ ಸಂಸ್ಥೆಯ ಘಟಕ ಸ್ಥಾಪಿಸಲು ಚಿಂತನೆ ನಡೆದಿದೆ.

ಪ್ರಸ್ತುತ ಕೆಆರ್ ಆಸ್ಪತ್ರೆ ಆವರಣದಲ್ಲಿ ಚಿಕ್ಕದಾಗಿ ನಡೆಯುತ್ತಿರುವ ಕಿದ್ವಾಯಿ ಘಟಕವನ್ನು ಅಗತ್ಯ ಮೂಲ ಸೌಲಭ್ಯದೊಂದಿಗೆ ಪೂರ್ಣ ಪ್ರಮಾಣದಲ್ಲಿ ಚಿಕಿತ್ಸಾ ಮತ್ತು ಆರೈಕೆ ಕೇಂದ್ರ ಸ್ಥಾಪಿಸಲು ಸಂಸದ ಪ್ರತಾಪ್ ಸಿಂಹ ಆಸಕ್ತಿ ತೋರಿದ್ದು, ಈ ಬಗ್ಗೆ ಸಂಸ್ಥೆ ಮುಖ್ಯಸ್ಥರನ್ನು ಭೇಟಿ ಮಾಡಿ ಚರ್ಚಿಸಿದ್ದರು.

ಕೇಂದ್ರ ಸರ್ಕಾರದ ಅನುದಾನದೊಂದಿಗೆ ಬೃಹತ್ ಪ್ರಮಾಣದಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಿ ಈ ಮಾರಕ ರೋಗಕ್ಕೆ ತುತ್ತಾಗಿ ಬದುಕಿನ ಕಡೇ ದಿನಗಳನ್ನು ಎಣ ಸುತ್ತಿರುವ ರೋಗಿಗಳಿಗೆ ಚಿಕಿತ್ಸೆ ಮತ್ತು ಆರೈಕೆ ಮಾಡಲು ಗಿಡ-ಮರಗಳಿರುವ ನೈಸರ್ಗಿಕ ಸ್ಥಳದಲ್ಲಿ ಜಾಗ ಗುರುತಿಸುವಂತೆ ಪ್ರತಾಪ್‌ಸಿಂಹ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು.
ಅದರಂತೆ ಮೈಸೂರು ತಾಲೂಕು, ದಡದಕಲ್ಲಹಳ್ಳಿ ಬಳಿ ೧೮ ಎಕರೆ ಭೂಮಿ ಗುರ್ತಿಸಲಾಗಿದ್ದು, ಕಿದ್ವಾಯಿ ಸಂಸ್ಥೆಗೆ ನೀಡುವ ಬಗ್ಗೆ ಅನುಮೋದನೆ ಕೋರಿ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಭೂಮಿ ಹಸ್ತಾಂತರಿಸಲು ಅನುಮತಿ ನೀಡಿದಲ್ಲಿ ಸಂಸ್ಥೆಯು ಆಸ್ಪತ್ರೆ ನಿರ್ಮಿಸಲು ಮುಂದಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಇದಿನ್ನೂ ಆರಂಭಿಕ ಹಂತವಾಗಿದ್ದು, ಭೂಮಿ ಮಂಜೂರು ಮಾಡಿದ ನಂತರ ವಷ್ಟೇ ಬೆಂಗಳೂರಿನ ಕಿದ್ವಾಯಿ ಸಂಸ್ಥೆಯು ಪ್ರಕ್ರಿಯೆ ಆರಂಭಿಸಲಿದೆ. ಸರ್ಕಾರದ ಅನುಮೋದನೆ ಬಂದ ನಂತರವಷ್ಟೇ ನಾವು ಕಿದ್ವಾಯಿ ಮುಖ್ಯಸ್ಥರೊಂದಿಗೆ ಪತ್ರ ವ್ಯವಹಾರ ನಡೆಸಿ, ಅಗತ್ಯ ನೆರವು ನೀಡುತ್ತೇವೆ ಎಂದು ಅವರು ತಿಳಿಸಿದರು.
ಆರೋಗ್ಯ ತಪಾಸಣೆ ಮಾಡಿ ಕ್ಯಾನ್ಸರ್ ರೋಗ ಪತ್ತೆ ಮಾಡಿ ಆರಂಭಿಕ ಹಂತ ದಲ್ಲಿರುವವರಿಗೆ ಮಾತ್ರ ಕೆಆರ್ ಆಸ್ಪತ್ರೆಯಲ್ಲಿರುವ ಘಟಕದಲ್ಲಿ ಚಿಕಿತ್ಸೆ ನೀಡಬಹು ದಾಗಿದ್ದು, ತೀವ್ರ ಸ್ವರೂಪದ ಕ್ಯಾನ್ಸರ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆ ಅವಲಂಬಿಸ ಬೇಕಾಗಿದೆ. ಅಗತ್ಯ ಮೂಲ ಸೌಲಭ್ಯದೊಂದಿಗೆ ಸರ್ಕಾರದಿಂದಲೇ ಆರೈಕೆ ಮಾಡಲು ಸುಸಜ್ಜಿತ ಕೇಂದ್ರ ಸ್ಥಾಪಿಸಬೇಕೆಂಬ ಉದ್ದೇಶದಿಂದ ಸಂಸದ ಪ್ರತಾಪ್ ಸಿಂಹ ಸರ್ಕಾರದ ಹಂತದಲ್ಲಿ ಪ್ರಯತ್ನಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Translate »