ಕೇರಳದಿಂದ ಗಡಿ ದಾಟಿ ಬಂದ ಇಬ್ಬರ ವಿರುದ್ಧ ಕೇಸು ದಾಖಲು
ಕೊಡಗು

ಕೇರಳದಿಂದ ಗಡಿ ದಾಟಿ ಬಂದ ಇಬ್ಬರ ವಿರುದ್ಧ ಕೇಸು ದಾಖಲು

April 2, 2020

ಇಬ್ಬರನ್ನೂ ವಶಕ್ಕೆ ಪಡೆದು ಕ್ವಾರಂಟೇನ್ ಕೇಂದ್ರಕ್ಕೆ ಕಳುಹಿಸಿದ ಜಿಲ್ಲಾಡಳಿತ
ಮಡಿಕೇರಿ, ಏ.1- ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾದ ಬೆನ್ನಲ್ಲೇ ಕೊಡಗು ಕೇರಳ ರಾಜ್ಯವನ್ನು ಸಂಪರ್ಕಿಸುವ ಕರಿಕೆ ಚೆಕ್ ಪೋಸ್ಟ್ ಅನ್ನು ಬಂದ್ ಮಾಡಲಾಗಿದ್ದು, ಯಾರೂ ಕೂಡ ಕೊಡಗಿನಿಂದ ಕೇರಳಕ್ಕೆ ಮತ್ತು ಕೇರಳದಿಂದ ಕೊಡಗಿಗೆ ತೆರಳುವಂತಿಲ್ಲ ಎಂದು ಜಿಲ್ಲಾಡಳಿತ ಮತ್ತು ಕೊಡಗು ಪೊಲೀಸರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದರೂ ಇಬ್ಬರು ವ್ಯಕ್ತಿಗಳು ಗಡಿ ದಾಟಿ ಬಂದಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ವಾರೆಂಟೇನ್‍ಗೆ ಕಳುಹಿಸಲಾಗಿದೆ.

ಈ ಸೂಚನೆಯನ್ನು ಉಲ್ಲಂಘಿಸಿ ಕರಿಕೆ ಚೆಕ್ ಪೋಸ್ಟ್‍ನ ಅಡ್ಡ ರಸ್ತೆಯಲ್ಲಿ ಪಾಣತ್ತೂರಿನಿಂದ ಬಳಂದೋಡುವಿನ ಜಮ್ಮಾ ಮಸೀದಿಯಲ್ಲಿ ಉಸ್ತಾದ್ ಆಗಿ ಕೆಲಸ ಮಾಡುತ್ತಿರವ ಕನ್ನಡಿಯಂಡ ಜಕ್ರಿಯಾ(31) ಮತ್ತು ಕರಿಕೆಯ ತೋಟಂನ ಜಮ್ಮಾ ಮಸೀದಿಯಲ್ಲಿ ಉಸ್ತಾದ್ ಆಗಿ ಕಾರ್ಯ ನಿರ್ವಹಿಸುವ ನಾಪೋಕ್ಲು ಕುರುಳಿ ಪರಂಬು ನಿವಾಸಿ ಕೆ.ಎ. ಉಸ್ಮಾನ್ (47) ಅವರುಗಳು ತಮ್ಮ ಮೋಟಾರು ಸೈಕಲ್ (ಕೆ.ಎ.12 ಆರ್. 4016)ನಲ್ಲಿ ಕರಿಕೆಗೆ ಬಂದು ಅಲ್ಲಿಂದ ಎಮ್ಮೆಮಾಡುಗೆ ಬಂದಿದ್ದರು.
ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಕರಿಕೆ ಮೂಲಕ ಕೊಡಗು ಜಿಲ್ಲೆ ಪ್ರವೇಶಿಸಿದ ಈ ಮಾಹಿತಿ ಆಧರಿಸಿ ಇವರಿಬ್ಬರ ವಿರುದ್ದ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 188, 269 51(ಬಿ) ಐಪಿಸಿ ವಿಪತ್ತು ನಿರ್ವಹಣಾ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಜಿಲ್ಲಾ ಕ್ವಾರೆಂಟೇನ್ ವ್ಯವಸ್ಥೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Translate »