ವಿದೇಶಿ ವಿದ್ಯಾರ್ಥಿಗಳ ವೀಸಾ ವಿಸ್ತರಣೆಗೆ ನಕಲಿ ಡಿಪ್ಲೋಮಾ ಪ್ರಮಾಣ ಪತ್ರ ನೀಡಿದ ಶ್ರೀಕಾಂತ ಕಾಲೇಜು ಪ್ರಿನ್ಸಿಪಾಲ್ ವಿರುದ್ಧ ಕೇಸ್
ಮೈಸೂರು

ವಿದೇಶಿ ವಿದ್ಯಾರ್ಥಿಗಳ ವೀಸಾ ವಿಸ್ತರಣೆಗೆ ನಕಲಿ ಡಿಪ್ಲೋಮಾ ಪ್ರಮಾಣ ಪತ್ರ ನೀಡಿದ ಶ್ರೀಕಾಂತ ಕಾಲೇಜು ಪ್ರಿನ್ಸಿಪಾಲ್ ವಿರುದ್ಧ ಕೇಸ್

June 26, 2018

ಮೈಸೂರು: ವಿಶ್ವ ವಿದ್ಯಾನಿಲಯದಿಂದ ಮಾನ್ಯತೆ ಪಡೆಯದೆ ಇದ್ದರೂ ವಿವಿಧ ಡಿಪ್ಲೊಮಾ ಕೋರ್ಸ್‍ಗಳಿಗೆ ವಿದೇಶಿಗರಿಗೆ ಪ್ರವೇಶಾತಿ ನೀಡಿ, ಅವರ ವೀಸಾ ವಿಸ್ತರಣೆಗಾಗಿ ನಕಲಿ ಪ್ರಮಾಣ ಪತ್ರ ನೀಡುತ್ತಿದ್ದ ಆರೋಪದಡಿ ಮೈಸೂರಿನ ಕಾಲೇಜೊಂದರ ಪ್ರಾಂಶು ಪಾಲರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಿಟಿ ಸ್ಪೆಷಲ್ ಬ್ರಾಂಚ್(ಸಿಎಸ್‍ಬಿ) ವಿಭಾಗದ ಪೊಲೀಸರು ವಿದೇಶಿ ವಿದ್ಯಾರ್ಥಿ ಗಳ ವಾಸ ವಿಸ್ತರಣೆಗೆ ಸಂಬಂಧಪಟ್ಟ ಕಡತ ಗಳ ಪರಿಶೀಲನೆ ನಡೆಸುತ್ತಿದ್ದ ಸಂದರ್ಭ ದಲ್ಲಿ, ಮೈಸೂರಿನ ಕೆ.ಆರ್.ಮೊಹಲ್ಲಾ ದಲ್ಲಿರುವ ಶ್ರೀಕಾಂತ ಮಹಿಳಾ ಪದವಿ ಕಾಲೇಜಿನಿಂದ ಅನೇಕ ವಿದೇಶಿಗರಿಗೆ ವಿವಿಧ ಡಿಪ್ಲೊಮಾ ಪ್ರಮಾಣಪತ್ರ ವಿತರಿಸಿರು ವುದು ಗಮನಕ್ಕೆ ಬಂದಿದೆ. ಈ ಸಂಬಂಧ ತನಿಖೆ ಮುಂದುವರಿಸಿ, ಶ್ರೀಕಾಂತ ಕಾಲೇಜಿನಲ್ಲಿ ಯಾವ ವಿಷಯಗಳ ಬೋಧನೆಗೆ ಮಾನ್ಯತೆ ನೀಡಲಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲ ಯದ ಸ್ಪಷ್ಟನೆ ಕೋರಿದಾಗ ಕಾಲೇಜಿನ ಮತ್ತೊಂದು ಅಕ್ರಮ ಬಯಲಾಗಿದೆ.

ಶ್ರೀಕಾಂತ ಕಾಲೇಜಿಗೆ ಕೇವಲ ಬಿ.ಎ ಹಾಗೂ ಬಿ.ಕಾಂ ಪ್ರವೇಶಾತಿ ಹಾಗೂ ಬೋಧನೆಗೆ ಮಾನ್ಯತೆ ನೀಡಲಾಗಿದೆ ಎಂದು ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರು, ಸಿಎಸ್‍ಬಿಗೆ ವರದಿ ನೀಡಿದ್ದಾರೆ. ಇದ ರೊಂದಿಗೆ ಮಾನ್ಯತೆ ಪಡೆಯದೆ ಅನಧಿ ಕೃತವಾಗಿ ವಿವಿಧ ಡಿಪ್ಲೊಮಾ ಕೋರ್ಸ್ ಗಳಿಗೆ ಪ್ರವೇಶಾತಿ ನೀಡಿ, ಪ್ರಮಾಣ ಪತ್ರಗಳನ್ನೂ ನೀಡಿರುವುದು ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಸ್‍ಬಿ ಇನ್ಸ್‍ಪೆಕ್ಟರ್ ಆರ್.ಪಿ.ಅಶೋಕ್, ಶ್ರೀಕಾಂತ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಇತರರ ವಿರುದ್ಧ ಕೆ.ಆರ್.ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿರುವ 20ಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳಿಗೆ ದೇಶ ತೊರೆಯುವಂತೆ ಸೂಚಿಸಲಾಗಿದೆ.

ಈ ಪ್ರಕರಣವನ್ನು ಪತ್ತೆಹಚ್ಚಿರುವ ಸಿಎಸ್‍ಬಿ ಇನ್ಸ್‍ಪೆಕ್ಟರ್ ಆರ್.ಪಿ.ಅಶೋಕ್ ಹಾಗೂ ಸಿಬ್ಬಂದಿ ಕೆ.ಜಿ.ಸೀತಾರಾಮು ಅವರನ್ನು ಪ್ರಶಂಸಿರುವ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್, ವಿದೇಶಿ ವಿದ್ಯಾರ್ಥಿಗಳ ವಾಸ ವಿಸ್ತರಣೆಗೆ ಸುಳ್ಳು ವ್ಯಾಸಂಗ ಪ್ರಮಾಣ ಪತ್ರ ನೀಡಿದ್ದಲ್ಲಿ ಅಥವಾ ಅಕ್ರಮವಾಗಿ ಕೋರ್ಸ್‍ಗಳಿಗೆ ಪ್ರವೇಶಾತಿ ನೀಡಿದ್ದಲ್ಲಿ ಸಂಬಂಧಪಟ್ಟ ಕಾಲೇಜು ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Translate »