ಡಿಕೆಶಿಗೆ CBI ಶಾಕ್
ಮೈಸೂರು

ಡಿಕೆಶಿಗೆ CBI ಶಾಕ್

October 6, 2020

ಬೆಂಗಳೂರು, ಅ.5-ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರ ನಿವಾಸ ಹಾಗೂ ಅವರ ಆಪ್ತರ ಮನೆಗಳು ಸೇರಿದಂತೆ ಒಟ್ಟು 14 ಸ್ಥಳಗಳಲ್ಲಿ ಏಕಕಾಲಕ್ಕೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರೊಂದಿಗೆ ಡಿಕೆಶಿಗೆ ಬಂಧನ ಭೀತಿ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ಡಿ.ಕೆ.ಶಿವಕುಮಾರ್ ಅವರು 74.93 ಕೋಟಿ ರೂ. ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಆರೋಪದಡಿ ಸೆಪ್ಟೆಂಬರ್ 30ರಂದು ಎಫ್‍ಐಆರ್ ಹಾಕಿದ್ದ ಸಿಬಿಐ ಅಧಿಕಾರಿಗಳು, ವಿಶೇಷ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಸೋಮವಾರ ಬೆಳಗ್ಗೆ ಡಿ.ಕೆ.ಶಿವಕುಮಾರ್ ನಿವಾಸ, ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ನಿವಾಸ, ಸ್ವಗ್ರಾಮ ದೊಡ್ಡ ಆಲಹಳ್ಳಿ ಹಾಗೂ ಕೋಡಿಹಳ್ಳಿಯಲ್ಲಿ ರುವ ತಾಯಿ ಗೌರಮ್ಮ ನಿವಾಸ, ಡಿಕೆಶಿ ಆಪ್ತ ಸಚಿನ್ ನಾರಾಯಣ್ ಅವರ ಹಾಸನ ನಿವಾಸ ಹಾಗೂ ಹಾಸನದ ಅಶೋಕ ಹೋಟೆಲ್ ಸೇರಿದಂತೆ ಕರ್ನಾ ಟಕದಲ್ಲಿ 9, ಮುಂಬೈನಲ್ಲಿ 1 ಹಾಗೂ ದೆಹಲಿಯಲ್ಲಿ 4 ಸ್ಥಳಗಳು ಸೇರಿದಂತೆ ಒಟ್ಟು 14 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದರು. ಸದಾಶಿವನಗರದ ತಮ್ಮ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಮನೆಯ ಟೆರೇಸ್ ಮೇಲೆ ಡಿ.ಕೆ.ಶಿವಕುಮಾರ್ ವಾಕಿಂಗ್ ಮಾಡುತ್ತಿದ್ದರು. ಸಿಬಿಐ ಅಧಿಕಾರಿಗಳು ಬಂದದ್ದನ್ನು ಅರಿತು ಕೆಳಗೆ ಇಳಿದು ಬಂದವರಿಗೆ ಅಧಿಕಾರಿಗಳು ಎಫ್‍ಐಆರ್ ಮತ್ತು ಸರ್ಚ್ ವಾರಂಟ್ ತೋರಿಸಿ ಮನೆಯಲ್ಲಿ ಶೋಧನಾ ಕಾರ್ಯ ನಡೆಸಲು ಸಹಕರಿಸು ವಂತೆ ಹೇಳಿದಾಗ ಅದಕ್ಕೆ ಒಪ್ಪಿದ ಡಿಕೆಶಿ, ಮನೆಯ ಕೊಠಡಿಯಲ್ಲಿದ್ದ ಎಲ್ಲರನ್ನೂ ಹಾಲ್‍ಗೆ ಬರುವಂತೆ ಸೂಚಿಸಿದರು. ಈ ವೇಳೆ ಮನೆ ಸದಸ್ಯರ ಮೊಬೈಲ್‍ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ಗನ್‍ಮ್ಯಾನ್ ಹಾಗೂ ಸಿಬ್ಬಂದಿ ಯನ್ನು ಹೊರ ಕಳುಹಿಸಿ ಶೋಧನಾ ಕಾರ್ಯ ಆರಂಭಿಸಿದರು ಎಂದು ಹೇಳಲಾಗಿದೆ.

ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ನಡೆಯು ತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ಅವರ ಮನೆ ಮುಂದೆ ಜಮಾಯಿಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಸಿಬಿಐ ಮತ್ತು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಡಿಕೆಶಿ ಮನೆ ಹಾಗೂ ಗಂಗಾ ನಗರದಲ್ಲಿರುವ ಸಿಬಿಐ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಮೊದಲಿಗೆ ಡಿ.ಕೆ.ಸುರೇಶ್ ಅವರ ಮನೆಯಲ್ಲಿ ಶೋಧನಾ ಕಾರ್ಯವನ್ನು ಅಧಿಕಾರಿಗಳು ಪೂರ್ಣಗೊಳಿಸಿದ್ದರು. ಅಲ್ಲಿಂದ ಡಿ.ಕೆ. ಶಿವ ಕುಮಾರ್ ಮನೆಗೆ ಸುರೇಶ್ ಆಗಮಿಸಿದಾಗ ಮನೆ ಪ್ರವೇಶಕ್ಕೆ ಅಧಿಕಾರಿಗಳು ಅವಕಾಶ ನಿರಾಕರಿಸಿದರು. ಅದೇ ರೀತಿ ಮಾಜಿ ಸಚಿವ ಚೆಲುವರಾಯಸ್ವಾಮಿ ಮತ್ತು ಮಾಜಿ ಶಾಸಕ ಬಾಲಕೃಷ್ಣ ಅವರಿಗೂ ಮನೆ ಪ್ರವೇಶಿಸಲು ಅವಕಾಶ ನಿರಾಕರಿಸಲಾಯಿತು. ಆಗ ಈ ಮೂವರು ಡಿಕೆಶಿ ಮನೆಯ ಗೆಸ್ಟ್‍ಹೌಸ್‍ನಲ್ಲಿ ದಾಳಿ ಮುಗಿಯುವವರೆಗೂ ಇದ್ದರು.

ಡಿಕೆಶಿ ಮನೆಗೆ ಸುರೇಶ್ ಆಗಮಿಸಿದಾಗ ಕಾರ್ಯ ಕರ್ತರು ಅವರನ್ನು ಸುತ್ತುವರೆದು ಜಯ ಘೋಷಣೆ ಜೊತೆಗೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸಿಬಿಐಗೆ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಈ ವೇಳೆ ಕಾರ್ಯಕರ್ತರನ್ನು ಸಮಾ ಧಾನಪಡಿಸಿದ ಡಿ.ಕೆ.ಸುರೇಶ್, ರಾಜಕೀಯ ದುರುದ್ದೇಶದಿಂದ ಬಿಜೆಪಿ ನಡೆಸುತ್ತಿರುವ ಇಂತಹ ದಾಳಿಗಳನ್ನು ಕಂಡು ನಾವು ಹೆದರುವುದಿಲ್ಲ. ನಮ್ಮ ಕುಟುಂಬ ಯಾವುದೇ ರೀತಿಯ ತಪ್ಪನ್ನು ಮಾಡಿಲ್ಲ. ಈ ಸವಾಲಿನಲ್ಲಿ ಗೆದ್ದು ಬರುತ್ತೇವೆ ಎಂದರಲ್ಲದೇ, ಶಾಂತಿ ಕಾಪಾಡು ವಂತೆ ಕಾರ್ಯಕರ್ತರನ್ನು ವಿನಂತಿಸಿದರು. ಸುಮಾರು 12 ಗಂಟೆಗಳ ಕಾಲ ಡಿಕೆಶಿ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದ ಅಧಿಕಾರಿಗಳು ನಂತರ ಸಂಜೆ 7 ಗಂಟೆ ಸುಮಾರಿಗೆ ಸಿಬಿಐ ಕಚೇರಿಗೆ ಮರಳಿದರು. ಡಿಕೆಶಿ ಮನೆಯಲ್ಲಿ ಶೋಧ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಎಲ್ಲಾ 14 ಸ್ಥಳಗಳಲ್ಲೂ ಶೋಧನಾ ಕಾರ್ಯ ಮುಗಿದಿತ್ತು.

 

 

Translate »