ಕೇಂದ್ರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿ ಸಂವಿಧಾನ ವಿರೋಧಿ
ಮೈಸೂರು

ಕೇಂದ್ರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿ ಸಂವಿಧಾನ ವಿರೋಧಿ

November 21, 2021

ಮೈಸೂರು,ನ.20(ಪಿಎಂ)-ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಮತ್ತು ಸಮವರ್ತಿ ಪಟ್ಟಿ ವ್ಯವಸ್ಥೆ ನಮ್ಮ ಸಂವಿಧಾನದಲ್ಲಿದೆ. ಅದರಂತೆ ಶಿಕ್ಷಣ ಕ್ಷೇತ್ರ ಸಮವರ್ತಿ ಪಟ್ಟಿ ವ್ಯಾಪ್ತಿಯಲ್ಲಿದೆ. ಹಾಗಾಗಿ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿ ಸದೇ ಏಕಾಏಕಿ ಕೇಂದ್ರ ಸರ್ಕಾರ ಜಾರಿ ಗೊಳಿಸಿರುವ ನೂತನ ಶಿಕ್ಷಣ ನೀತಿ (ಎನ್‍ಇಪಿ -2020) ಸಂವಿಧಾನದ ಆಶಯಕ್ಕೆ ವಿರುದ್ಧ ವಾಗಿದೆ ಎಂದು ರಾಜ್ಯ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಹೆಚ್.ಎಸ್.ನಾಗ ಮೋಹನ್‍ದಾಸ್ ಅಭಿಪ್ರಾಯಪಟ್ಟರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿಯರ್‍ಗಳ ಸಂಸ್ಥೆ ಸಭಾಂಗಣ ದಲ್ಲಿ ಮಾನವ ಬಂಧುತ್ವ ವೇದಿಕೆ-ಕರ್ನಾ ಟಕ ವತಿಯಿಂದ `ಹೊಸ ಶಿಕ್ಷಣ ನೀತಿ ಮತ್ತು ಪಠ್ಯ ತಿರುಚುವಿಕೆ ರಾಜಕಾರಣ’ ಕುರಿತು ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‍ಇಪಿ-2020) ಮೇಲ್ನೋಟಕ್ಕೆ ಚೆನ್ನಾ ಗಿದೆ. ಇದರಲ್ಲಿ ಶೇ.100ರಷ್ಟು ಶಿಕ್ಷಣ, ಶೇ.50 ರಷ್ಟು ಉನ್ನತ ಶಿಕ್ಷಣ ನೀಡಬೇಕೆಂಬ ಅಂಶ ಗಳ ಪ್ರಸ್ತಾಪವಿದೆ. ಆದರೆ ಶಿಕ್ಷಣ ಕ್ಷೇತ್ರ ಎದು ರಿಸುತ್ತಿರುವ ಸವಾಲುಗಳಿಗೆ ಉತ್ತರ ಇದೆಯೇ? ಎಂದು ಪರಿಶೀಲಿಸಿದರೆ, ಅದಿಲ್ಲ. ಸಕ್ಕರೆ ಲೇಪಿತ ಕಹಿ ಮಾತ್ರೆ ರೀತಿ ಇದೆ ಎಂದರು.

ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಮತ್ತು ಸಮ ವರ್ತಿ ಪಟ್ಟಿ ಎಂಬ ವ್ಯವಸ್ಥೆ ನಮ್ಮಲ್ಲಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಳು ಯಾವ ವಿಚಾರಗಳ ಬಗ್ಗೆ ಕಾನೂನು ಮಾಡಲು ಅಧಿಕಾರ ಹೊಂದಿವೆ ಮತ್ತು ಯಾವ ಸಂಬಂಧ ಒಟ್ಟಾಗಿ ಕಾನೂನು ರಚನೆ ಮಾಡಬೇಕೆಂಬದನ್ನು ಈ ಪಟ್ಟಿಗಳಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಹೇಳಿದರು.

ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿ ಇದ್ದು, ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಸೇರಿದಂತೆ ಎರಡಕ್ಕೂ ಅಧಿಕಾರ ಹಂಚಿಕೆ ಮಾಡಲಾಗಿದೆ. ರಾಜ್ಯ ಸರ್ಕಾರ ಗಳೊಂದಿಗೆ ಸಮಾಲೋಚಿಸದೇ ಏಕಾಏಕಿ ಕೇಂದ್ರ ಸರ್ಕಾರ ಶಿಕ್ಷಣ ನೀತಿ ರೂಪಿಸಿರು ವುದು ಸಂವಿಧಾನದ ಆಶಯಗಳಿಗೆ ವಿರುದ್ಧ ವಾಗಿದೆ. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಚರ್ಚೆ, ತಜ್ಞರೊಂದಿಗೆ ಸಮಾಲೋಚನೆ ಇರಬೇಕು. ಏಕಾಏಕಿ ಕೇಂದ್ರದ ಸಂಪುಟ ಒಂದು ತೀರ್ಮಾನ ಮಾಡಿ ಜಾರಿಗೆ ತರು ತ್ತೇವೆ ಎನ್ನುವುದು ಪ್ರಜಾಪ್ರಭುತ್ವ ವಿರೋಧಿ ಯಾಗಲಿದ್ದು, ಪ್ರಜಾಪ್ರಭುತ್ವ ವಿರೋಧಿ ಧೋರಣೆ ಈ ಶಿಕ್ಷಣ ನೀತಿಯಲ್ಲಿದೆ ಎಂದರು.

ಸಂವಿಧಾನ ಕಲಿಕೆಗೆ ಮಾನ್ಯತೆ ನೀಡಿಲ್ಲ: ಸಂವಿಧಾನದ ಮೂಲ ಆಶಯ ಅಧಿಕಾರ ವಿಕೇಂದ್ರೀಕರಣ. ಆದರೆ ಈ ನೀತಿಯಲ್ಲಿ ಹೆಚ್ಚು ಅಧಿಕಾರವನ್ನು ಕೇಂದ್ರ ಕಸಿಯಲು ಹೊರಟಿದೆ. `ಕಲ್ಯಾಣ ರಾಜ್ಯ ನಿರ್ಮಾಣ’ ಭಾರತ ಸಂವಿಧಾನದ ಮೂಲತತ್ವ. ಆದರೆ ಈ ತತ್ವ ಬದಿಗೊತ್ತಿ ಇಡೀ ಶಿಕ್ಷಣ ಕ್ಷೇತ್ರ ವನ್ನು ಖಾಸಗಿಯವರಿಗೆ ವಹಿಸಲಾಗುತ್ತಿದೆ. ಸಂವಿಧಾನದ ಮೂಲತತ್ವಗಳ ಅನುಷ್ಠಾನ ಮುಂದಿನ ಪೀಳಿಗೆಯ ಬಹುದೊಡ್ಡ ಜವಾ ಬ್ದಾರಿ. ಶಿಕ್ಷಣದಲ್ಲಿ ಸಂವಿಧಾನದ ಬಗ್ಗೆ ಕನಿಷ್ಠ ತಿಳಿವಳಿಕೆಯಾದರೂ ಇರಬೇಕು. ಆದರೆ ಈ ನೀತಿಯಲ್ಲಿ ಸಂವಿಧಾನ ಕಲಿಕೆಗೆ ಮಾನ್ಯತೆ ನೀಡಿಲ್ಲ ಎಂದು ಆರೋಪಿಸಿದರು.

ಈಗಲಾದರೂ ಹಿಂಪಡೆಯಲಿ: ಇಂದಿನ ಶಿಕ್ಷಣ ವ್ಯವಸ್ಥೆಗೆ ಸುಧಾರಣೆ ಬೇಕು. ಆದರೆ ಈ ರೀತಿಯ (ನೂತನ ಎನ್‍ಇಪಿ-2020) ಸುಧಾರಣೆ ಅಗತ್ಯವಿಲ್ಲ. ಶಿಕ್ಷಣ ಕ್ಷೇತ್ರ ಎದು ರಿಸುತ್ತಿರುವ ಸವಾಲು ಹಿಮ್ಮೆಟ್ಟಿರುವ ಶಿಕ್ಷಣ ನೀತಿ ನಮಗೆ ಬೇಕಿದೆ. ಆ ದಿಕ್ಕಿನಲ್ಲಿ ಈಗ ಲಾದರೂ ಈ ಶಿಕ್ಷಣ ನೀತಿ ಹಿಂಪಡೆದು, ಸಾರ್ವಜನಿಕರು, ರಾಜ್ಯ ಸರ್ಕಾರಗಳು, ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ, ಸಮಸ್ಯೆಗಳಿಗೆ ಪರಿ ಣಾಮಕಾರಿ ಉತ್ತರ ನೀಡುವ ಸಮಗ್ರ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕು. ಜನಪರ ಹೋರಾಟಗಳೇ ಜನತೆ ಸಮಸ್ಯೆ ನಿವಾರಿ ಸುವ ಮದ್ದು. ಹಾಗಾಗಿ ನೂತನ ಶಿಕ್ಷಣ ನೀತಿ ವಿರುದ್ಧ ಚಳುವಳಿ ರೂಪುಗೊಳ್ಳುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.

ಒಂದೊಂದು ಶಾಲೆಯಲ್ಲಿ ಒಂದೊಂದು ರೀತಿಯ ಸೌಲಭ್ಯ, ಒಂದೊಂದು ರೀತಿಯ ಪಠ್ಯಕ್ರಮ ಇದೆ. ಇದರಿಂದ ದೇಶದಲ್ಲಿ ಅಸಮಾ ನತೆ, ಭಿನ್ನಾಭಿಪ್ರಾಯ, ದ್ವೇಷ-ಅಸೂಯೆ ಹೆಚ್ಚಾಗುತ್ತಿದೆ. ಶೇ.85ರಷ್ಟು ಶಿಕ್ಷಣವಂತರು ದೇಶದಲ್ಲಿ ನೌಕರಿಗೆ ಅರ್ಹತೆ ಹೊಂದಿಲ್ಲ. ಅಂದರೆ ಅವರ ವೃತ್ತಿಗೆ ಬೇಕಿರುವ ಕೌಶಲ್ಯ ಗಳಿಸಿಲ್ಲ. ಹಾಗಾಗಿ ಸಮಾನ ಮತ್ತು ಗುಣಾ ತ್ಮಕ ಶಿಕ್ಷಣ ನೀಡುವ ದಿಕ್ಕಿನಲ್ಲಿ ಶಿಕ್ಷಣ ಕ್ಷೇತ್ರ ದಲ್ಲಿ ಸುಧಾರಣೆ ಆಗಬೇಕಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು, ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರನ್ನು ಹಸಿವಿನಲ್ಲಿ ಇಟ್ಟು ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವೇ? ಶಿಕ್ಷಣ ನೀತಿಯಲ್ಲಿ ಇದಕ್ಕೆ ಉತ್ತರ ಇದೆಯೇ? ಈ ಬಗ್ಗೆ ಒಂದೇ ಒಂದೂ ಪ್ರಸ್ತಾಪ ಇಲ್ಲ. ಇದನ್ನು ಸುಧಾರಣೆ ಎನ್ನ ಲಾಗುತ್ತದೆಯೇ? ಎಲ್ಲಾ ಹುದ್ದೆಗಳನ್ನು ಕಾನೂನುಬದ್ಧವಾಗಿ ಭರ್ತಿ ಮಾಡಿ, ಕಾನೂನು ಬದ್ಧವಾಗಿ ಅವರಿಗೆ ಸವಲತ್ತು ಕೊಡಬೇಕು. ಅದು ನಿಜವಾದ ಸುಧಾ ರಣೆ. ಆ ದಿಕ್ಕಿನಲ್ಲಿ ಈ ನೀತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದಿನ ಶಿಕ್ಷಣ ಆಯೋಗಗಳು ಜಿಡಿಪಿ ಯಲ್ಲಿ ಶೇ.6ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಒದಗಿಸಬೇಕೆಂದು ಶಿಫಾರಸ್ಸು ಮಾಡಿವೆ. ಆದರೆ ಕಳೆದ 75 ವರ್ಷಗಳಲ್ಲಿ ಜಿಡಿಪಿಯಲ್ಲಿ ಶೇ.3.5ಕ್ಕಿಂತ ಹೆಚ್ಚು ನೀಡಿಲ್ಲ. ಇಂದು ಶೇ.2.9ರಷ್ಟು ಮಾತ್ರ ನೀಡಲಾಗಿದೆ. ಇಡೀ ಶಿಕ್ಷಣ ನೀತಿಯಲ್ಲಿ ಇದನ್ನು ಶೇ.5ಕ್ಕೆ ಹೆಚ್ಚಳ ಮಾಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಹಣ ಒದಗಿಸುವುದಿಲ್ಲ, ಖಾಯಂ ಶಿಕ್ಷಕರ ನೇಮಕಾತಿ ಮಾಡುವುದಿಲ್ಲ. ಹೀಗಾದರೆ ಗುಣಾತ್ಮಕ ಮತ್ತು ಸಮಾನ ಶಿಕ್ಷಣ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಮಾಜಿ ಸಂಸದ ಆರ್.ಧ್ರುವನಾರಾಯಣ್, ಬಿಎಸ್‍ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ವೇದಿಕೆ ಮೈಸೂರು ವಿಭಾಗೀಯ ಸಂಚಾಲಕಿ ಡಾ. ಲೀಲಾ ಸಂಪಿಗೆ ಮತ್ತಿತರರು ಹಾಜರಿದ್ದರು.

Translate »