ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲ
ಮಂಡ್ಯ

ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲ

May 6, 2021

ಶ್ರೀರಂಗಪಟ್ಟಣ, ಮೇ 5(ವಿನಯ್ ಕಾರೇಕುರ)- ಕೊರೊನಾ ನಿರ್ವ ಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಸಂಪೂರ್ಣವಾಗಿ ಎಡವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಶಾಸಕ ರವೀಂದ್ರಶ್ರೀಕಂಠಯ್ಯ ಏರ್ಪಡಿಸಿದ್ದ ಕ್ಷೇತ್ರದ 25 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಬೆಂದ ಮನೆಯಲ್ಲಿ ಗಳ ಹಿರಿಯುವ” ಕೆಲಸ ಮಾಡಬಾರದು ಎಂದು ವಿರೋಧ ಪಕ್ಷದ ಮುಖಂಡರಿಗೆ ಮಾತಿನಲ್ಲೇ ತಿವಿದರು. ಆಕ್ಸಿಜನ್ ಇಲ್ಲದೆ ಬಡವರು ಸಾವನ್ನಪ್ಪು ತ್ತಿದ್ದಾರೆ. ರಾಜ್ಯದಲ್ಲಿ ಕರುಣಾಜನಕ ಸ್ಥಿತಿ ನಿರ್ಮಾಣವಾಗಿದೆ. ನಿಷ್ಕ್ರಿಯಗೊಂಡಿರುವ ಆಕ್ಸಿಜನ್ ಘಟಕವನ್ನು ನಾಲ್ಕೈದು ದಿನ ಗಳಲ್ಲಿ ದುರಸ್ತಿ ಮಾಡಿ, ಆಕ್ಸಿಜನ್ ಉತ್ಪಾ ದನೆಗೆ ಕ್ರಮ ವಹಿಸಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದರು.

ಕಾಂಗ್ರೆಸ್ ನಾಯಕರು ಚಾಮರಾಜ ನಗರಕ್ಕೆ ಹೋಗಿ ಸರ್ಕಾರವನ್ನು ಟೀಕಿಸುವ ಕೆಲಸ ಮಾಡಿದ್ದಾರೆ. ಸರ್ಕಾರ 24 ಜನ ಸತ್ತಿದ್ದಾರೆ ಎಂದು ಹೇಳಿದರೆ, ವಿರೋಧ ಪಕ್ಷದ ನಾಯಕರು 34 ಎಂದು ಹೇಳುತ್ತಿದ್ದಾರೆ. ಈಗ ಟೀಕೆ ಮಾಡುವ ಸಮಯವಲ್ಲ. ಸರ್ಕಾರ ಕೂಡಲೇ ಎಚ್ಚೆತ್ತು ಕೊಂಡು ಬೆಡ್‍ಗಳು, ಆಕ್ಸಿಜನ್, ವೆಂಟಿ ಲೇಟರ್‍ಗಳನ್ನು ಸರಬರಾಜು ಮಾಡ ಬೇಕು. ಜನರ ಭಾವನೆಗಳಿಗೆ ಸ್ಪಂದಿಸ ಬೇಕು. ಇಂಥ ಸಂದರ್ಭದಲ್ಲಿ ಸರ್ಕಾರಕ್ಕೆ ಸಲಹೆ ನೀಡುತ್ತಾ, ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದರು.

ಅಧಿಕಾರಿಗಳ ವರ್ಗಾವಣೆಯಲ್ಲಿ ಮುಳುಗಿದೆ: ಮಾ.15ರಂದು ಲಾಕ್‍ಡೌನ್ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೆ. ಆದರೆ ಇವರು ಎಚ್ಚೆತ್ತುಕೊಳ್ಳಲಿಲ್ಲ. ಪ್ರಧಾನಿ ಮೋದಿ ಸಭೆ ನಡೆಸುತ್ತಿದ್ದಾರೆ. ಲಾಕ್‍ಡೌನ್ ಮಾಡಬೇಕೋ, ಇಲ್ಲವೋ ಎಂದು, ದೇಶ ಸಂಪೂರ್ಣವಾಗಿ ಕೊರೊನಾ ದಿಂದ ಮುಳುಗಿ ಹೋಗಿದೆ. ದೆಹಲಿಯಲ್ಲಿ ಆಕ್ಸಿಜನ್ ಸಿಗುತ್ತಿಲ್ಲ. ಮಂಡ್ಯ ಜಿಲ್ಲಾಸ್ಪತ್ರೆ ಕೊಳೆತು ನಾರುತ್ತಿದೆ. ಸರ್ಕಾರ ಮಾತ್ರ 50 ಲಕ್ಷದಿಂದ 1 ಕೋಟಿವರೆಗೂ ಹಣ ಪಡೆದು ಅಧಿಕಾರಿಗಳ ವರ್ಗಾವಣೆ ಮಾಡುತ್ತಿದೆ. ಇದಕ್ಕೆಲ್ಲ ತೆರೆ ಎಳೆದು ಜನಸಾಮಾನ್ಯರ ಕೆಲಸ ಮಾಡಬೇಕು. ಸರ್ಕಾರದ ಬಳಿ ಹಣವಿದ್ದು, ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.

ಇಂಥ ಸಂದರ್ಭದಲ್ಲಿ ಜಾತಿ ರಾಜ ಕಾರಣ ಮಾಡಬಾರದು. ಮಾಧ್ಯಮಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಜನರ ಜತೆ ಚೆಲ್ಲಾಟವಾಡುವುದನ್ನು ನಿಲ್ಲಿಸ ಬೇಕು. ಬೆಂಗಳೂರಿನಲ್ಲಿ ನಡೆದ ಡ್ರಾಮಾ ಬಗ್ಗೆ ಚೆನ್ನಾಗಿ ಗೊತ್ತಿದೆ. ಸಂಸದ, ಶಾಸಕರು ದೊಡ್ಡ ಡ್ರಾಮ ಆಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಇದರ ಬಗ್ಗೆ ಮಂಡ್ಯ ದಲ್ಲಿಯೇ ಮಾತನಾಡುತ್ತೇನೆ ಎಂದು ಬೆಡ್ ಬ್ಲಾಕಿಂಗ್ ಪ್ರಕರಣ ಕುರಿತು ಕಿಡಿಕಾರಿದರು.
ಕೊರೊನಾ ಸಂದರ್ಭದಲ್ಲಿ ಬಡವರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಈ ಕಾರ್ಯ ಕೈಗೊಂಡಿದ್ದೇನೆ. ಆರೋಗ್ಯ ಸಿಬ್ಬಂದಿಗಳು ಸೋಂಕಿತರ ಜೀವ ಉಳಿ ಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಮೊದಲು ಅವರ ಕುಟುಂಬ ಗಳಿಗೆ ಆಹಾರ ಕಿಟ್ ಜತೆಗೆ ತಲಾ 5 ಸಾವಿರ ರೂ. ಪ್ರೋತ್ಸಾಹಧನ ವಿತರಿಸಿದ್ದೇವೆ. ಮುಂದಿನ ದಿನಗಳಲ್ಲಿ ಕ್ಷೇತ್ರದ 25 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ತಲುಪಿ ಸುವ ಕೆಲಸ ಮಾಡುವುದಾಗಿ ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದ್ದಾರೆ.

ಈ ವೇಳೆ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ದಾದಿಯರು ಹಾಗೂ ಡಿ ಗ್ರೂಪ್ ನೌಕರರಿಗೆ ಸಿಎಫ್‍ಟಿಆರ್‍ಐ ನಿಂದ ಪೌಷ್ಠಿಕಾಂಶ ಹೊಂದಿರುವ ಆಹಾರ ಹಾಗೂ ವೈಯಕ್ತಿಕ 5 ಸಾವಿರ ಸಹಾಯ ಧನ ವಿತರಿಸಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ತಮ್ಮ ಕ್ಷೇತ್ರದ ಜನತೆಯ ಪರವಾಗಿ ಹಗಲಿರುಳು ಶ್ರಮಿಸುತ್ತಿದ್ದು ಕೊರೊನಾ ಸಂಕಷ್ಟ ಕಾಲ ದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡು ಬಡವರಿಗೆ ಅಗತ್ಯ ಆಹಾರ ಕಿಟ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಕುಮಾರಸ್ವಾಮಿ ಶ್ಲಾಘಿಸಿದರು.
ದೇವಸ್ಥಾನದ ಆವರಣದಲ್ಲಿ ಸಾವಿ ರಾರು ಕೆಜಿ ಅಕ್ಕಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಬಡ ಜನರ ಮನೆಗಳಿಗೆ ತಾಲೂಕು ಆಡಳಿತದಿಂದ ವಿತರಿಸಲಾಯಿತು. ಇಲ್ಲಿ ವಿತರಿಸಿದ ಎಲ್ಲಾ ತರಕಾರಿಯನ್ನು ಶ್ರೀರಂಗಪಟ್ಟಣ ತಾಲೂಕು ಹಾಗೂ ಮಂಡ್ಯ ಜಿಲ್ಲೆಯ ರೈತರಿಂದ ಖರೀದಿಸಿದ್ದು, ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿಶೇಷವಾಗಿತ್ತು.

ಶಾಸಕರಾದ ಕೆ.ಸುರೇಶ್‍ಗೌಡ, ಕೆ.ಟಿ. ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಪುರಸಭೆ ಉಪಾದ್ಯಕ್ಷ ಎಸಿಸಿ ಪ್ರಕಾಶ್, ಮುಖಂಡರುಗಳಾದ ನೆಲಮನೆ ದಯಾನಂದ್, ಶ್ರೀನಿವಾಸ ಅಗ್ರಹಾರ ರಾಮಕೃಷ್ಣ, ಬಾಬುರಾಯನಕೋಪ್ಪಲು ತಿಲಕ್ ಕುಮಾರ್, ಹರ್ಷ, ಭಾಸ್ಕರ್(ಬಾಲು) ಸೇರಿದಂತೆ ಆಯ್ದ ಜನಪ್ರತಿನಿಧಿಗಳು ಹಾಗೂ ಮುಖಂಡರು ಈ ವೇಳೆ ಹಾಜರಿದ್ದರು.

Translate »