ಪ್ರತ್ಯೇಕ ಲಿಂಗಾಯತ ಧರ್ಮ ಪ್ರಸ್ತಾವನೆ ಕೇಂದ್ರದಿಂದ ತಿರಸ್ಕೃತ
ಮೈಸೂರು

ಪ್ರತ್ಯೇಕ ಲಿಂಗಾಯತ ಧರ್ಮ ಪ್ರಸ್ತಾವನೆ ಕೇಂದ್ರದಿಂದ ತಿರಸ್ಕೃತ

December 11, 2018

ಬೆಂಗಳೂರು:  ಪ್ರತ್ಯೇಕ ಲಿಂಗಾಯಿತ ಧರ್ಮ ಪ್ರಸ್ತಾವನೆ ಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರ ಲಿಂಗಾಯಿತ (ವೀರಶೈವ) ಸಮಾಜಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿ, ಅವರಿಗೆ ಅಲ್ಪಸಂಖ್ಯಾತರೆಂದು ಪರಿಗಣಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಅಂದಿನ ರಾಜ್ಯ ಸರ್ಕಾರದ ಮಹತ್ವದ ತೀರ್ಮಾನವನ್ನು ಕೇಂದ್ರದ ಅಲ್ಪಸಂಖ್ಯಾತ ಹಾಗೂ ಹಜ್ ಮತ್ತು ವಕ್ಫ್ ಮಂತ್ರಾಲಯ ತಿರಸ್ಕರಿಸಿ 13ನೇ ನವೆಂಬರ್ 2018 ರಂದೇ ರಾಜ್ಯಕ್ಕೆ ಸಂದೇಶ ರವಾನೆ ಮಾಡಿದೆ. ತಮ್ಮ ಪತ್ರದಲ್ಲಿ ಕೇಂದ್ರ ಗೃಹ ಇಲಾಖೆ ಹಾಗೂ ಅಲ್ಪಸಂಖ್ಯಾತರ ಆಯೋಗದಿಂದ ವರದಿ ಪಡೆದು, ಇದರ ಆಧಾರದ ಮೇಲೆ ಕರ್ನಾಟಕ ಸರ್ಕಾರ 23ನೇ ಮಾರ್ಚ್ 2018 ರಲ್ಲಿ ಮಾಡಿದ ಶಿಫಾರಸ್ಸನ್ನು ತಳ್ಳಿ ಹಾಕಿದೆ. ಕೇಂದ್ರದ ಅಲ್ಪ ಸಂಖ್ಯಾತ ಹಾಗೂ ವಕ್ಫ್ ಮಂತ್ರಾಲಯ ರಾಜ್ಯ ಸರ್ಕಾರದ ಅಧೀನದಲ್ಲಿರುವ ಅಲ್ಪಸಂಖ್ಯಾತರ ಇಲಾಖೆಗೆ ಪತ್ರ ಬರೆದು ಈ ಪ್ರಸ್ತಾವನೆ ತಳ್ಳಿ ಹಾಕಿರುವುದಲ್ಲದೆ, ಯಾವ ಕಾರಣಕ್ಕೆ ತಿರಸ್ಕರಿಸಲಾಗಿದೆ ಎಂದು ಅಂಕಿ ಅಂಶಗಳನ್ನು ನೀಡಿದೆ.

ಲಿಂಗಾಯಿತ-ವೀರಶೈವರು ಹಿಂದೂ ಧರ್ಮದ ಅವಿಭಾಜ್ಯ ಅಂಗ. ಈ ಅಂಶ ಈಗಾಗಲೇ 1871ರ ಮೊದಲ ಜನಗಣತಿ ವೇಳೆಯಲ್ಲಿ ವೇದ್ಯವಾಗಿದೆ. ಪ್ರತ್ಯೇಕ ಧರ್ಮವಾದರೆ ಪರಿಶಿಷ್ಟ ಜಾತಿಯವರಿಗೆ ನಷ್ಟ. ಲಿಂಗಾಯಿತ ಧರ್ಮ ಅನುಸರಿಸು ತ್ತಿರುವ ಎಸ್‍ಸಿ ಸಮುದಾಯಕ್ಕೆ ನಷ್ಟವಾಗು ತ್ತದೆ. ಪರಿಶಿಷ್ಟ ಜಾತಿ ಮೀಸಲಾತಿಯಿಂದ ವಂಚಿತಗೊಳ್ಳುತ್ತಾರೆ. ಈ ಮುಖ್ಯ ಕಾರಣಗಳನ್ನು ಮುಂದಿಟ್ಟುಕೊಂಡು ಕೇಂದ್ರ ಅಲ್ಪ ಸಂಖ್ಯಾತರ ಮಂತ್ರಾಲಯ ಲಿಂಗಾಯಿತ ಪ್ರತ್ಯೇಕ ಧರ್ಮಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಹಿಂದೆ ಮಹಾರಾಷ್ಟ್ರ ಸರ್ಕಾರ ಈ ಸಮುದಾಯಕ್ಕೆ ಪ್ರತ್ಯೇಕ ಧರ್ಮ ಕಲ್ಪಿಸುವಂತೆ ಮಾಡಿದ್ದ ಶಿಫಾರಸ್ಸನ್ನು ಅಂದಿನ ಕೇಂದ್ರ ಸರ್ಕಾರ 2013 ರಲ್ಲಿ ತಿರಸ್ಕರಿಸಿರುವುದನ್ನು ಉಲ್ಲೇಖಿಸಿದೆ. ಕರ್ನಾಟಕ ಸರ್ಕಾರ ವೀರಶೈವ ಸಮುದಾಯವನ್ನು ವಿಭಜನೆ ಮಾಡಲು ಹೊರಟಿರುವುದನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್‍ನಲ್ಲಿ ಸತೀಶ್ ಮತ್ತಿತರರು ಸಾರ್ವಜನಿಕ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.

ನ್ಯಾಯಾಲಯ ತೀರ್ಪು ನೀಡುವ ಮುನ್ನ ಕೇಂದ್ರದ ಮಾಹಿತಿ ಕೋರಿತ್ತು. ಇಂದಿನ ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಕೇಂದ್ರದ ಆದೇಶವನ್ನು (ಜ್ಞಾಪನಾಪತ್ರ) ಮೂಲಕ ನ್ಯಾಯಪೀಠಕ್ಕೆ ಸಲ್ಲಿಸಿದರು.

ಆದೇಶ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಸುಜಾತಾ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಸಂಬಂಧ ಸಲ್ಲಿಸಲಾಗಿದ್ದ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಜಾಗೊಳಿಸಿತು.

ಸಮಾಜದ ಒಂದು ವರ್ಗ ಲಿಂಗಾಯಿತಕ್ಕೆ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಬೇಕೆಂದು ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಡ ತಂದಿತ್ತು. ಅದರಲ್ಲೂ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಆ ಸಮುದಾಯದ ಬಹುತೇಕ ಸಚಿವರು ಮತ್ತು ಕೆಲವು ಸಂಘ ಸಂಸ್ಥೆಗಳು ಭಾರೀ ಒತ್ತಡ ತಂದಿದ್ದವು. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಏಕಾಏಕಿ ತಾವೇ ನಿರ್ಧಾರ ಕೈಗೊಂಡರೆ ತಮಗೆ ಕೆಟ್ಟ ಹೆಸರು ಬರಬಹು ದೆಂಬ ಉದ್ದೇಶದಿಂದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‍ದಾಸ್ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚನೆ ಮಾಡಿತ್ತು. ತಜ್ಞರ ಸಮಿತಿ ವಾದ-ಪ್ರತಿವಾದಗಳನ್ನು ಆಲಿಸಿ, ಇವರ ಬೇಡಿಕೆಯನ್ನು ಈಡೇರಿಸಬಹುದು. ಲಿಂಗಾಯಿತರಿಗೆ ಪ್ರತ್ಯೇಕ ಧರ್ಮ ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿ, ಜೊತೆಗೆ ಇಂತಹ ವರ್ಗಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನ ಕಲ್ಪಿಸಿ ಎಂದು ಹೇಳಿತ್ತು. ಈ ವರದಿಯನ್ನೇ ಆಧರಿಸಿ, ಅಂದಿನ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದಲ್ಲದೆ, ಮಾರ್ಚ್ 2018, 23 ರಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ರಾಜ್ಯ ಸರ್ಕಾರದ ಈ ಏಕಾಏಕಿ ನಿರ್ಧಾರಕ್ಕೆ ಆ ಸಮುದಾಯದ ಪ್ರಬಲ ಸ್ವಾಮೀಜಿಗಳು, ರಾಜಕಾರಣಿಗಳು ಹಾಗೂ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದವು. ಆದರೆ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ಯಾವುದನ್ನೂ ಪರಿಗಣಿಸಲಿಲ್ಲ. ವಿಧಾನಸಭಾ ಚುನಾವಣೆ ಸಮೀಪವಿರುವ ಸಂದರ್ಭದಲ್ಲಿ ಜಾತಿ ವಿಭಜನೆ ತಮಗೆ ಲಾಭ ತರಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆ ನಿರೀಕ್ಷೆ ಹುಸಿಯಾಗಿ, ವೀರಶೈವ ಸಮುದಾಯದ ಮುಖಂಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಆ ಪಕ್ಷ ವಿಧಾನಸಭೆಯಲ್ಲಿ ಹೆಚ್ಚು ಸ್ಥಾನ ಗಳಿಸಿ, ಆಡಳಿತಾರೂಢ ಕಾಂಗ್ರೆಸ್ ಅನ್ನು ಎರಡನೇ ಸ್ಥಾನಕ್ಕೆ ತಳ್ಳಿದರೂ, ಅಧಿಕಾರವನ್ನಿಡಿಯುವ ಮ್ಯಾಜಿಕ್ ಸಂಖ್ಯೆ ಮುಟ್ಟಲಾಗಲಿಲ್ಲ.

ಚುನಾವಣೆಯಲ್ಲಿ ವೀರಶೈವ ಸಮುದಾಯ, ಬಿಜೆಪಿ ಕೈ ಹಿಡಿದಿದ್ದು ಕಂಡುಬಂದಿತ್ತು. ಫಲಿತಾಂಶದ ನಂತರ ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಕೆಲವು ಕಾಂಗ್ರೆಸ್ ಮುಖಂಡರು ನಾವು ಸಮಾಜ ವಿಭಜನೆ ಮಾಡುವ ನಿರ್ಧಾರ ಕೈಗೊಂಡಿದ್ದು ಸರಿಯಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ನಾವು ಮಾಡಿದ ತಪ್ಪಿನಿಂದ ಚುನಾವಣೆಯಲ್ಲಿ ಸೋಲುಣ್ಣಬೇಕಾಯಿತು. ವೈಯಕ್ತಿಕವಾಗಿ ಆ ಸಮುದಾಯದ ಕ್ಷಮೆ ಕೋರುವುದಾಗಿಯೂ ಅವರು ಹೇಳಿಕೊಂಡಿದ್ದರು.

Translate »