ಎಟಿಎಂಗಳಲ್ಲಿ ಅಮಾಯಕರಿಗೆ ವಂಚಿಸುತ್ತಿದ್ದ ಚಾಲಾಕಿ ಖದೀಮನ ಬಂಧನ
ಮೈಸೂರು

ಎಟಿಎಂಗಳಲ್ಲಿ ಅಮಾಯಕರಿಗೆ ವಂಚಿಸುತ್ತಿದ್ದ ಚಾಲಾಕಿ ಖದೀಮನ ಬಂಧನ

June 3, 2022

ಮೈಸೂರು, ಜೂ.2(ಎಸ್‍ಬಿಡಿ)- ಎಟಿಎಂನಿಂದ ಹಣ ಡ್ರಾ ಮಾಡಲು ಸಹಾಯ ಮಾಡುವ ನೆಪದಲ್ಲಿ ಅಮಾಯಕರನ್ನು ವಂಚಿಸುತ್ತಿದ್ದ ಚಾಲಾಕಿ ಖದೀಮನನ್ನು ಕೆ.ಆರ್.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ವಿವಿಧೆಡೆ ಈ ರೀತಿ ವಂಚಿಸಿ ಹಣ ದೋಚುತ್ತಿದ್ದ ಸುಮಾರು 25-30 ವರ್ಷದ ಖದೀಮ ಈ ಜಿಲ್ಲೆಯವನೇ ಆಗಿದ್ದಾನೆ. ಈತ ವಿವಾ ಹಿತನಾಗಿದ್ದು, ಜೀವನೋಪಾಯಕ್ಕೆ ಗಾರೆ ಕೆಲಸ ಮಾಡಿಕೊಂಡಿದ್ದೇನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ. ಆತನ ಬಳಿಯಿದ್ದ 12 ಸಾವಿರ ರೂ. ಹಣ, ವಂಚನೆ ಹಣದಿಂದ ಖರೀದಿಸಿದ್ದ 3.8 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಬೈಕ್, ವಿವಿಧ ಬ್ಯಾಂಕ್‍ಗಳ 7 ಎಟಿಎಂ ಕಾರ್ಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಆರ್.ಚೇತನ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕಾರ್ಡ್ ಬದಲಿಸುತ್ತಿದ್ದ: ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂಗಳ ಬಳಿ ಹೊಂಚುಹಾಕಿ ನಿಲ್ಲುತ್ತಿದ್ದ ಆಸಾಮಿ, ವಯಸ್ಸಾದವರು ಅಥವಾ ಗ್ರಾಮಾಂತರ ಪ್ರದೇಶದ ಅಮಾಯಕ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. ಎಟಿಎಂ ಬಳಕೆ ಬಗ್ಗೆ ತಿಳಿಯದವರಿಗೆ ಸಹಾಯದ ನೆಪದಲ್ಲಿ ಮಾತ್ರವಲ್ಲದೆ ಮತ್ತೊಂದು ಬಗೆಯಲ್ಲಿ ಯಾಮಾರಿಸುತ್ತಿದ್ದ. ನನ್ನ ಎಟಿಎಂ ಕಾರ್ಡ್ ಯಾಕೋ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿ ತಾನು ಗುರಿಯಾಗಿಸಿದ್ದವರ ಎಟಿಎಂ ಕಾರ್ಡ್ ಪಡೆದು, ಪರಿಶೀಲಿಸುವ ನಾಟಕವಾಡಿ ಪಿನ್ ನಂಬರ್ ಅನ್ನೂ ತಿಳಿದುಕೊಳ್ಳುತ್ತಿದ್ದ. ಈ ವೇಳೆ ಅವರಿಗೆ ತಿಳಿಯದಂತೆ ಕಾರ್ಡ್ ಬದಲಿಸಿ, ಅದೇ ಮಾದರಿಯ ಬೇರೊಂದನ್ನು ಕೊಟ್ಟು ಕಳುಹಿಸುತ್ತಿದ್ದ. ನಂತರ ಅಲ್ಲಿಂದ ಕಾಲ್ಕಿತ್ತು ಬೇರೆ ಕಡೆ ಆ ಕಾರ್ಡ್ ಬಳಸಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ.

ಜಿಲ್ಲೆಯ 6 ಕಡೆ ದುಷ್ಕøತ್ಯ: ಕೆ.ಆರ್.ನಗರದ ಕರ್ನಾಟಕ ಬ್ಯಾಂಕ್ ಎಟಿಎಂ ಬಳಿ ಕಳೆದ ಮೇ 5ರಂದು ಹೆಚ್.ಟಿ.ತಿಮ್ಮಶೆಟ್ಟಿ ಹಾಗೂ ಫೆಬ್ರವರಿ 2ರಂದು ಸುನಂದಬಾಯಿ ರಮೇಶ್ ಅವರನ್ನು ಯಾಮಾರಿಸಿದ್ದ. ಮೋಸ ಹೋಗಿರುವುದು ತಿಳಿದ ನಂತರ ಇಬ್ಬರೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಎಟಿಎಂ ಕೇಂದ್ರದಲ್ಲಿ ಅಪರಿಚಿತ ನೊಬ್ಬ ಹೊಂಚುಹಾಕಿ ತನ್ನ ಬಳಿ ಇದ್ದ ಎಟಿಎಂ ಕಾರ್ಡ್ ಕೆಲಸ ನಿರ್ವಹಿಸುತ್ತಿಲ್ಲ ವೆಂದು ಹೇಳಿ ಪರಿಶೀಲನೆಗೆಂದು ನಮ್ಮ ಕಾರ್ಡ್ ಪಡೆದು ನಂತರ ಬೇರೆ ಕಾರ್ಡ್ ನೀಡಿದ್ದಾನೆ. ಅಲ್ಲದೆ ನಮ್ಮ ಕಾರ್ಡ್ ದುರ್ಬಳಕೆ ಮಾಡಿಕೊಂಡು ಖಾತೆಯಲ್ಲಿದ್ದ ಹಣ ವನ್ನು ಡ್ರಾ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದರು. ಕೆ.ಆರ್.ನಗರದಲ್ಲೇ ಮತ್ತೊಬ್ಬರು, ಹುಣಸೂರು, ಪಿರಿಯಾಪಟ್ಟಣ ಹಾಗೂ ಹೆಚ್.ಡಿ.ಕೋಟೆಯಲ್ಲಿ ತಲಾ ಒಬ್ಬರಿಗೆ ಸೇರಿದಂತೆ ಒಟ್ಟು 6 ಜನರಿಗೆ ಈ ರೀತಿ ವಂಚಿಸಿ, 1 ಲಕ್ಷ ರೂ.ಗಿಂತ ಹೆಚ್ಚು ಹಣ ದೋಚಿರುವುದು ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ.

ಕೆ.ಆರ್.ನಗರದಲ್ಲೇ ಸಿಕ್ಕಿಬಿದ್ದ: ಪ್ರಕರಣ ಸಂಬಂಧ ಎಎಸ್ಪಿ ಆರ್.ಶಿವಕುಮಾರ್ ಹಾಗೂ ಡಿಎಸ್ಪಿ ಸುಮಿತ್ ಮಾರ್ಗದರ್ಶನದಲ್ಲಿ ಕೆ.ಆರ್.ನಗರ ಇನ್‍ಸ್ಪೆಕ್ಟರ್ ಲವ ನೇತೃತ್ವದ ತಂಡ ವೈಜ್ಞಾನಿಕ ಮಾಹಿತಿ ಸಂಗ್ರಹಿಸಿ ತನಿಖೆ ನಡೆಸುತ್ತಿತ್ತು. ಜೊತೆಗೆ ಮುನ್ನೆಚ್ಚರಿಕೆಯಾಗಿ ಎಟಿಎಂ ಕೇಂದ್ರಗಳ ಬಳಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ನಿಗಾ ವಹಿಸಲಾಗಿತ್ತು. ಮೇ 30ರಂದು ಕೆ.ಆರ್.ನಗರ ಬಸ್ ನಿಲ್ದಾಣದಲ್ಲಿರುವ ಕರ್ನಾಟಕ ಎಟಿಎಂ ಕೇಂದ್ರದ ಬಳಿ ನಿಂತಿದ್ದ ಆರೋಪಿಯನ್ನು ಬಂಧಿಸಲಾಯಿತು.

ಆರೋಪಿ ಬಳಿ 7 ಕಾರ್ಡ್: ಆರೋಪಿ ಬಳಿ ಕರ್ನಾಟಕ ಬ್ಯಾಂಕ್‍ನ 4, ಎಸ್‍ಬಿಐನ 2 ಹಾಗೂ ಕಾರ್ಪೊರೇಷನ್ ಬ್ಯಾಂಕ್‍ನ 1 ಸೇರಿ ಒಟ್ಟು 7 ಎಟಿಎಂ ಕಾರ್ಡ್ ಇದ್ದವು. ಒಂದು ಕಡೆ ಯಾಮಾರಿಸಿ ಪಡೆದ ಎಟಿಎಂ ಕಾರ್ಡ್ ಮೂಲಕ ಹಣ ಡ್ರಾ ಮಾಡಿದ ನಂತರ ಮತ್ತೊಬ್ಬರಿಗೆ ಅದೇ ಕಾರ್ಡ್ ನೀಡುತ್ತಿದ್ದ. ಇನ್‍ಸ್ಪೆಕ್ಟರ್ ಲವ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್‍ಇನ್‍ಸ್ಪೆಕ್ಟರ್ ಚಂದ್ರಹಾಸನಾಯಕ, ಸಿಬ್ಬಂದಿ ಹಿದಾಯತ್ ಉಲ್ಲಾ, ರಾಘವೇಂದ್ರ, ಪುನೀತ್, ರಾಜು, ಮಹೇಂದ್ರ, ಅನಿತಕುಮಾರ್, ಇಮ್ದಾದ್ ಅಲಿ, ಯಶವಂತ್ ಪಾಲ್ಗೊಂಡು, ಎಟಿಎಂ ಕಾರ್ಡ್ ವಂಚಕನನ್ನು ಬಂಧಿಸಿದ್ದಾರೆ.

Translate »