ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ಬರ್ಬರ ಹತ್ಯೆಯಿಂದ ಹಾಸನ ಪ್ರಕ್ಷುಬ್ಧ
ಹಾಸನ

ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ಬರ್ಬರ ಹತ್ಯೆಯಿಂದ ಹಾಸನ ಪ್ರಕ್ಷುಬ್ಧ

June 3, 2022

ಹಾಸನ, ಜೂ.2-ಹಾಸನ ನಗರಸಭೆಯ 16ನೇ ವಾರ್ಡ್ ಜೆಡಿಎಸ್ ಸದಸ್ಯ ಪ್ರಶಾಂತ್ ನಾಗರಾಜ್ ಅವರನ್ನು ಬುಧವಾರ ಸಂಜೆ ಭೀಕರವಾಗಿ ಕೊಚ್ಚಿ ಕೊಲೆ ಮಾಡ ಲಾಗಿದ್ದು, ಈಗ ಹಾಸನ ನಗರ ಪ್ರಕ್ಷುಬ್ಧ ವಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಸನ ಜಿಲ್ಲಾಸ್ಪತ್ರೆ ಮುಂದೆ ತೀವ್ರ ಪ್ರತಿ ಭಟನೆ ನಡೆಸಿದ್ದು, ಪೆನ್ಷನ್ ಮೊಹಲ್ಲಾ ಠಾಣೆ ಇನ್ಸ್‍ಪೆಕ್ಟರ್ ರೇಣುಕಾಪ್ರಸಾದ್, ನಗರ ಠಾಣೆ ಇನ್ಸ್‍ಪೆಕ್ಟರ್ ಆರೋಗ್ಯಪ್ಪ, ಡಿವೈಎಸ್‍ಪಿ ಉದಯ ಭಾಸ್ಕರ್ ಅವ ರನ್ನು ಅಮಾನತುಪಡಿಸಬೇಕೆಂದು ಆಗ್ರಹಿಸಿದ್ದಾರೆ. ಈ ನಡುವೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವಿವರ: 16ನೇ ವಾರ್ಡ್‍ನ ನಗರಸಭಾ ಸದಸ್ಯ ಪ್ರಶಾಂತ್ ನಾಗರಾಜ್ ಬುಧವಾರ ಸಂಜೆ 7.30ರ ಸುಮಾರಿನಲ್ಲಿ ಹೋಂಡಾ ಆಕ್ಟೀವಾದಲ್ಲಿ ತೆರಳುತ್ತಿದ್ದಾಗ ಆಟೋದಲ್ಲಿ ಬಂದ ದುಷ್ಕರ್ಮಿ ಗಳು ಅವರನ್ನು ಅಡ್ಡ ಹಾಕಿದ್ದಾರೆ. ಪರಿಸ್ಥಿತಿಯ ತೀವ್ರತೆಯನ್ನು ಅರಿತ ಪ್ರಶಾಂತ್, ಸ್ಕೂಟರ್ ಅನ್ನು ಅಲ್ಲೇ ಬೀಳಿಸಿ ಓಡಲಾರಂಭಿಸಿ ದಾಗ ಆಟೋದಲ್ಲಿ ಬಂದಿದ್ದವರು ಮಾರಕಾಸ್ತ್ರಗಳಿಂದ ಮನಸೋ -ಇಚ್ಛೆ ಕೊಚ್ಚಿ ಅವರನ್ನು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿ ದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರು. ಪೆನ್ಷನ್ ಮೊಹಲ್ಲಾ ಠಾಣೆ ಪೊಲೀ ಸರು ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು. ಪ್ರಶಾಂತ್ ಹತ್ಯೆಯಿಂದ ಹಾಸನ ನಗರದಲ್ಲಿ ಪ್ರಕ್ಷುಬ್ಧ ವಾತಾ ವರಣ ನಿರ್ಮಾಣವಾಗಿದ್ದು, ಗುರುವಾರ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಮುಖ್ಯ ರಸ್ತೆಗಳಲ್ಲಿ ಜನ ಸಂಚಾರವೂ ಕಡಿಮೆಯಾಗಿತ್ತು. ಆದರೆ ಪ್ರಶಾಂತ್ ಮೃತದೇಹ ವಿದ್ದ ಜಿಲ್ಲಾಸ್ಪತ್ರೆ ಮುಂದೆ ಮಾಜಿ ಸಚಿವ ರೇವಣ್ಣ ಹಾಗೂ ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಭಟನೆ ಆರಂಭಿಸಿದರು. ಈ ಹತ್ಯೆಗೆ ಪೆನ್ಷನ್ ಮೊಹಲ್ಲಾ ಠಾಣೆಯ ಇನ್ಸ್‍ಪೆಕ್ಟರ್ ರೇಣುಕಾಪ್ರಸಾದ್ ಹಾಗೂ ಡಿವೈಎಸ್‍ಪಿ ಉದಯ ಭಾಸ್ಕರ್ ನೇರ ಕಾರಣಕರ್ತರಾಗಿದ್ದು, ಅವರನ್ನು ಕೂಡಲೇ ಅಮಾನತು ಮಾಡಬೇಕೆಂದೂ, ಅಮಾನತು ಮಾಡುವವರೆಗೂ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ರೇವಣ್ಣ ಪಟ್ಟು ಹಿಡಿದು, ಕುಳಿತಿದ್ದರು.

ಡಿವೈಎಸ್‍ಪಿ ಉದಯ ಭಾಸ್ಕರ್ ಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿ ಸುತ್ತಿದ್ದಾರೆ ಎಂದು ಆರೋಪಿಸಿದ ರೇವಣ್ಣ, ಪ್ರಶಾಂತ್ ಪತ್ನಿ ಸೌಮ್ಯ ದೂರು ನೀಡಲು ಹೋದಾಗ ಡಿವೈಎಸ್‍ಪಿ ಅವರು ಮೊದಲಿಗೆ ದುಷ್ಕರ್ಮಿಗಳು ಎಂದು ದೂರು ಬರೆಸಿ ಕೊಂಡು ಆನಂತರ ಮೂವರ ಹೆಸರನ್ನು ಮಾತ್ರ ಬರೆಯಬೇಕು ಎಂದು ಒತ್ತಡ ಹೇರಿ ಬೇರೆ ದೂರು ಬರೆಸಿಕೊಂಡಿದ್ದಾರೆ. ಇದು ಪ್ರಕರಣವನ್ನು ಮುಚ್ಚಿಹಾಕಲು ನಡೆಸಿರುವ ಕುತಂತ್ರ ಎಂದು ಆರೋಪಿಸಿದರು. ಜಿಲ್ಲಾ ಎಸ್ಪಿ ಶ್ರೀನಿವಾಸಗೌಡ, ಅಡಿಷನಲ್ ಎಸ್ಪಿ ನಂದಿನಿ ಅವರು ರೇವಣ್ಣರನ್ನು ಸಮಾಧಾನಪಡಿಸಿ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವಂತೆ ಮನವಿ ಮಾಡಿದಾಗ, ಮೂವರು ಅಧಿಕಾರಿಗಳು ಅಮಾನತ್ತಾಗುವವರೆಗೂ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ. ಅವರನ್ನು ಅಮಾನತುಪಡಿಸಿ ಅವರ ಮೊಬೈಲ್‍ಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಬೇಕು. ಈ ಅಧಿಕಾರಿಗಳು ಪೊಲೀಸ್ ಠಾಣೆಗಳನ್ನು ರೌಡಿಗಳ ಅಡ್ಡೆಗಳಾಗಿ ಮಾಡಿಕೊಂಡಿದ್ದಾರೆ ಎಂದು ಪಟ್ಟು ಹಿಡಿದರು. ಕೊನೆಗೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಐಜಿಪಿಯವರು ಆದೇಶ ನೀಡುತ್ತಿದ್ದಾರೆ ಎಂದು ತಿಳಿಸಿದ ನಂತರ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಮರಣೋತ್ತರ ಪರೀಕ್ಷೆಗೆ ಅನುವು ಮಾಡಿಕೊಟ್ಟರು. ಇಂದು ಸಂಜೆ ಪ್ರಶಾಂತ್ ಅಂತ್ಯಕ್ರಿಯೆ ಅವರ ಜಮೀನಿನಲ್ಲಿ ನೆರವೇರಿತು. ಪ್ರಶಾಂತ್ ಅಂತಿಮ ದರ್ಶನಕ್ಕೆ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ಅವರ ಸ್ನೇಹಿತರು ಆಗಮಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತಮ್ಮ ಪತಿಯನ್ನು ಆಟೋ (ಕೆಎ 46 6388)ದಲ್ಲಿ ಬಂದ ಪೂರ್ಣ ಚಂದ್ರ, ಅರುಣ ಮತ್ತಿತರರು ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪ್ರಶಾಂತ್ ಪತ್ನಿ ಸೌಮ್ಯ ದೂರು ಸಲ್ಲಿಸಿದ್ದಾರೆ. ಹತ್ಯೆ ನಡೆದ 24 ಗಂಟೆಯ ಒಳಗಾಗಿ ಪೊಲೀಸರು ಪೂರ್ಣಚಂದ್ರ ಮತ್ತು ಅರುಣ್‍ನನ್ನು ಬಂಧಿಸಿ, ಆಟೋರಿಕ್ಷಾ, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

Translate »