ಚಾಮುಂಡೇಶ್ವರಿ ರಥೋತ್ಸವ: ಇಂದು, ನಾಳೆ ಚಾ.ಬೆಟ್ಟ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ
ಮೈಸೂರು

ಚಾಮುಂಡೇಶ್ವರಿ ರಥೋತ್ಸವ: ಇಂದು, ನಾಳೆ ಚಾ.ಬೆಟ್ಟ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ

October 28, 2020

ಮೈಸೂರು, ಅ.27(ಪಿಎಂ)- ದಸರಾ ಜಂಬೂ ಸವಾರಿ ವೀಕ್ಷಣೆಯಿಂದ ವಂಚಿತ ರಾದ ಜನಸಾಮಾನ್ಯರಿಗೆ ಈ ಬಾರಿಯ ಚಾಮುಂಡೇಶ್ವರಿ ರಥೋತ್ಸವಕ್ಕೂ ಕೊರೊನಾ ತಡೆಯೊಡ್ಡಿದೆ. ಅ.29ರಂದು ಚಾಮುಂಡಿಬೆಟ್ಟದಲ್ಲಿ ಶ್ರೀ ಚಾಮುಂ ಡೇಶ್ವರಿ ರಥೋತ್ಸವ ಜರುಗಲಿದ್ದು, ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಅಂದು ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ.

ದಸರಾ ಮಹೋತ್ಸವದ ಬಳಿಕ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ರಥೋ ತ್ಸವ ಅದ್ಧೂರಿಯಾಗಿ ಜರುಗುವ ಸಂಪ್ರದಾಯ ನಡೆದು ಬಂದಿದೆ. ಚಾಮುಂಡೇ ಶ್ವರಿ ಉತ್ಸವಮೂರ್ತಿಯನ್ನು ದೊಡ್ಡ ರಥದಲ್ಲಿ ಪ್ರತಿಷ್ಠಾಪಿಸಿ ದೇವಾಲಯದ ಸುತ್ತ ಮೆರವಣಿಗೆ ನಡೆಸುವ ರಥೋತ್ಸವ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಾಗೂ ಪ್ರವಾಸಿಗರು ಸೇರುತ್ತಾರೆ. ಆದರೆ ಜನದಟ್ಟಣೆಗೆ ಕಡಿವಾಣ ಹಾಕುವ ಮೂಲಕ ಕೊರೊನಾ ತಡೆಗಟ್ಟಲು ಜಿಲ್ಲಾಡಳಿತ ಅಂದು ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದೆ. ಅ.28ರ ಸಂಜೆ 6ರಿಂದ ಅ.29ರ ಮಧ್ಯಾಹ್ನ 12ರವರೆಗೆ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರಿಗೆ ದೇವರ ದರ್ಶನ ರದ್ದುಪಡಿಸಿ, ಮೆಟ್ಟಿಲು ಮಾರ್ಗದಲ್ಲಿ ಸಾರ್ವಜನಿಕರು ಬೆಟ್ಟಕ್ಕೆ ಪ್ರವೇಶಿಸುವುದಕ್ಕೂ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ. ಪ್ರವೇಶ ನಿಷೇಧಿಸಿರುವ ದಿನಗಳಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಲ್ಪಟ್ಟ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು,

ಸರ್ಕಾರಿ ಕೆಲಸದ ನಿಮಿತ್ತ ತೆರಳುವ ಅಧಿಕಾರಿಗಳು, ತುರ್ತು ಸೇವಾ ವಾಹನಗಳು ಹಾಗೂ ಗ್ರಾಮಸ್ಥರ ವಾಹನಗಳನ್ನು ಹೊರತುಪಡಿಸಿ, ಸಾರ್ವಜನಿಕರ ಮತ್ತು ಖಾಸಗಿ ವಾಹನಗಳು ಬೆಟ್ಟಕ್ಕೆ ತೆರಳುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ನಿರ್ಬಂಧಿತ ಅವಧಿಯಲ್ಲಿ ದೇವಾ ಲಯದ ಪ್ರದೇಶದಲ್ಲಿ ದೇವಾಲಯ, ದಾನಿಗಳ ವತಿಯಿಂದ ಸಾಮೂಹಿಕ ಹಾಗೂ ಸಾರ್ವಜನಿಕವಾಗಿ ಪ್ರಸಾದ ತಯಾರಿಸಿ ವಿತರಿಸುವುದನ್ನು ನಿಷೇಧಿಸಲಾಗಿದೆ. ದೇವಾಲಯ ದಲ್ಲಿ ಜರುಗುವ ರಥೋತ್ಸವ ಸಂಬಂಧಿತ ಧಾರ್ಮಿಕ ಕಾರ್ಯಕ್ರಮಗಳು ಸಾಂಪ್ರದಾಯಿಕ ವಾಗಿ ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿ ಉಪಸ್ಥಿತಿಯಲ್ಲಿ ಎಂದಿನಂತೆ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಕೊರೊನಾ ತಡೆಗಟ್ಟುವ ಹಿನ್ನೆಲೆಯ ಸರ್ಕಾರ, ಧಾರ್ಮಿಕ ದತ್ತಿ ಆಯುಕ್ತರ ಆದೇಶ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲೇಖಿಸಿ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು (ಇಓ) ರಥೋತ್ಸವದಂದು ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅ.29ರಂದು ಬೆಳಿಗ್ಗೆ 9.45ರಿಂದ 10.05ರವರೆಗೆ ರಥೋತ್ಸವ ಜರುಗಲಿದೆ. ಸದರಿ ದಿನ ಹಾಗೂ ಇದರ ಹಿಂದಿನ ದಿನದ ರಾತ್ರಿಯಿಂದಲೇ ಚಾಮುಂಡಿಬೆಟ್ಟಕ್ಕೆ ಸುತ್ತಮುತ್ತಲ ಹಳ್ಳಿಗಳು ಹಾಗೂ ನಗರ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಭಕ್ತರು ಬೆಟ್ಟಕ್ಕೆ ಆಗಮಿಸುವುದು ಪ್ರತಿವರ್ಷ ನಡೆದುಬಂದಿದೆ. ಆದರೆ ಈ ಬಾರಿ ಜನದಟ್ಟಣೆ ಸೇರಿದರೆ ಕೊರೊನಾ ಹರಡುವ ಆತಂಕವಿದೆ. ಹೀಗಾಗಿ ನಿರ್ಬಂಧ ವಿಧಿಸಬೇಕೆಂದು ಚಾಮುಂಡೇಶ್ವರಿ ದೇವಾಲಯದ ಇಓ ಪ್ರಸ್ತಾವನೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.

Translate »