ಜು.17ರಿಂದ ಚಾಮುಂಡೇಶ್ವರಿ  ಅಮ್ಮನವರ ಪೂಜಾ ಮಹೋತ್ಸವ
ಮೈಸೂರು

ಜು.17ರಿಂದ ಚಾಮುಂಡೇಶ್ವರಿ  ಅಮ್ಮನವರ ಪೂಜಾ ಮಹೋತ್ಸವ

July 15, 2018

ಮೈಸೂರು:  ಮೈಸೂರಿನ ಕುವೆಂಪುನಗರ ಭಾವಸಾರ ಕ್ಷತ್ರಿಯ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಆಶ್ರಯದಲ್ಲಿ ಆಷಾಢ ಮಾಸದ ಅಂಗವಾಗಿ 4ನೇ ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ ಜು.17ರಿಂದ 19ರವರೆಗೆ ಕುವೆಂಪುನಗರದ ಬನಶಂಕರಿ ಮೈದಾನದಲ್ಲಿ ನೆರವೇರಲಿದೆ.

ಜು.17ರಂದು ಬೆಳಿಗ್ಗೆ 9 ಗಂಟೆಗೆ ಕುವೆಂಪುನಗರ 2ನೇ ಹಂತದ ಕೆಹೆಚ್‍ಬಿ ಕಾಲೋನಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ತೆರಳಿ ಬನಶಂಕರಿ ಮೈದಾನದಲ್ಲಿ ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಗುವುದು.

ಅದೇ ದಿನ ಸಂಜೆ 7 ಗಂಟೆಗೆ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಶೇ.65ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಗುವುದು. ಶಾಸಕ ಎಸ್.ಎ.ರಾಮದಾಸ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ವಿ.ರಾಜೀವ್, ಪಾಲಿಕೆ ಸದಸ್ಯರಾದ ಬಾಲಸುಬ್ರಹ್ಮಣ್ಯ, ಎಂ.ಕೆ.ಶಂಕರ್, ಸೀಮಾ ಪ್ರಸಾದ್, ಭಾವಸಾರ ಕ್ಷತ್ರಿಯ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಶಿವಾಜಿರಾವ್ ರಂಪೂರೆ, ಭಾವಸಾರ ಕ್ಷತ್ರಿಯ ಮಂಡಳಿ ಅಧ್ಯಕ್ಷ ಜಯರಾಮ್‍ರಾವ್ ಲಾಳಿಗೆ, ಕಾರ್ಯದರ್ಶಿ ಚೈತನ್ಯಕುಮಾರ್, ಬಿಜೆಪಿ ಮುಖಂಡ ರಾಜೇಶ್, ಕಾಂಗ್ರೆಸ್ ಮುಖಂಡ ಹೇಮಂತ್ ಇನ್ನಿತರರು ಭಾಗವಹಿಸಲಿದ್ದಾರೆ.

ಜು.18ರಂದು ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ, ಸಂಜೆ 5ಕ್ಕೆ ಭದ್ರಾವತಿಯ ಮಹಾರಾಜ ಲಕ್ಷ್ಮಣರಾವ್ ಘೋರಾತ್ ಮತ್ತು ತಂಡದವರಿಂದ ಅಂಬಾ ಭವಾನಿ ದೇವಿಯ ಮಹಾಗೋಂದಳಿ ಪೂಜೆ ನಡೆಯಲಿದೆ. ಜು.19ರಂದು ಬೆಳಿಗ್ಗೆ 10.30ಕ್ಕೆ ಮೈಸೂರಿನಿಂದ ಹೊರಟು ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದ ಬಳಿ ಕಾವೇರಿ ನದಿಯಲ್ಲಿ ದೇವಿಯ ವಿಗ್ರಹ ವಿಸರ್ಜಿಸಲಾಗುವುದು ಎಂದು ಸಂಘದ ಕಾರ್ಯದರ್ಶಿ ಗೋಪಾಲರಾವ್ ಕುತ್ನೀಕರ್ ತಿಳಿಸಿದ್ದಾರೆ.

Translate »