ಚಾಮುಂಡಿಬೆಟ್ಟದಲ್ಲಿ ಮೈಸೂರು ಪಾಕ್ ಹಬ್ಬ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಮೈಸೂರು ಪಾಕ್ ಹಬ್ಬ

July 15, 2018

ಮೈಸೂರು: ಮೈಸೂರಿನ ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿಬೆಟ್ಟದಲ್ಲಿ ಶನಿವಾರ ಮೈಸೂರು ಪಾಕ್ ಹಬ್ಬ ಆಚರಿಸಲಾಯಿತು. ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಮೈಸೂರು ಪಾಕ್ ವಿತರಿಸಿ ಅದರ ಇತಿಹಾಸ, ಮಹತ್ವ ಮತ್ತು ಮೈಸೂರಿನ ಸಾಂಸ್ಕೃತಿಕ ಹಿರಿಮೆಯನ್ನು ವಿವರಿಸಲಾಯಿತು.

ಈ ಸಂದರ್ಭದಲ್ಲಿ ಅಡುಗೆ ಸಂಘದ ಉಪಾಧ್ಯಕ್ಷ ಹೆಚ್.ಎನ್.ಶ್ರೀಧರಮೂರ್ತಿ, ಮಾತನಾಡಿ, ಸಂತೋಷದ ಸಂಕೇತ ಸಿಹಿ. ಆದರೆ ಇದು ಕೆಲವರ ಆರೋಗ್ಯಕ್ಕೆ ಹಾನಿಕರ ಎಂದು ಭಾವಿಸಲಾಗುತ್ತಿದೆ. ಆದರೆ ಮೈಸೂರು ಪಾಕ್ ತಿಂದರೆ ಆರೋಗ್ಯ ವೃದ್ಧಿಸುತ್ತದೆ. ಕಡಲೆ ಹಿಟ್ಟು ಚರ್ಮದ ಕಾಯಿಲೆ ಗುಣಪಡಿಸುತ್ತದೆ. ಸಕ್ಕರೆಯಲ್ಲಿ ಆಮ್ಲಜನಕ ಹೆಚ್ಚಾಗಿದ್ದು, ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.

ತುಪ್ಪದ ಅಂಶದಿಂದ ಮೂಳೆ ಸವೆತ ನಿವಾರಣೆಯಾಗುತ್ತದೆ. ಅದಕ್ಕಾಗಿಯೇ ಚಿಕ್ಕ ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಮೈಸೂರು ಪಾಕ್ ತಿನ್ನಲು ಅಚ್ಚುಮೆಚ್ಚು. ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಯಾಗಿರುವ ಮೈಸೂರು ಪಾಕ್ ಇಂದು ವಿಶ್ವಾದ್ಯಂತ ತನ್ನ ಹಿರಿಮೆ ಸಾರುತ್ತಿದೆ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆ ಮೈಸೂರು ಪಾಕ್ ತಯಾರಿಸುವ ಅಡುಗೆ ಉದ್ಯಮವನ್ನು ಸೃಷ್ಟಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಮುಳ್ಳೂರು ಗುರುಪ್ರಸಾದ್, ವಿನಯ್ ಕಣಿಗಾಲ್, ಶ್ರೀಕಾಂತ್ ಕಶ್ಯಪ್, ಡಿ.ಕೆ.ನಾಗಭೂಷಣ್, ರಂಗನಾಥ್, ಜಯಸಿಂಹ, ಸುರೇಶ್ ಇನ್ನಿತರರು ಭಾಗವಹಿಸಿದ್ದರು

Translate »