ಚಾಮುಂಡಿಬೆಟ್ಟದ ನಂದಿಗೆ ನೂರೊಂದು ಮಸ್ತಕಾಭಿಷೇಕ
ಮೈಸೂರು

ಚಾಮುಂಡಿಬೆಟ್ಟದ ನಂದಿಗೆ ನೂರೊಂದು ಮಸ್ತಕಾಭಿಷೇಕ

November 13, 2018

ಮೈಸೂರು:  ಕಾರ್ತಿಕ ಮಾಸದ ಮೊದಲ ಸೋಮವಾರವಾದ ಇಂದು ಚಾಮುಂಡಿಬೆಟ್ಟದ ನಂದಿಗೆ ಬೆಟ್ಟ ಹತ್ತುವ ಬಳಗದ ವತಿಯಿಂದ ನೂರೊಂದು ದ್ರವ್ಯಗಳಿಂದ ಶಾಸ್ತ್ರೋಕ್ತವಾಗಿ ಮಸ್ತಕಾಭಿಷೇಕ ನೆರವೇರಿಸಲಾಯಿತು.

ಪ್ರತಿ ಶುಕ್ರವಾರ ಚಾಮುಂಡಿಬೆಟ್ಟ ಹತ್ತುವ ಭಕ್ತರು `ಬೆಟ್ಟ ಹತ್ತುವ ಬಳಗ’ ಸಂಘಟನೆ ಅಸ್ತಿತ್ವಕ್ಕೆ ತಂದು, ಕಳೆದ 8 ವರ್ಷದಿಂದ ಕಾರ್ತಿಕ ಮಾಸದ ಮೊದಲ ಸೋಮವಾರ ಬೆಟ್ಟದ ನಂದಿ ಮೂರ್ತಿಗೆ ಮಸ್ತಕಾಭಿಷೇಕ ನೆರವೇರಿಸುತ್ತಾ ಬಂದಿದ್ದಾರೆ. ಇಂದು ಬೆಳಿಗ್ಗೆ 10.30ಕ್ಕೆ ಆರಂಭವಾದ ಈ ಮಹಾಭಿಷೇಕ ಮಧ್ಯಾಹ್ನ 1.30ರವರೆಗೂ ನಡೆಯಿತು. ಶಾಸ್ತ್ರೋಕ್ತವಾಗಿ ನಡೆದ ಈ ಧಾರ್ಮಿಕ ಕಾರ್ಯದಲ್ಲಿ ನಂದಿ ಮೂರ್ತಿಗೆ 500 ಲೀ. ಹಾಲು, 250 ಲೀ. ಮೊಸರು, ಹರಿಶಿನ, ಕುಂಕುಮ, ರಕ್ತಚಂದನ, ಶ್ರೀಗಂಧ, ಎಳ ನೀರು, ಕಬ್ಬಿನ ಹಾಲು, ಭಸ್ಮ, ನಾಣ್ಯ, ಬಿಲ್ವ ಪತ್ರೆ, ಹೂವು, ಕಷಾಯ, ಒಣದ್ರಾಕ್ಷಿ, ಕರ್ಜೂರ ಹಾಗೂ ವಿವಿಧ ಹಣ್ಣುಗಳು ಸೇರಿದಂತೆ 101 ಬಗೆಯ ಫಲಪುಷ್ಪ, ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು.

ನೂರಾರು ಪ್ರವಾಸಿಗರು ಹಾಗೂ ಭಕ್ತರು ನಂದಿ ಮೂರ್ತಿಗೆ ನೆರವೇರಿಸಲಾಗುತ್ತಿದ್ದ ಮಸ್ತಕಾಭಿಷೇಕವನ್ನು ಕಣ್ತುಂಬಿಕೊಂಡರು. ಆರು ಮಂದಿ ಅರ್ಚಕರು ಮಂತ್ರಘೋಷ ಪಠಿಸುವುದರೊಂದಿಗೆ, ಅವರು ನೀಡಿದ ಸೂಚನೆಯ ಮೇರೆಗೆ ಬೆಟ್ಟ ಹತ್ತುವ ಬಳಗದ ಸುಮಾರು 50 ಸದಸ್ಯರು ನಂದಿ ಮೂರ್ತಿಗೆ ಅಭಿಷೇಕ ನೆರವೇರಿಸಿದರು.

ಬೆಟ್ಟ ಹತ್ತುವ ಬಳಗದ ಸದಸ್ಯ ಮಹ ದೇವು ಈ ಸಂದರ್ಭದಲ್ಲಿ ಮಾತನಾಡಿ, ಪ್ರತಿ ಶುಕ್ರವಾರ ಚಾಮುಂಡಿಬೆಟ್ಟ ಹತ್ತುವ ಭಕ್ತರು `ಬೆಟ್ಟ ಹತ್ತುವ ಬಳಗ’ ರಚಿಸಿಕೊಂಡಿ ದ್ದೇವೆ. ಕಳೆದ 8 ವರ್ಷಗಳಿಂದ ನಂದಿ ಮೂರ್ತಿಗೆ ಮಸ್ತಕಾಭಿಷೇಕ ನೆರವೇರಿಸಿ ಕೊಂಡು ಬಂದಿದ್ದೇವೆ. ಯಾರಿಂದಲೂ ದೇಣಿಗೆ ಸಂಗ್ರಹಿಸದೆ ಬಳಗದ ಸದಸ್ಯರೇ ಹಣವನ್ನು ಸಂಗ್ರಹಿಸಿ ಈ ಧಾರ್ಮಿಕ ಕಾರ್ಯ ನೆರವೇರಿಸಿಕೊಂಡು ಬರುತ್ತಿ ದ್ದೇವೆ ಎಂದರು.

ಲೋಕಕಲ್ಯಾಣಕ್ಕಾಗಿ: ಅರ್ಚಕ ಮಲ್ಲಿ ಕಾರ್ಜುನ ಮಾತನಾಡಿ, ಲೋಕ ಕಲ್ಯಾಣ ಕ್ಕಾಗಿ ನಂದಿ ಮೂರ್ತಿಗೆ ಕಾರ್ತಿಕ ಮಾಸ ದಲ್ಲಿ ಮಸ್ತಕಾಭಿಷೇಕ ನೆರವೇರಿಸಲಾಗುತ್ತಿದೆ. ಬೆಟ್ಟ ಹತ್ತುವ ಬಳಗ ಸದಸ್ಯರು ನಡೆಸುತ್ತಿರುವ ಈ ಮಸ್ತಕಾಭಿಷೇಕ ಸ್ತುತ್ಯಾರ್ಹ ಕಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಬೆಟ್ಟ ಹತ್ತುವ ಬಳಗದ ಸದಸ್ಯರಾದ ಪ್ರವೀಣ್, ಶ್ರೀಧರ್, ರವಿ, ವಿನಯ್ ಸೇರಿದಂತೆ ಇನ್ನಿತರರು ತಮ್ಮ ಕುಟುಂಬದ ಸದಸ್ಯರೊಂದಿಗೆ ಉಪಸ್ಥಿತರಿದ್ದರು.

Translate »