ಮಾಜಿ ಶಾಸಕ ಎಂ.ಕೆ.ಸೋಮಶೇಖರ್  ಕಾರು ಕದ್ದಿದ್ದ ಹೈಟೆಕ್ ಖದೀಮನ ಬಂಧನ
ಮೈಸೂರು

ಮಾಜಿ ಶಾಸಕ ಎಂ.ಕೆ.ಸೋಮಶೇಖರ್  ಕಾರು ಕದ್ದಿದ್ದ ಹೈಟೆಕ್ ಖದೀಮನ ಬಂಧನ

November 13, 2018

ಮೈಸೂರು: ಸರ್ವೀಸ್‍ಗೆ ಬಿಡಲಾಗಿದ್ದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರ ಹೊಸ ಇನ್ನೋವಾ ಕಾರು ಸೇರಿದಂತೆ 50 ಲಕ್ಷ ರೂ. ಮೌಲ್ಯದ 3 ಕಾರು ಹಾಗೂ 2 ದ್ವಿಚಕ್ರ ವಾಹನಗಳ ಕದ್ದಿದ್ದ ಹೈಟೆಕ್ ಖದೀಮನನ್ನು ಮೈಸೂರು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಬಿಟಿಎಂ ಲೇಔಟ್, 1ನೇ ಹಂತದ ಗುರಪ್ಪನಪಾಳ್ಯ ನಿವಾಸಿ ಪಿಲ್ಲಾಕಲ್ ನಜೀರ್ ಅಲಿಯಾಸ್ ಪಿ.ನಜೀರ್(56) ಬಂಧಿತ ಕಾರುಗಳ್ಳ. ನವೆಂಬರ್ 6ರಂದು ಬೆಂಗಳೂರಿನಲ್ಲಿ ಆತನನ್ನು ಸೆರೆ ಹಿಡಿದ ಪೊಲೀಸರು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ದೇವರಾಜ, ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

ಮಾರುತಿ ಎಸ್.ಕ್ರಾಸ್, ಮಾರುತಿ 800, ಇನ್ನೋವಾ ಕ್ರಿಸ್ಟ್ ಕಾರುಗಳು, ಹೋಂಡಾ ಆಕ್ಟೀವಾ ಮತ್ತು ಟಿವಿಎಸ್ ಎನ್‍ಟಾರ್ಕ್ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿ ಯಾದರು. ಜುಲೈ ಮಾಹೆಯಲ್ಲಿ ವಿಜಯನಗರ ಠಾಣಾ ವ್ಯಾಪ್ತಿಯ ಟೊಯೋಟಾ ಸರ್ವೀಸ್ ಸ್ಟೇಷನ್‍ನಲ್ಲಿ ಬಿಟ್ಟಿದ್ದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರ ಹೊಸ ಬಿಳಿ ಬಣ್ಣದ ಟೊಯೋಟಾ ಇನ್ನೋವಾ ಕಾರನ್ನು ಕಳವು ಮಾಡಿದ್ದ ಪಿಲ್ಲಾಕಲ್ ನಜೀರ್, ಸೆಪ್ಟೆಂಬರ್ ತಿಂಗಳಲ್ಲಿ ದಾಸಪ್ಪ ಸರ್ಕಲ್ ಬಳಿಯ ಮಾಂಡೋವಿ ಮೋಟಾರ್ ಷೋರೂಂ ಆವರಣದಿಂದ ಮಾರುತಿ ಎಸ್ ಕ್ರಾಸ್ ಕಾರಿನೊಂದಿಗೆ ಪರಾರಿಯಾಗಿದ್ದ. ಆರೋಪಿತನ ಬಂಧನದಿಂದಾಗಿ ಮೈಸೂರಿನ ದೇವರಾಜ ಠಾಣೆಯ 2, ವಿಜಯನಗರ ಠಾಣೆಯ 1, ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆಯ 1 ಹಾಗೂ ಹಲಸೂರು ಪೊಲೀಸ್ ಠಾಣೆಯ 1 ಪ್ರಕರಣ ಪತ್ತೆಯಾದಂತಾ ಗಿದ್ದು, ಪೊಲೀಸರು 50 ಲಕ್ಷ ರೂ. ಬೆಲೆ ಬಾಳುವ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇನ್ನೋವಾ ಕಾರನ್ನು ತಮಿಳುನಾಡಿನ ಚೆನ್ನೈನಲ್ಲೂ, ಉಳಿದ ವಾಹನಗಳನ್ನು ಬೆಂಗಳೂರಿನ ವಿವಿಧೆಡೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದ ಪಿಲ್ಲಾಕಲ್ ನಜೀರ್, ಆ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಲಿಂಗ್ ಗ್ಲಾಸ್, ಶೂ, ಒಳ್ಳೆ ಬಟ್ಟೆ ಧರಿಸಿ, ಟಿಪ್‍ಟಾಪ್ ಆಗಿ ಬಂದು ಕಾರು ಖರೀದಿ ನೆಪದಲ್ಲಿ ಟ್ರಯಲ್ ನೋಡಲು ಮಾಂಡೋವಿ ಮೋಟಾರ್ಸ್ ಷೋ ರೂಂನಿಂದ ಎಸ್ ಕ್ರಾಸ್ ಕಾರನ್ನು ತೆಗೆದು ಕೊಂಡು ಹೋದ ಗಿರಾಕಿ ವಾಪಸ್ ಬಂದಿರಲಿಲ್ಲ. ಅದೇ ರೀತಿ ಹೊಸ ಕಾರನ್ನು ಫ್ರೀ ಸರ್ವೀಸ್‍ಗೆ ಬಿಟ್ಟಿರುವವನಂತೆ ಬಂದು ಹೊಸ ಟೊಯೋಟಾ ಇನ್ನೋವಾ ಕ್ರಿಸ್ಟ್ ಕಾರನ್ನು ಕಳವು ಮಾಡಿದ್ದನು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ದೇವರಾಜ ಮತ್ತು ವಿಜಯನಗರ ಠಾಣೆ ಪೊಲೀಸರು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಫುಟೇಜ್‍ಗಳ ಸುಳಿವಿನ ಜಾಡು ಹಿಡಿದು ನವೆಂಬರ್ 6ರಂದು ಆರೋಪಿಯನ್ನು ಬೆಂಗಳೂರಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ.ವಿಕ್ರಂ ವಿ.ಅಮಟೆ ಅವರ ಮಾರ್ಗದರ್ಶನದಲ್ಲಿ ದೇವರಾಜ ಉಪ ವಿಭಾಗದ ಎಸಿಪಿ ಜಿ.ಎಸ್.ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದೇವರಾಜ ಠಾಣೆ ಇನ್‍ಸ್ಪೆಕ್ಟರ್ ಪ್ರಸನ್ನಕುಮಾರ್, ಸಬ್ ಇನ್‍ಸ್ಪೆಕ್ಟರ್ ಎಸ್.ರಾಜು, ಸಿಬ್ಬಂದಿಗಳಾದ ಸೋಮಶೆಟ್ಟಿ, ಸುರೇಶ್, ವೇಣುಗೋಪಾಲ್, ಮಂಜುನಾಥ್, ಉಮೇಶ್, ಪ್ರಕಾಶ್, ಕೆ.ಎಸ್.ನಂದೀಶ್ ಹಾಗೂ ವೆಂಕಟೇಶ್ ಪಾಲ್ಗೊಂಡಿದ್ದರು. ಪತ್ತೆ ಕಾರ್ಯವನ್ನು ಮೈಸೂರು ನಗರದ ಪ್ರಭಾರ ಪೊಲೀಸ್ ಆಯುಕ್ತರಾದ ದಕ್ಷಿಣ ವಲಯ ಐಜಿಪಿ ಕೆ.ವಿ.ಶರತ್‍ಚಂದ್ರ ಅವರು ಪ್ರಶಂಸಿಸಿದ್ದಾರೆ.

Translate »