ಎಂಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಜಿ.ಡಿ.ಹರೀಶ್‍ಗೌಡರ ಬಣ ಜಯಭೇರಿ
ಮೈಸೂರು

ಎಂಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಜಿ.ಡಿ.ಹರೀಶ್‍ಗೌಡರ ಬಣ ಜಯಭೇರಿ

November 13, 2018

ಮೈಸೂರು: ಪ್ರತಿಷ್ಟಿತ ಮೈಸೂರು ಮತ್ತು ಚಾಮರಾಜನಗರ ಸಹಕಾರ ಕೇಂದ್ರ(ಎಂಸಿಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರ ಪುತ್ರ, ಜಿ.ಡಿ.ಹರೀಶ್‍ಗೌಡರ ಬಣ ಭರ್ಜರಿ ಜಯಭೇರಿ ಭಾರಿಸಿದೆ. ಹಾಲಿ ಅಧ್ಯಕ್ಷ ಎಸ್.ಚಂದ್ರಶೇಖರ್ ಭಾರೀ ಅಂತರದಲ್ಲಿ ಪರಾಭವಗೊಂಡಿದ್ದಾರೆ.

ಮೈಸೂರು ಹಾಗೂ ಚಾಮರಾಜ ನಗರ ಜಿಲ್ಲೆಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ(1)ದಲ್ಲಿ ತಿ.ನರಸೀಪುರ ಕ್ಷೇತ್ರದಿಂದ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಹುಣ ಸೂರಿನಿಂದ ಜಿಟಿಡಿ ಪುತ್ರ ಜಿ.ಡಿ.ಹರೀಶ್ ಗೌಡ, ಕೆ.ಆರ್.ನಗರದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್ ಪುತ್ರ ಅಮಿತ್ ವಿ.ದೇವರಹಟ್ಟಿ, ಕೊಳ್ಳೇ ಗಾಲದಿಂದ ಶಾಸಕ ಆರ್.ನರೇಂದ್ರ ಹಾಗೂ ಯಳಂದೂರಿನಿಂದ ವೈ.ಎಂ.ಜಯರಾಮು ಅವಿರೋಧವಾಗಿ ಆಯ್ಕೆಯಾಗಿದ್ದು, ಈ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದವರೆಲ್ಲಾ ಜಿ.ಡಿ.ಹರೀಶ್‍ಗೌಡರ ಬಣದವರೇ ಆಗಿದ್ದಾರೆ.

ಫಲಿತಾಂಶ ಸಾರಾಂಶ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ(1), ಮೈಸೂರು ತಾಲೂಕಿನಿಂದ ಸ್ಪರ್ಧಿಸಿದ್ದ ಎಂ.ಕುಮಾರ್ 11 ಮತಗಳೊಂದಿಗೆ ಜಯಭೇರಿ ಭಾರಿಸಿದ್ದು, ಪ್ರತಿಸ್ಪರ್ಧಿ ಮೆಲ್ಲಹಳ್ಳಿ ಮಹದೇವಸ್ವಾಮಿ 8 ಮತಗಳೊಂದಿಗೆ ಪರಾಭವಗೊಂಡಿದ್ದಾರೆ. ಹೆಚ್.ಡಿ.ಕೋಟೆಯಿಂದ ಜಿ.ಸಿ.ಸಿಂಗೇಗೌಡ(7 ಮತ), ಕೆ.ಲೋಕೇಶ್ (5 ಮತ) ವಿರುದ್ಧ, ಗುಂಡ್ಲುಪೇಟೆಯಿಂದ ಎಂ.ಪಿ.ಸುನೀಲ್(19 ಮತ), ಎನ್.ಮಹದೇವಪ್ಪ (8 ಮತ) ವಿರುದ್ಧ, ನಂಜನಗೂಡಿನಿಂದ ಜಿಪಂ ಸದಸ್ಯ ಬಿ.ಎನ್.ಸದಾನಂದ (18 ಮತ), ಬಿ.ಎಸ್.ಮಹೇಶ್ (6 ಮತ) ವಿರುದ್ಧ, ಪಿರಿಯಾಪಟ್ಟಣದಿಂದ ಸಿ.ಎನ್.ರವಿ(20 ಮತ), ಪುಟ್ಟರಾಜು (2 ಮತ) ವಿರುದ್ಧ ಗೆಲುವು ಸಾಧಿಸಿದ್ದಾರೆ. ಇನ್ನು ಚಾಮರಾಜನಗರದಿಂದ ಸ್ಪರ್ಧಿಸಿದ್ದ ಬಿ.ಜಿ.ನಾಗೇಂದ್ರ ಕುಮಾರ್ ಹಾಗೂ ಕೆ.ಎಂ.ಶಿವಶಂಕರ್‍ಗೆ ಸಮಾನ ತಲಾ 10 ಮತಗಳು ಚಲಾವಣೆಯಾದ ಹಿನ್ನೆಲೆಯಲ್ಲಿ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಅದರಲ್ಲಿ ಹರೀಶ್‍ಗೌಡ ಬಣದ ಬಿ.ಜಿ.ನಾಗೇಂದ್ರ ಕುಮಾರ್‍ಗೆ ಅದೃಷ್ಟ ಕೈ ಹಿಡಿದು, ಗೆಲುವಿನ ನಗೆ ಬೀರಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರ(2)ದಿಂದ ಸ್ಪರ್ಧಿಸಿದ್ದ ಕೆ.ಜಿ.ಮಹೇಶ್ 7 ಮತಗಳೊಂದಿಗೆ ಆಯ್ಕೆಯಾಗಿದ್ದು, ಪ್ರತಿಸ್ಪರ್ಧಿ ಸಿ.ಮಹೇಶ್ 2 ಮತ ಹಾಗೂ ಪಿ.ಎನ್.ಚಂದ್ರಶೇಖರ್ ಶೂನ್ಯ ಸಂಪಾದನೆಯೊಂದಿಗೆ ಸೋಲನ್ನಪ್ಪಿದ್ದಾರೆ. ಪಟ್ಟಣ ಸಹಕಾರಿ ಬ್ಯಾಂಕ್‍ಗಳು ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳ ಕ್ಷೇತ್ರ(3)ದಿಂದ ಕಣಕ್ಕಿಳಿದಿದ್ದ ನಗರ ಪಾಲಿಕೆ ಸದಸ್ಯ ಎಸ್‍ಬಿಎಂ ಮಂಜು ಹಾಗೂ ಡಾ.ಎಂ.ಬಿ.ಮಂಜೇಗೌಡ ತಲಾ 12ರಂತೆ ಸಮಾನ ಮತ ಗಳಿಸಿಕೊಂಡಿದ್ದರಿಂದ ನಡೆಸಲಾದ ಲಾಟರಿಯಲ್ಲಿ ಡಾ.ಮಂಜೇಗೌಡ ಆಯ್ಕೆಯಾದರು. ಬಳಕೆದಾರರ ಸಹಕಾರ ಸಂಘಗಳು(ಕನ್‍ಸ್ಯೂಮರ್ಸ್) ಹಾಗೂ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ(4)ದಲ್ಲಿ ಹೆಚ್.ಜೆ.ನಾಗಪ್ರಸಾದ್ 20 ಮತಗಳೊಂದಿಗೆ ಜಯಗಳಿಸಿದರೆ, ಎದುರಾಳಿಗಳಾಗಿದ್ದ ಎಂ.ಮೀನಾಕ್ಷಿ 5 ಹಾಗೂ ಪಿ.ಶ್ರೀಕಂಠಮೂರ್ತಿ 3 ಮತ ಪಡೆದು ಭಾರೀ ಅಂತರದಲ್ಲಿ ಸೋಲುಂಡರು.

ತಾಲೂಕು, ಜಿಲ್ಲೆ ಹಾಗೂ ಜಿಲ್ಲಾ ಮೇಲ್ಪಟ್ಟು ಕಾರ್ಯವ್ಯಾಪ್ತಿ ಹೊಂದಿರುವ ಸಹಕಾರ ಸಂಘಗಳು ಹಾಗೂ ಬ್ಯಾಂಕ್‍ಗಳ ಕ್ಷೇತ್ರ(5)ದಿಂದ ಸ್ಪರ್ಧಿಸಿದ್ದ ಎಂಸಿಡಿಸಿಸಿ ಹಾಲಿ ಅಧ್ಯಕ್ಷ ಎಸ್.ಚಂದ್ರಶೇಖರ್ 9 ಮತಗಳೊಂದಿಗೆ ಸೋಲು ಕಂಡಿದ್ದಾರೆ.

ಪ್ರತಿಸ್ಪರ್ಧಿಯಾಗಿದ್ದ ಜಿಪಂ ಮಾಜಿ ಉಪಾಧ್ಯಕ್ಷ ಹೆಚ್.ಸುಬ್ಬಯ್ಯ 21 ಮತಗಳೊಂದಿಗೆ ಹಾಲಿ ಅಧ್ಯಕ್ಷರನ್ನು ಮಣಿಸಿ, ಜಯಶೀಲರಾಗಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಹೊರತುಪಡಿಸಿ, ಉಳಿದ 6 ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಸಹಕಾರ ಸಂಘಗಳ ಕ್ಷೇತ್ರ(6)ದಿಂದ ಸ್ಪರ್ಧಿಸಿದ್ದ ಕೆ.ಎಸ್.ಕುಮಾರ್ 301 ಭಾರೀ ಬಹುಮತಗಳೊಂದಿಗೆ ಅದ್ವಿತೀಯ ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿ ಎ.ಟಿ.ಸೋಮಶೇಖರ್ 9 ಮತಗಳೊಂದಿಗೆ ಸೋಲನ್ನಪ್ಪಿದ್ದಾರೆ. ಹಾಗೆಯೇ ಮೈಸೂರು ಜಿಲ್ಲೆಯ ನಂಜನಗೂಡು ಹಾಗೂ ಚಾಮರಾಜನಗರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಸಹಕಾರ ಸಂಘಗಳ ಕ್ಷೇತ್ರ(7)ದಿಂದ ಎಸ್.ಎಂ.ಕೆಂಪಣ್ಣ 35 ಮತಗಳೊಂದಿಗೆ ಆಯ್ಕೆಯಾಗಿದ್ದು, ಪ್ರತಿಸ್ಪರ್ಧಿ ಕೆ.ಎಂ.ಮಾದಪ್ಪ 17 ಮತ ಪಡೆದು ಸೋಲು ಕಂಡಿದ್ದಾರೆ.

ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರದಲ್ಲಿ ಸೋಮವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಶಾಂತಿಯುತ ಮತದಾನ ನಡೆಯಿತು. ಬಳಿಕ ನಡೆದ ಮತ ಎಣಿಕೆ ಕಾರ್ಯದಲ್ಲೂ ಯಾವುದೇ ಗೊಂದಲ ಸೃಷ್ಟಿಯಾಗಲಿಲ್ಲ. ಚುನಾವಣಾಧಿಕಾರಿಯಾಗಿದ್ದ ಮೈಸೂರು ಉಪ ವಿಭಾಗಾಧಿಕಾರಿ ಹೆಚ್.ಎನ್.ಶಿವೇಗೌಡ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಿರ್ವಿಘ್ನವಾಗಿ ಪೂರ್ಣಗೊಂಡಿದ್ದು, ಶೀಘ್ರವೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ.

ನಿರ್ದೇಶಕರಾಗಿ ಕಣದಲ್ಲಿದ್ದವರು: ನೂತನವಾಗಿ ಆಯ್ಕೆಯಾದವರಲ್ಲಿ ಜಿ.ಡಿ.ಹರೀಶ್‍ಗೌಡ, ಸಿ.ಬಸವೇಗೌಡ, ಅಮಿತ್ ವಿ.ದೇವರಟ್ಟಿ, ಆರ್.ನರೇಂದ್ರ ಹಾಗೂ ಎಂ.ಪಿ.ಸುನೀಲ್ ಪುನರಾಯ್ಕೆಯಾಗಿದ್ದು ಉಳಿದ ನಿರ್ದೇಶಕರು ಹೊಸಬರಾಗಿದ್ದಾರೆ.

ಪುನರಾಯ್ಕೆ ಬಯಸಿ ಸ್ಪರ್ಧಿಸಿದ್ದ ಕೆ.ಎಂ.ಶಿವಶಂಕರ್, ಎ.ಟಿ.ಸೋಮಶೇಖರ್, ಕೆ.ಲೋಕೇಶ್, ಎಸ್‍ಬಿಎಂ ಮಂಜು, ಎನ್.ಮಹದೇವಪ್ಪ, ಮೆಲ್ಲಹಳ್ಳಿ ಮಹದೇವಸ್ವಾಮಿ ಪರಾಭವಗೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರಾದ ಮೆಲ್ಲಹಳ್ಳಿ ಮಹದೇವಸ್ವಾಮಿ ಅವರನ್ನು ಜಿ.ಡಿ.ಹರೀಶ್‍ಗೌಡ ಬಣದ ಎಂ.ಕುಮಾರ್ ಮಣಿಸಿದ್ದಾರೆ.

ಹಾಲಿ ಅಧ್ಯಕ್ಷರ ಸೋಲು: ತಾಲೂಕು, ಜಿಲ್ಲೆ ಹಾಗೂ ಜಿಲ್ಲಾ ಮೇಲ್ಪಟ್ಟು ಕಾರ್ಯವ್ಯಾಪ್ತಿ ಹೊಂದಿರುವ ಸಹಕಾರ ಸಂಘಗಳು ಹಾಗೂ ಬ್ಯಾಂಕ್‍ಗಳ ಕ್ಷೇತ್ರ(5)ದಿಂದ ಸ್ಪರ್ಧಿಸಿದ್ದ ಎಂಸಿಡಿಸಿಸಿ ಹಾಲಿ ಅಧ್ಯಕ್ಷ ಎಸ್.ಚಂದ್ರಶೇಖರ್ ಪರಾಭವಗೊಂಡಿದ್ದಾರೆ.

ಇವರ ವಿರುದ್ಧ ಸ್ಪರ್ಧಿಸಿದ್ದ ಜಿಪಂ ಮಾಜಿ ಉಪಾಧ್ಯಕ್ಷ, ದಲಿತ ಸಮುದಾಯದ ಮುಖಂಡ ಹೆಚ್.ಸುಬ್ಬಯ್ಯ 21 ಮತ ಪಡೆದು 12 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಒಟ್ಟಾರೆ 17 ನಿರ್ದೇಶಕ ಸ್ಥಾನಗಳಲ್ಲಿ ಶಾಸಕ ನರೇಂದ್ರ ಹಾಗೂ ವೈ.ಎಂ.ಜಯರಾಮು ಹೊರತುಪಡಿಸಿದಂತೆ ಜಿ.ಡಿ.ಹರೀಶ್‍ಗೌಡರ ಬಣದಿಂದ 15 ಮಂದಿ ಆಯ್ಕೆಯಾದಂತಾಗಿದೆ.

Translate »