ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿಯ ಬೇರಿಗೆ ನೀರೆರೆದು ಪೋಷಿಸಿದ ಕೇಂದ್ರ ಸಚಿವ ಅನಂತಕುಮಾರ್ (59) ಇಂದಿಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಶ್ವಾಸಕೋಶ ಕ್ಯಾನ್ಸರ್‍ನಿಂದ ತೀವ್ರವಾಗಿ ಬಳಲುತ್ತಿದ್ದ ಅವರು ಇಂದು ಮುಂಜಾನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು.
ಪತ್ನಿ ತೇಜಸ್ವಿನಿ, ಮಕ್ಕಳಾದ ಐಶ್ವರ್ಯ, ವಿಜೇತ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿರುವ ಅನಂತಕುಮಾರ್ ಕಳೆದ 1996 ರಿಂದ ಸತತ ವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕ ಸಭೆಗೆ ಆಯ್ಕೆಯಾಗಿ ಉಭಯ ಸರ್ಕಾರ ಹಾಗೂ ಪಕ್ಷದಲ್ಲಿ ದೆಹಲಿ ಮತ್ತು ಕರ್ನಾಟಕದ ಕೊಂಡಿ ಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅದರಲ್ಲೂ ನೆಲ, ಜಲ, ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಯಾವುದೇ ಸರ್ಕಾರವಿದ್ದರೂ, ಅದರೊಟ್ಟಿಗೆ ಕೈಜೋಡಿಸಿ, ಪಕ್ಷಾತೀತವಾಗಿ ಕೆಲಸ ಮಾಡಿದ್ದರು. ಇದಕ್ಕೆ ಇತ್ತೀಚೆಗೆ ಕಾವೇರಿ ಜಲವಿವಾದದಲ್ಲಿ ಅವರು ತೋರಿದ ಬುದ್ಧಿಪ್ರೌಢಿಮೆಯೇ ಸಾಕ್ಷಿ.
ಸರ್ಕಾರದಲ್ಲಿದ್ದುಕೊಂಡು ಕಾವೇರಿ ವಿಷಯ ದಲ್ಲಿ ರಾಜ್ಯಕ್ಕೆ ನೆರವು ನೀಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೊಂಡಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅನಂತಕುಮಾರ ಅವರ ಗೌರವಾರ್ಥ ರಾಜ್ಯ ಸರ್ಕಾರ ಇಂದು ಸರ್ಕಾರಿ ಕಚೇರಿ, ಶಾಲಾ ಕಾಲೇಜಿಗೆ ರಜಾ ಘೋಷಣೆ ಮಾಡಿದ್ದಲ್ಲದೆ, ನಾಳೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಕ್ರಿಯೆ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪಕ್ಷದ ನೇತಾರ ಎಲ್.ಕೆ. ಅಡ್ವಾಣಿ, ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಲ್ಲದೆ ಕೇಂದ್ರ ಸಂಪುಟದ ಸಚಿವರು, ಬಿಜೆಪಿ ರಾಜ್ಯದ ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಅಗಲಿದ ನಾಯಕನಿಗೆ ಅಂತಿಮ ಗೌರವ ಸಲ್ಲಿಸಿದರು. ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ರಾಜ್ಯಪಾಲ ವಜೂ ಭಾಯ್ ವಾಲಾ ಸೇರಿದಂತೆ ಹಲವು ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಇನ್ಫೋಸಿಸ್ ಫೌಂಡೇಷನ್‍ನ ಸುಧಾಮೂರ್ತಿ ಅವರು ಅನಂತ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ವೇಳೆ, ಕಣ್ಣೀರಿಟ್ಟ ಪ್ರಸಂಗವು ನಡೆಯಿತು.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಅವರ ಸಂಪುಟ ಸಹದ್ಯೋಗಿಗಳು ಸೇರಿದಂತೆ ಜೆಡಿಎಸ್, ಕಾಂಗ್ರೆಸ್ ಹಾಗೂ ಇತರ ರಾಜಕೀಯ ಪಕ್ಷಗಳ ಪ್ರಮುಖ ಮುಖಂಡರು ಅನಂತಕುಮಾರ್ ಅವರ ಕೊನೆ ದರ್ಶನ ಪಡೆದರು.
ಇಂದು ಇಡೀ ದಿನ ಬಸವನಗುಡಿಯ ಅವರ ನಿವಾಸದಲ್ಲಿ ಸಾರ್ವಜನಿಕರು ಅನಂತಕುಮಾರ್ ಕಳೇಬರಕ್ಕೆ ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು.
ನಾಳೆ ಬೆಳಿಗ್ಗೆ 7 ಗಂಟೆಯಿಂದ ಬಿಜೆಪಿ ಕಚೇರಿಯಲ್ಲಿ, ನಂತರ 10ಗಂಟೆಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ನಂತರ ಮಧ್ಯಾಹ್ನ 12 ಗಂಟೆಗೆ ಚಾಮರಾಜಪೇಟೆಯ ಚಿತಾಗಾರದಲ್ಲಿ ಅವರ ಕಳೇಬರದ ಅಂತ್ಯಸಂಸ್ಕಾರ ನಡೆಯಲಿದೆ.
1959 ಜುಲೈ 22ರಂದು ಬೆಂಗಳೂರಿನಲ್ಲಿ ಅನಂತಕುಮಾರ್ ಜನನ. ತಂದೆ ನಾರಾಯಣ ಶಾಸ್ತ್ರಿ, ತಾಯಿ ಗಿರಿಜಾ ಶಾಸ್ತ್ರಿ. ಹುಬ್ಬಳ್ಳಿಯ ಲಾಮಿಂಗ್ಟನ್ ಸ್ಕೂಲ್‍ನಲ್ಲಿ ಎಸ್‍ಎಸ್‍ಎಲ್‍ಸಿ, ಕಾಡಸಿದ್ದೇಶ್ವರ ಕಲಾ ಕಾಲೇಜಿನಲ್ಲಿ ಬಿಎ ಪದವಿ ಪಡೆದಿದ್ದರು. ಮೈಸೂರು ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದ ಅನಂತ್ ಕುಮಾರ್ ಅವರು ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ ಅನಂತಕುಮಾರ್ ಕೂಡ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದರು. ಅಷ್ಟೇ ಅಲ್ಲದೇ 40 ದಿನಗಳ ಸೆರೆಮನೆ ವಾಸ ಕೂಡ ಅನುಭವಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಅನಂತಕುಮಾರ್ ಬಿಜೆಪಿಯ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾಗಿದ್ದರು. 1996ರಲ್ಲಿ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ 1996ರಲ್ಲಿ ಸಂಸದರಾಗಿ ಪ್ರಥಮ ಬಾರಿ ಆಯ್ಕೆಯಾಗಿದ್ದರು. ಬಳಿಕ ವಾಜಪೇಯಿ ಸರ್ಕಾರದಲ್ಲಿ ವಿಮಾನಯಾನ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಹಾಲಿ ಮೋದಿ ಸರ್ಕಾರದಲ್ಲಿ ಮೊದಲು ಅವರಿಗೆ ಉತ್ತಮ ಖಾತೆ ನೀಡಿರಲಿಲ್ಲ. ನಂತರದ ದಿನಗಳಲ್ಲಿ ಪ್ರಧಾನಿಯವರು ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಜೊತೆಗೆ ಸಂಸದೀಯ ವ್ಯವಹಾರದ ಜವಾಬ್ದಾರಿ ವಹಿಸಿಕೊಟ್ಟಿದ್ದರು.
ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಭಾಷಣ ಮಾಡಿದ್ದರು. ಸಬ್ಸಿಡಿ ದರದ ಯೂರಿಯಾ ಕಾಳಸಂತೆಯಲ್ಲಿ ಮಾರಾಟವಾ ಗುತ್ತಿರುವುದಕ್ಕೆ ಕಡಿವಾಣ ಹಾಕಿದ್ದರು. ಅಗ್ಗದ ದರದ ಜನೌಷಧಿಯ ರೂವಾರಿ ಕೂಡ ಹೌದು. ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲೇ ಅವರ ಆರೋಗ್ಯ ದಲ್ಲಿ ಏರುಪೇರು ಕಂಡಿತ್ತು. ಆದರೆ ಅದನ್ನು ನಿರ್ಲಕ್ಷಿಸಿದ ಅನಂತಕುಮಾರ್ ನಂತರದ ದಿನಗಳಲ್ಲಿ ಕ್ಯಾನ್ಸರ್ ಎಂದು ತಿಳಿದ ನಂತರ ವಿದೇಶಕ್ಕೆ ತೆರಳಿ ತಿಂಗಳುಗಟ್ಟಲೇ ಚಿಕಿತ್ಸೆ ಪಡೆದರು. ಅದು ಫಲಕಾರಿಯಾಗಲಿಲ್ಲ. ದೇಶಕ್ಕೆ ಹಿಂತಿರುಗಿ ನಗರದ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು.
ವಿದ್ಯಾರ್ಥಿ ಪರಿಷತ್ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಅನಂತಕುಮಾರ್, ಕರ್ನಾಟಕದಲ್ಲಿ ಬಿಜೆಪಿ ಬಲವಾಗಿ ಬೇರೂರಲು ಪ್ರಮುಖ ಕಾರಣಕರ್ತರಾದರು.
ಸದಾ ಪಕ್ಷದಲ್ಲಿ ಹಿಡಿತ ಸಾಧಿಸಿದ್ದ ಅವರು, ಪ್ರೊಫೆಸರ್ ವೆಂಕಟಗಿರಿಗೌಡ ಹಾಗೂ ನೀರಾವರಿ ತಜ್ಞ ನಂಜೇಗೌಡ ಅವರನ್ನು ಪಕ್ಷಕ್ಕೆ ಕರೆತಂದು ಬೆಂಗಳೂರಿನಲ್ಲಿ ಅವರನ್ನು ಸಂಸದರು ಹಾಗೂ ಶಾಸಕರನ್ನಾಗಿ ಮಾಡಿ ರಾಜಧಾನಿಯ ಒಕ್ಕಲಿಗರನ್ನು ಪಕ್ಷದತ್ತ ಸೆಳೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. ವೆಂಕಟಗಿರಿಗೌಡ ಪಕ್ಷ ತೊರೆದ ನಂತರ ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಿ, ನಿರಂತರ ಗೆಲುವು ಸಾಧಿಸುತ್ತಾ ಬಂದರು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿರುವ ಅತೀ ಹೆಚ್ಚು ಒಕ್ಕಲಿಗ ಮತ್ತು ಬ್ರಾಹ್ಮಣ ಮತಗಳು ಅವರನ್ನು ಕೊನೆ ಚುನಾವಣೆವರೆಗೂ ಕೈಬಿಡಲಿಲ್ಲ.
ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಜನತಾ ಪರಿವಾರದ ಒಡಕನ್ನು ರಾಜಕೀಯವಾಗಿ ಬಳಸಿಕೊಂಡ ಅನಂತಕುಮಾರ್, ದಿವಂಗತ ರಾಮಕೃಷ್ಣ ಹೆಗಡೆ ಅವರ ಪತ್ನಿ ಶಕುಂತಲ ಹೆಗಡೆ, ಅವರ ಪುತ್ರ ಹಾಗೂ ಪುತ್ರಿ ಮತ್ತು ಅವರ ಅಪಾರ ಬೆಂಬಲಿಗರನ್ನು ಪಕ್ಷಕ್ಕೆ ಕರೆತಂದು ವೀರಶೈವ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಬೇರೂರಲು ಕಾರಣಕರ್ತರಾದರು. ಸದಾಕಾಲ ಹೆಗಡೆ ಬೆಂಬಲಕ್ಕೆ ನಿಂತಿದ್ದ ವೀರಶೈವ ಮತಗಳು ಅವರ ನಂತರ ಅವರ ಕುಟುಂಬ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಂತೆ ಮತಗಳೂ ಕೂಡ ವರ್ಗಾವಣೆಗೊಂಡವು.
ಇದರಿಂದ ವಿಧಾನಸಭೆಯಲ್ಲಿ ಎರಡು ಸ್ಥಾನ ನಂತರ 40 ಸ್ಥಾನದಲ್ಲಿದ್ದ ಬಿಜೆಪಿ ಅವರು ರಾಜ್ಯಾಧ್ಯಕ್ಷರಾದ ಸಂದರ್ಭದಲ್ಲಿ 80 ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರಾದರೂ, ಅಂದು ದಕ್ಷಿಣ ಭಾರತದಲ್ಲಿ ಕೇಸರಿಯ ಬಾಗಿಲು ತೆರೆಸಲು ಅವರು ನಡೆಸಿದ ಯತ್ನ ಫಲಪ್ರದವಾಗಲಿಲ್ಲ. ನಂತರದ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರ ನಾಯಕರೊಟ್ಟಿಗೆ ಪಕ್ಷವನ್ನು ಸಂಘಟಿಸಿ, ಎರಡು ಬಾರಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಲಾಲ್‍ಕೃಷ್ಣ ಅಡ್ವಾಣಿ ಅವರ ನೆರಳಿನಲ್ಲೇ ಬೆಳೆದ ಅನಂತಕುಮಾರ್ ಅವರ ಗುರುಗಳಂತೆ ಪಕ್ಷ ಸಂಘಟನೆ ಜೊತೆಗೆ ಕೇಂದ್ರ ಸಂಘಟನೆಯಲ್ಲಿ ಸದಾಕಾಲ ತಮ್ಮನ್ನು ತೊಡಗಿಸಿಕೊಂಡು, ವಿವಿಧ ರಾಜ್ಯಗಳಲ್ಲಿ ಬಿಜೆಪಿ ಉಸ್ತುವಾರಿ ವಹಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು.