ಚಾಮುಂಡಿಬೆಟ್ಟದ ನಂದಿಗೆ ದ್ರವ್ಯ, ಫಲ, ಪತ್ರೆ, ಪುಷ್ಪಗಳಿಂದ ಮಹಾಭಿಷೇಕ
ಮೈಸೂರು

ಚಾಮುಂಡಿಬೆಟ್ಟದ ನಂದಿಗೆ ದ್ರವ್ಯ, ಫಲ, ಪತ್ರೆ, ಪುಷ್ಪಗಳಿಂದ ಮಹಾಭಿಷೇಕ

November 26, 2018

ಮೈಸೂರು: ಚಾಮುಂಡಿಬೆಟ್ಟದ ಬೃಹತ್ ನಂದಿಗೆ ಭಾನುವಾರ 36 ವಿಧದ ದ್ರವ್ಯ, ಫಲ, ಪತ್ರೆ, ಪುಷ್ಪಾದಿಗಳಿಂದ ಮಹಾಭಿಷೇಕ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಪ್ರತಿ ವರ್ಷ 3ನೇ ಕಾರ್ತಿಕ ಮಾಸದ ಹಿಂದಿನ ಭಾನುವಾರದಂದು ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಬೆಟ್ಟದ ನಂದಿಗೆ ಮಹಾಭಿಷೇಕ ಆಯೋಜಿಸುತ್ತಾ ಬಂದಿದ್ದು, ಅಂತೆಯೇ ಭಾನುವಾರ ನಡೆದ 13ನೇ ವರ್ಷದ ಮಹಾಭಿಷೇಕದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರಾನಂದ ಸ್ವಾಮೀಜಿ, ಹೊಸ ಮಠ ಶ್ರೀ ಚಿದಾನಂದ ಸ್ವಾಮೀಜಿ ಅವರು ಮೊದಲಿಗೆ ಬೃಹತ್ ನಂದಿಗೆ ವಿಶೇಷ ಪೂಜಾಕಾರ್ಯಗಳನ್ನು ನೆರವೇರಿಸಿದರು.

ಸ್ವಾಮಿಗೆ ಸಂಕಲ್ಪ ನೆರವೇರಿಸಿದ ಬಳಿಕ ನಂದಿಗೆ ನಾನಾ ವಿಧದ ಫಲ-ಪತ್ರೆ, ಪುಷ್ಪ ಗಳಿಂದ ಅಭಿಷೇಕ ನೆರವೇರಿಸಲಾಯಿತು. ಪೂಜಾ ಕಾರ್ಯಗಳ ಸಂದರ್ಭದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಅವರು ಹಾಜರಿದ್ದರು.
ಅಘ್ರ್ಯ, ಆಚಮನ, ಮಧುಪರ್ಕ, ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ, ಭಸ್ಮ (ವಿಭೂತಿ), ಶ್ರೀಗಂಧ, ಅರಿಶಿನ, ಕುಂಕುಮ, ಸಿಂಧೂರ, ವಿಧ ವಿಧದ ಹೂವುಗಳು, ಬಿಲ್ವ ಸೇರಿ ನಾನಾ ಪತ್ರೆಗಳು, ಬಾಳೆಹಣ್ಣು, ದ್ರಾಕ್ಷಿ, ಖರ್ಜೂರ, ಬೇಲದ ಹಣ್ಣು, ಸೌತೆಕಾಯಿ, ಕಬ್ಬಿನ ರಸ, ಸುಗಂಧ ತೈಲ, ಎಳನೀರು, ನಿಂಬೆ ರಸ, ಗೋಧಿ ಹಿಟ್ಟು, ಹೆಸರು ಹಿಟ್ಟು, ಅಕ್ಕಿ ಹಿಟ್ಟು, ನಾಣ್ಯಗಳು, ದರ್ಬೆ, ಅಷ್ಟಗಂಧ, ಪಂಚಾಮೃತ, ಶಾಲ್ಯಾನ್ನ, ಪಾಯಸಗಳಿಂದ ಅಭಿಷೇಕ ನಡೆಯಿತು. ಪಚ್ಚಕರ್ಪೂರ, ಕಸ್ತೂರಿ ಬಳಿಕ ಜಲಾಭಿಷೇಕದೊಂದಿಗೆ ಮಹಾಭಿಷೇಕ ಮುಕ್ತಾಯಗೊಂಡಿತು.

10 ಮಂದಿ ಮುಖ್ಯ ಪುರೋಹಿತರು, 20 ಮಂದಿ ಸಹಾಯಕ ಪುರೋಹಿತರು ಅಭಿಷೇಕ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ನಡೆಸಲಾಗುವ ಅಭಿಷೇಕಕ್ಕೆ ಉದ್ಯಮಿ ರಫೀಕ್ ಎಂಬುವರು 150 ಲೀ. ಹಾಲಿನ ಕೊಡುಗೆ ನೀಡಿದ್ದರು. ಅಭಿಷೇಕಕ್ಕೆ ಒಟ್ಟು 7 ಲಕ್ಷ ರೂ. ಖರ್ಚಾಗಿದ್ದು, ಇದರಲ್ಲಿ ದಾನಿಗಳೇ 3 ಲಕ್ಷದಷ್ಟು ನೆರವಾಗಿದ್ದಾ ರೆಂದು ಟ್ರಸ್ಟ್‍ನ ಪದಾಧಿಕಾರಿ ವಿ.ಎನ್. ಸುಂದರ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಅಭಿಷೇಕ ಸಂದರ್ಭದಲ್ಲಿ ವಿವಿಧ ವರ್ಣಗಳಿಂದ ಆಕರ್ಷಿಸುತ್ತಿದ್ದ ನಂದಿ ಯನ್ನು ಕಂಡ ಭಕ್ತರು ನಂದಿ ಹಾಗೂ ಚಾಮುಂಡಿ ತಾಯಿಗೆ ಜೈಕಾರ ಹಾಕಿದರು. ಈ ಆಕರ್ಷಕ ದೃಶ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದರು. ಅನೇಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಮಹಾಭಿಷೇಕದ ನಂತರ ಸುಮಾರು 7 ಸಾವಿರ ಜನರಿಗೆ ಬಿಸಿ ಬೇಳೆಬಾತ್, ಮೊಸ ರನ್ನ, ಸಿಹಿ ಪೊಂಗಲ್, ಲಾಡು ಪ್ರಸಾದ ವಿನಿಯೋಗ ನಡೆಯಿತು. ಮಹಾಭಿಷೇಕದ ನೇತೃತ್ವವನ್ನು ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಸ್.ಪ್ರಕಾಶ್, ಕಾರ್ಯದರ್ಶಿ ವಕೀಲ ಎನ್.ಗೋವಿಂದ, ಖಜಾಂಚಿ ವಿ.ಎನ್. ಸುಂದರ್, ಟ್ರಸ್ಟಿಗಳಾದ ಬ್ಯಾಂಕ್ ಶಿವ ಕುಮಾರ್, ಚಿನ್ನಪ್ಪ, ಬಸವರಾಜು, ಕಾನ್ಯ ಶಿವಮೂರ್ತಿ, ರಮೇಶ್, ಶಂಕರ್ ಇನ್ನಿತ ರರು ಪಾಲ್ಗೊಂಡಿದ್ದರು.

Translate »