ಕೆನರಾ ಬ್ಯಾಂಕ್ ಸಾಲ ಮೇಳಕ್ಕೆ ಚಾಲನೆ
ಮೈಸೂರು

ಕೆನರಾ ಬ್ಯಾಂಕ್ ಸಾಲ ಮೇಳಕ್ಕೆ ಚಾಲನೆ

July 15, 2018

ಮೈಸೂರು: ಕೆನರಾ ಬ್ಯಾಂಕ್‍ನ ಸಾಲ ಸೌಲಭ್ಯ ಯೋಜನೆಗಳ ಬಗ್ಗೆ ಪ್ರಚುರಪಡಿಸುವ ಸಲುವಾಗಿ ಬ್ಯಾಂಕ್‍ನ ಮೈಸೂರು ಪ್ರಾದೇಶಿಕ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಾಲ ಮೇಳಕ್ಕೆ ಬ್ಯಾಂಕಿನ ವೃತ್ತ ಕಚೇರಿ ಡಿಜಿಎಂ ಟಿ.ಜಿ.ಬೋರಯ್ಯ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಬ್ಯಾಂಕಿನ ಸಾಲ ಸೌಲಭ್ಯದ ಯೋಜನೆಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ಒದಗಿಸುವಲ್ಲಿ ಮೇಳದಂತಹ ಕಾರ್ಯಕ್ರಮ ಪರಿಣಾಮಕಾರಿ. ಈ ಉದ್ದೇಶದಿಂದಲೇ ಬ್ಯಾಂಕ್ ಆಗಾಗ್ಗೆ ಸಾಲ ಮೇಳಗಳನ್ನು ಹಮ್ಮಿಕೊಳ್ಳುತ್ತಿರುತ್ತದೆ. ಸಾಲಸೌಲಭ್ಯಗಳು ಗ್ರಾಹಕರು ಹಾಗೂ ಬ್ಯಾಂಕ್ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸಲಿದೆ. ಆದರೆ ಎರಡು ಕಡೆಯಲ್ಲೂ ಬದ್ಧತೆಯಿಂದ ಕಾರ್ಯನಿರ್ವಹಿಸುವ ಗುಣ ಇರಬೇಕು ಎಂದು ಹೇಳಿದರು.

ಇಂದಿನ ಮೇಳವನ್ನು ಜು.1ರಿಂದ ಜಾರಿಗೊಂಡ ಸಾಲ ಯೋಜನೆಗಳ ಸಂಭ್ರಮಾಚರಣೆ ಎಂತಲೂ ಕರೆಯಬಹುದು. ಗ್ರಾಹಕರು ಸಾಲಸೌಲಭ್ಯವನ್ನು ಶೀಘ್ರದಲ್ಲಿ ಪಡೆಯಬೇಕಾದಲ್ಲಿ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಸಮರ್ಪಕ ದಾಖಲೆಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ ಒಂದೇ ದಿನದಲ್ಲಿ ಗೃಹ ಸಾಲವನ್ನು ಗ್ರಾಹಕರ ಕೈ ಸೇರಿದ ಉದಾರಣೆಯೂ ಇದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಸೂಕ್ತ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಸದ್ಬಳಕೆ, ಮರುಪಾವತಿಗೆ ಗಮನವಿರಲಿ: ಸಾಲ ಪಡೆದುಕೊಳ್ಳುವುದಷ್ಟೇ ಮುಖ್ಯವಲ್ಲ. ಇದರ ಜೊತೆಗೆ ಅದರ ಸದ್ಬಳಕೆಗೆ ಗ್ರಾಹಕರು ಗಮನಹರಿಸಬೇಕು. ಅಲ್ಲದೆ, ನಿಗದಿತ ಅವಧಿಯೊಳಗೆ ಮರುಪಾವತಿ ಮಾಡಲು ಮುಂದಾಗಬೇಕು. ಬ್ಯಾಂಕಿನ ಸೇವೆಯಲ್ಲಿ ಏನಾದರೂ ವ್ಯತ್ಯಯ ಕಂಡುಬಂದರೆ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ, ಶೀಘ್ರದಲ್ಲಿ ಕ್ರಮ ಕೈಗೊಳ್ಳುತ್ತಾರೆ. ಒಟ್ಟಾರೆ ಗ್ರಾಹಕ ಮತ್ತು ಬ್ಯಾಂಕ್ ನಡುವೆ ಪರಸ್ಪರ ವಿಶ್ವಾಸಾರ್ಹತೆ ಕಾಪಾಡಿಕೊಳ್ಳುವುದು ಮುಖ್ಯ ಎಂದು ಟಿ.ಜಿ.ಬೋರಯ್ಯ ಅಭಿಪ್ರಾಯಪಟ್ಟರು.

ಇದೇ ವೇಳೆ ಹಲವು ಗ್ರಾಹಕರಿಗೆ ಸಾಲ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡಲಾಯಿತು. ಜೊತೆಗೆ ಬ್ಯಾಂಕಿನ ಪ್ರತಿನಿಧಿಗಳು ಗೃಹಸಾಲ, ವಾಹನ ಸಾಲ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ದೊರೆಯುವ ಸಾಲಸೌಲಭ್ಯ, ವೈಯಕ್ತಿಕ ಹಾಗೂ ವ್ಯಾಪಾರ ವಹಿವಾಟು ಸಾಲಸೌಲಭ್ಯಕ್ಕೆ ಸಂಬಂಧಿಸಿದಂತೆ ನೆರೆದಿದ್ದ ಗ್ರಾಹಕರಿಗೆ ಮಾಹಿತಿ ನೀಡಿದರು.

ಇದರೊಂದಿಗೆ ಅಡಮಾನ ಸಾಲ, ಶಿಕ್ಷಣ ಸಾಲ, ನಿವೇಶನ ಸಾಲ ಸೇರಿದಂತೆ ಬ್ಯಾಂಕಿನ ವಿವಿಧ ಸಾಲ ಯೋಜನೆಗಳನ್ನು ಗ್ರಾಹಕರಿಗೆ ಪರಿಚಯಿಸಲಾಯಿತು. ಸಾಲ ಮಂಜೂರಾತಿಗೆ ಅಗತ್ಯವಿರುವ ಆದಾಯ ದೃಢೀಕರಣ ದಾಖಲೆ, ವಿಳಾಸ ದೃಢೀಕರಣ ದಾಖಲೆ, ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಹಾಜರುಪಡಿಸುವ ಸಂಬಂಧ ಮಾಹಿತಿ ನೀಡಲಾಯಿತು.

ಕಟ್ಟಡ ನಿರ್ಮಾಣ ಸಂಸ್ಥೆಗಳು ಹಾಗೂ ವಾಹನ ವಿತರಕರು ಮೇಳದಲ್ಲಿ ಪಾಲ್ಗೊಂಡು ತಮ್ಮ ಸೇವಾಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ, ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಇರಬೇಕಾದ ದಾಖಲೆಗಳು ಹಾಗೂ ಕಾನೂನುಗಳ ಬಗ್ಗೆ ಉಚಿತ ಮಾಹಿತಿ ಒದಗಿಸಲಾಯಿತು. ಬ್ಯಾಂಕಿನ ಸಾಲಸೌಲಭ್ಯದ ಬಗ್ಗೆ ಹೆಚ್ಚಿನ ಮಾಹಿತಿಗೆ ದೂ.ಸಂ. 0821-2528211, 2528284, ಮೊ.ಸಂ. 8762382134, 8762479552 ಅನ್ನು ಸಂಪರ್ಕಿಸಬಹುದು. ಕೆನರಾ ಬ್ಯಾಂಕ್ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಆರ್.ಪದ್ಮಪ್ರಿಯ, ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಬಂಧಕಿ ಗೀತಾ ಮತ್ತಿತರರು ಹಾಜರಿದ್ದರು.

Translate »