ಚಾಮುಂಡಿಬೆಟ್ಟದಲ್ಲಿಚಾಮುಂಡೇಶ್ವರಿ ವರ್ಧಂತಿ ಉತ್ಸವ
ಮೈಸೂರು

ಚಾಮುಂಡಿಬೆಟ್ಟದಲ್ಲಿಚಾಮುಂಡೇಶ್ವರಿ ವರ್ಧಂತಿ ಉತ್ಸವ

July 21, 2022

ಮೈಸೂರು, ಜು.20(ಎಂಟಿವೈ)- ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷ ಸರಳವಾಗಿದ್ದ ನಾಡದೇವಿ ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು. ದೇವಿಯ ಜನ್ಮ ದಿನೋತ್ಸವದ ವಿಶೇಷ ಜಾತ್ರಾ ಮಹೋತ್ಸವದಲ್ಲಿ ಅಪಾರ ಪ್ರಮಾಣದ ಭಕ್ತರು ಪಾಲ್ಗೊಂಡಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಮುಂಜಾನೆಯಿಂದಲೇ ಬೆಟ್ಟಕ್ಕೆ ಆಗಮಿ ಸಿದ್ದರಿಂದ ವರ್ಧಂತಿ ಮಹೋತ್ಸವಕ್ಕೆ ಜಾತ್ರಾ ಮೆರಗು ಬಂದಿತ್ತು. ಮೆಟ್ಟಿಲುಗಳ ಮೂಲಕ ಹಾಗೂ ಸಾರಿಗೆ ಬಸ್‍ಗಳಲ್ಲಿ ಬೆಟ್ಟಕ್ಕೆ ಬಂದಿದ್ದ ಭಕ್ತರು ದೇವಿ ದರ್ಶನ ಪಡೆಯಲು ಗಂಟೆಗಟ್ಟಲೆ ಕಾದು ನಿಂತರು. ಚಿನ್ನದ ಅಡ್ಡ ಪಲ್ಲಕ್ಕಿಯಲ್ಲಿ ವಿರಾಜಮಾನಳಾಗಿದ್ದ ಬೆಟ್ಟದ ತಾಯಿಯನ್ನು ಅಪಾರ ಸಂಖ್ಯೆ ಭಕ್ತರು ಕಣ್ತುಂಬಿಕೊಂಡು, ಜೈಕಾರ ಹಾಕಿ ಸಂಭ್ರಮಿಸಿದರು. ಆಷಾಢಮಾಸ ದಲ್ಲಿನ ಕೃಷ್ಣ ಪಕ್ಷದ, ರೇವತಿ ನಕ್ಷತ್ರÀ ದಿನದಂದು ದೇವಾಲಯದಲ್ಲಿ ದೇವಿಯ ಉತ್ಸವ ಪ್ರತಿ ಷ್ಠಾಪಿಸಲಾಯಿತು.

ಅಂದಿನಿಂದ ಪ್ರತಿವರ್ಷ, ಈ ದಿನವನ್ನು ವರ್ಧಂತಿ ಮಹೋತ್ಸವ ಎಂದು, ವಿಶೇಷ ಪೂಜೆಯೊಂದಿಗೆ ಆಚರಿಸಲಾಗುತ್ತದೆ. ಮುಂಜಾನೆ 3 ಗಂಟೆಯಿಂದ ಆರಂಭವಾದ ವಿಶೇಷ ಪೂಜೆ ಬೆಳಗ್ಗೆ 7.45ರವರೆಗೂ ನಡೆಯಿತು. ನಂತರ ಬೆಳಗ್ಗೆ 8 ಗಂಟೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಆದರೆ ಮುಂಜಾನೆ 3 ಗಂಟೆಯಿಂದಲೇ ಬೆಟ್ಟಕ್ಕೆ ಬಂದಿದ್ದ ಭಕ್ತರು ಧರ್ಮ ದರ್ಶನ ಹಾಗೂ 300 ರೂ. ಟಿಕೆಟ್ ಪಡೆದು ವಿಶೇಷ ದರ್ಶನ ಸಾಲಿನಲ್ಲಿ ನಿಂತಿದ್ದರು. ಬೆಟ್ಟದಲ್ಲಿ ಭಕ್ತರ ಜಂಗುಳಿ ಹೆಚ್ಚಾಗಿ ಕಂಡು ಬಂದಿತು.

ವಿಶೇಷ ಪೂಜೆ: ದೇವಾಲಯದಲ್ಲಿ ಪ್ರಧಾನ ಆಗಮಿಕ ಡಾ.ಎನ್.ಶಶಿಶೇಖರ್ ದೀಕ್ಷಿತ್ ಸಮ್ಮುಖದಲ್ಲಿ ಗರ್ಭಗುಡಿಯ ದೇವಿಯ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಮುಂಜಾನೆ 3 ಗಂಟೆಯಿಂದಲೇ ಅಭ್ಯಂಜನ(ಎಣ್ಣೆಸ್ನಾನ), ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ತ್ರಿಪದಿ, ಅಷ್ಟೋತ್ತರ ಪೂಜೆ ನಂತರ ಮಂಗಳಾರತಿ ಆಯಿತು. ಸಂಜೆ 4.30ಕ್ಕೆ ಕೈತೋಳ್ ಉತ್ಸವ(ಉತ್ಸವ ಮೂರ್ತಿಯನ್ನು ಹೆಗಲ ಮೇಲೆ ಹೊತ್ತು ಸಾಗುವುದು) ನೆರವೇರಿತು. ರಾತ್ರಿ 8.30ಕ್ಕೆ ಉತ್ಸವ ಪೂಜೆ, 8.45ಕ್ಕೆ ದರ್ಬಾರ್ ಉತ್ಸವ ನೆರವೇರಿಸಲಾಯಿತು. ರಾತ್ರಿ 9.30ಕ್ಕೆ ದೇವಾಲಯ ಬಂದ್ ಮಾಡಲಾಯಿತು.

ವಿಜೃಂಭಣೆಯ ಅಡ್ಡ ಪಲ್ಲಕ್ಕಿ ಉತ್ಸವ: ಪ್ರತಿ ವರ್ಷ ವರ್ಧಂತಿ ಮಹೋತ್ಸವದಂದು ಚಿನ್ನದ ಅಡ್ಡ ಪಲ್ಲಕ್ಕಿ ಉತ್ಸವ ನೆರವೇರುತ್ತದೆ. ಇಂದು ಬೆಳಗ್ಗೆ 9.15ಕ್ಕೆ ಮಂಗಳಾರತಿ ನಂತರ ಚಿನ್ನದ ಆಭರಣಗಳಿಂದ ಅಲಂಕರಿಸಿದ್ದ ಉತ್ಸವ ಮೂರ್ತಿಯನ್ನು ಬಿರುದು ಬಾವಲಿಯೊಂದಿಗೆ ದೇವಾಲಯದ ಹೊರಗೆ ತಂದು ಚಿನ್ನದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. 9.30ಕ್ಕೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್, ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಮಂಗಳವಾದ್ಯ, ಪೊಲೀಸ್ ಬ್ಯಾಂಡ್ ವಾದನ, ಅರಮನೆಯ ಛತ್ರಿ, ಛಾಮರ, ಬಿರುದು, ಬಾವಲಿಗಳೊಂದಿಗೆ ದೇವಾಲಯದ ಸುತ್ತ ಒಂದು ಸುತ್ತು ಮೆರವಣಿಗೆ ಮಾಡಲಾಯಿತು.

ಗಣ್ಯರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚನ್ನಮ್ಮ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಎಸ್.ಟಿ.ಸೋಮಶೇಖರ್, ಗೋವಿಂದ ಕಾರಜೋಳ, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ನಿರಂಜನ್‍ಕುಮಾರ್, ಮುಖಂಡ ರಘು ಆರ್.ಕೌಟಿಲ್ಯ ಸೇರಿದಂತೆ ಇನ್ನಿತರರು ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು.

ಹೆಚ್ಚುವರಿ ಬಸ್: ಎಂದಿನಂತೆ ಲಲಿತಮಹಲ್ ಪ್ಯಾಲೇಸ್ ಮೈದಾನದಿಂದ ಚಾಮುಂಡಿಬೆಟ್ಟಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಸಾರಿಗೆ ಸಂಸ್ಥೆಯ 30ಕ್ಕೂ ಹೆಚ್ಚು ಬಸ್ಸುಗಳು ಭಕ್ತರನ್ನು ಕರೆದೊಯ್ಯಲು ನಿಯೋಜಿಸಲಾಗಿತ್ತು. ಈ ನಡುವೆ ನಗರ ಬಸ್ ನಿಲ್ದಾಣದಿಂದಲೂ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಿಹಿ ವಿತರಣೆ: ಇಂದು ಚಾಮುಂಡಿಬೆಟ್ಟ, ಬೆಟ್ಟದ ತಪ್ಪಲು, ಮೆಟ್ಟಿಲು ಮಾರ್ಗದಲ್ಲಿ ಭಕ್ತರಿಗೆ ಲಾಡು, ಪೇಡ, ಕೇಸರಿಬಾತ್, ಮೈಸೂರು ಪಾಕ್ ಸೇರಿದಂತೆ ವಿವಿಧ ಬಗೆಯ ಸಿಹಿ ವಿತರಿಸಲಾಯಿತು. ಇದಲ್ಲದೆ ಮೊಸರನ್ನ, ರೈಸ್‍ಬಾತ್ ಅನ್ನು ಭಕ್ತರಿಗೆ ವಿತರಿಸಲಾಯಿತು.

ಮೈಸೂರಿನ ವಿವಿಧೆಡೆ ಪೂಜೆ: ವರ್ಧಂತಿ ಮಹೋತ್ಸವದ ಅಂಗವಾಗಿ ಮೈಸೂರಿನ ವಿವಿಧ ಬಡಾವಣೆಗಳಲ್ಲಿ, ಆಟೋರಿಕ್ಷಾ ನಿಲ್ದಾಣಗಳಲ್ಲಿಯೂ ಭಕ್ತಿ-ಭಾವದಿಂದ ದೇವಿಗೆ ಪೂಜೆ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಮೈಸೂರು ನಗರದಾದ್ಯಂತ ವರ್ಧಂತ್ಯುತ್ಸವ: ಮೈಸೂರು ನಗರದಾದ್ಯಂತ ವರ್ಧಂತ್ಯು ತ್ಸವದ ಅಂಗವಾಗಿ ವಿಶೇಷ ಪೂಜೆಗಳು ನೆರವೇರಿದವು. ಕೆ.ಜಿ.ಕೊಪ್ಪಲಿನ ಬಂದಂತಮ್ಮ ದೇವಾಲಯ, ರೈಲ್ವೆ ಗೇಟ್ ಬಳಿ ಚಾಮುಂಡೇಶ್ವರಿ ದೇವಾಲಯ, ಅಗ್ರಹಾರದ ಜೆಎಸ್‍ಎಸ್ ಆಸ್ಪತ್ರೆಯ ಬಳಿ ಇರುವ ಚಾಮುಂಡೇಶ್ವರಿ ದೇವಾಲಯದಲ್ಲಿಯೂ ವಿಶೇಷ ಪೂಜೆ ಜರುಗಿದವು.

Translate »