ಮೂಗೂರು ತ್ರಿಪುರ ಸುಂದರಮ್ಮ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ದರೋಡೆ: ಆರು ಮಂದಿ ಬಂಧನ
ಮೈಸೂರು

ಮೂಗೂರು ತ್ರಿಪುರ ಸುಂದರಮ್ಮ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ದರೋಡೆ: ಆರು ಮಂದಿ ಬಂಧನ

July 21, 2022

ಮೈಸೂರು, ಜು.20(ಎಂಕೆ)- ದೇವ ಸ್ಥಾನಗಳಲ್ಲಿ ದರೋಡೆ ಮಾಡುತ್ತಿದ್ದ 6 ಮಂದಿಯನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, 4,06,081 ರೂ. ನಗದು, 22 ವಿವಿಧ ಬಗೆಯ ಮೊಬೈಲ್‍ಗಳು ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದರು.

ಬುಧವಾರ ಎಸ್‍ಪಿ ಕಚೇರಿ ಸಭಾಂಗಣ ದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಜು.16ರಂದು ರಾತ್ರಿ ಟಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದ ಶ್ರೀ ತ್ರಿಪುರ ಸುಂದರಮ್ಮ ದೇವಸ್ಥಾನದ ಬಾಗಿಲು ಮುರಿದು ಸುಮಾರು 17.50 ಲಕ್ಷ ರೂ.ಮೌಲ್ಯದ 484 ಗ್ರಾಂ ಚಿನ್ನದ ಆಭರಣಗಳು ಹಾಗೂ ಹುಂಡಿಯಲ್ಲಿದ್ದ ನಗದು ಹಣ ಕಳವು ಮಾಡಿರುವ ಕುರಿತು ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ನಂಜನಗೂಡು ಉಪವಿಭಾ ಗದ ಡಿಎಸ್‍ಪಿ ಗೋವಿಂದರಾಜು ನೇತೃತ್ವ ದಲ್ಲಿ ವಿಶೇಷ ತಂಡ ರಚಿಸಿ, ಪ್ರಕರಣ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಚಾಮ ರಾಜನಗರದಲ್ಲಿ ಬಂಧಿಸಲಾಗಿದೆ ಎಂದರು.

ಬಂಧಿತ ಆರೋಪಿಗಳಿಂದ ಪಲ್ಸರ್ ಬೈಕ್, ಬಜಾಜ್ ಬೈಕ್, ಟಿವಿಎಸ್ ಎಕ್ಸೆಲ್ ಮೊಪೆಡ್, 22 ವಿವಿಧ ಬಗೆಯ ಮೊಬೈಲ್ ಗಳು, ಹಣೆ ಬೊಟ್ಟು, 1 ಜೊತೆ ಚಿನ್ನದ ಉಬ್ಬು, ಚಿನ್ನದ ತಾಳಿ(ಚಿಕ್ಕದು), ತಾಳಿ ಸಮೇತ ಚಿನ್ನದ ಉರಿ ಚೈನ್, ಚಿನ್ನದ ಲಕ್ಷ್ಮಿ ಫಲಕ, 3,89,737 ರೂ. ನಗದು ಹಣ ಹಾಗೂ 16,344 ಚಿಲ್ಲರೆ ನಾಣ್ಯಗಳನ್ನು (ಚಿಲ್ಲರೆ ನಾಣ್ಯಗಳು ಸೇರಿ ಒಟ್ಟು-4,06,081 ರೂ.ನಗದು) ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ದೇವಸ್ಥಾನಗಳೇ ಟಾರ್ಗೆಟ್: ಬಳೆ ಮಾರಾಟ, ಗ್ಯಾಸ್‍ಸ್ಟೌವ್ ರಿಪೇರಿ ಸೇರಿದಂತೆ ಇನ್ನಿತರೆ ವಸ್ತುಗಳ ರಿಪೇರಿ ಮಾಡುತ್ತೇವೆ ಎಂದು ಊರೂರ ಮೇಲೆ ತಿರುಗುವ ಈ ಆರೋಪಿ ಗಳು ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿ ಕೊಂಡು ಟಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದ ಶ್ರೀ ತ್ರಿಪುರ ಸುಂದ ರಮ್ಮ ದೇವಸ್ಥಾನದ ಜೊತೆಗೆ ಹಳೇ ತಿರುಮ ಕೂಡಲು ಗ್ರಾಮದ ಚೌಡೇಶ್ವರಿ ದೇವಸ್ಥಾನ, ಯಳಂದೂರು ತಾಲೂಕಿನ ಅಗರ ಗ್ರಾಮದ ಹಿಂಡಿ ಮಾರಮ್ಮ ದೇವಸ್ಥಾನ, ನಂಜನ ಗೂಡು ತಾಲೂಕಿನ ಚಿನ್ನದಗುಡಿ ಹುಂಡಿ ಗ್ರಾಮದ ರಾಮವ್ವ ದೇವಸ್ಥಾನ ಹಾಗೂ ಮೈಸೂರು ನಗರದ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೋಟಾರ್ ಬೈಕ್ ಹಾಗೂ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಪೆಡ್ ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಮೈಸೂರು ಹಾಗೂ ಚಾ.ನಗರ ಭಾಗ ದವರು: ಆರೋಪಿಗಳು ಮೈಸೂರು ಹಾಗೂ ಚಾ.ನಗರ ಭಾಗದವರೆಂದು ತಿಳಿದುಬಂದಿದೆ. ಅದರಲ್ಲೂ ಕೆಲ ಆರೋಪಿಗಳು 2 ತಿಂಗಳ ಹಿಂದೆಯಷ್ಟೇ ಜೈಲಿಂದ ಬಿಡುಗಡೆಯಾ ಗಿದ್ದು, ಬಂಧಿಸುವ ವೇಳೆ ಪರಾರಿಯಾದ ಒರ್ವ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳು ಒಂದೇ ಕಡೆ ಹೆಚ್ಚಿನ ದಿನಗಳು ಇರದೆ ಒಂದು ಸ್ಥಳದಲ್ಲಿ ಒಂದೆರಡು ತಿಂಗಳ ಕಾಲ ಇದ್ದು, ಬಳಿಕ ಬೇರೆ ಸ್ಥಳಕ್ಕೆ ಹೋಗುತ್ತಿದ್ದರು ಎಂಬ ಮಾಹಿತಿ ಇದೆ. ಕಳ್ಳತನ ಮಾಡುವುದಕ್ಕೂ ಮುನ್ನವೇ ಶ್ರೀ ತ್ರಿಪುರ ಸುಂದರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಮೊದಲೇ ಪ್ಲಾನ್ ಮಾಡಿಕೊಂಡು ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ ಎಂದರು.

ಬಳಸಿಕೊಂಡಿದ್ದಾರೆ: ಕಳವು ಮಾಡಿದ ವಸ್ತುಗಳನ್ನು ತಮ್ಮ ಬಳಿಯೇ ಇಟ್ಟುಕೊಂ ಡಿದ್ದ ಆರೋಪಿಗಳು ಚಿನ್ನಾಭರಣ ಕರಗಿಸಿ, ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಕಳ್ಳತನವಾಗಿ ಎರಡ್ಮೂರು ದಿನವಾಗಿದ್ದರಿಂದ ಹೆಚ್ಚಿನ ಆಭರಣಗಳನ್ನು ಮಾರಾಟ ಮಾಡಲು ಸಾಧ್ಯವಾಗಿಲ್ಲ. ಹಳೇ ಪ್ರಕರಣಗಳಲ್ಲಿ ಕದ್ದ ಚಿನ್ನಾಭರಣವನ್ನು ಎಲ್ಲೆಲ್ಲಿ ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಕಲೆ ಹಾಕ ಲಾಗುತ್ತಿದೆ ಎಂದು ತಿಳಿಸಿದರು.

ಸಿಸಿಟಿವಿ ಕೆಟ್ಟಿತ್ತು: ಕಳ್ಳತನ ನಡೆದ ಮೂಗೂರು ಗ್ರಾಮದ ಶ್ರೀ ತ್ರಿಪುರ ಸುಂದ ರಮ್ಮ ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿಟಿವಿ ಕೆಟ್ಟು ಹೋಗಿತ್ತು. ಪ್ರಕರಣದ ನಡೆದ ಬಳಿಕ ಸಿಸಿಟಿವಿ ಇಲ್ಲದ ಹಾಗೂ ಕೆಟ್ಟು ಹೋಗಿರುವ ದೇವಸ್ಥಾನಗಳಿಗೆ ಸಿಸಿಟಿವಿ ಅಳವಡಿಸುವಂತೆ ಮುಜರಾಯಿ ಇಲಾ ಖೆಗೆ ಪತ್ರ ಬರೆಯಲಾಗಿದೆ. ದೇವಸ್ಥಾನ ದಲ್ಲಿ ಸೆಕ್ಯೂರಿಟಿ ಇರಲಿಲ್ಲ. ಬಂಧಿತ ಆರೋಪಿಗಳು ಇನ್ನೂ ಎಲ್ಲೆಲ್ಲಿ ಕಳ್ಳತನ ಮಾಡಿದ್ದಾರೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

10 ಸಾವಿರ ಬಹುಮಾನ: ನಂಜನಗೂಡು ಉಪವಿಭಾಗದ ಡಿಎಸ್‍ಪಿ ಗೋವಿಂದ ರಾಜು ಹಾಗೂ ಟಿ.ನರಸೀಪುರ ಪೊಲೀಸ್ ಠಾಣೆ ಇನ್ಸ್‍ಸ್ಪೆಕ್ಟರ್ ಕೃಷ್ಣಪ್ಪ ನೇತೃತ್ವದಲ್ಲಿ ತಂಡ ವೈಜ್ಞಾನಿಕವಾಗಿ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಾಶಸ್ವಿಯಾಗಿದೆ.

ಈ ತಂಡಕ್ಕೆ 10 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಿದರು. ಅಪರ ಪೊಲೀಸ್ ಅಧೀಕ್ಷಕಿ ನಂದಿನಿ ಉಪಸ್ಥಿತರಿದ್ದರು.

Translate »