ಅದ್ಧೂರಿ ದಸರಾ ಆಚರಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನ
News

ಅದ್ಧೂರಿ ದಸರಾ ಆಚರಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನ

July 20, 2022

ಬೆಂಗಳೂರು, ಜು.19(ಕೆಎಂಶಿ)- ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಇದಕ್ಕೆ ಪೂರಕ ವಾಗಿ ದಸರಾ ಬ್ರ್ಯಾಂಡ್ ಸೃಜಿಸಿ ಜಾಗತಿಕ ಮಟ್ಟದಲ್ಲಿ ಭಾರೀ ಪ್ರಚಾರ ಕೈಗೊಳ್ಳಲು ಸೂಚಿಸಲಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ದಸರಾ-2022 ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆ ಜನಪ್ರತಿನಿಧಿಗಳು, ಅಧಿಕಾರಿ ಗಳಿಂದ ಅಭಿಪ್ರಾಯ ಸಂಗ್ರಹಿಸಿ, ಕೊರೊನಾ ನಂತರದಲ್ಲಿ ಈ ಬಾರಿ ಎಲ್ಲಾ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ದಸರಾ ಆಚರಿಸಲು ನಿರ್ಣಯ ಕೈಗೊಳ್ಳಲಾಯಿತು.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೈಸೂರು, ಚಾಮ ರಾಜನಗರ ಹಾಗೂ ಮಂಡ್ಯ ಜಿಲ್ಲೆಗಳ ಜನಪ್ರತಿನಿಧಿಗಳ ಅಪೇಕ್ಷೆಯಂತೆ ಈ ಬಾರಿ ವಿಜೃಂಭಣೆಯಿಂದ ದಸರಾ ಆಚರಿ ಸಲು ತೀರ್ಮಾನಿಸಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಅಲ್ಲದೆ ಹೊರ ರಾಜ್ಯ, ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿ ಸುವ ನಿಟ್ಟಿನಲ್ಲಿ ದಸರಾ ಬ್ರ್ಯಾಂಡ್ ಮಾಡಿ ದೊಡ್ಡ ಮಟ್ಟದ ಪ್ರಚಾರಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸರ್ಕಾರದ ಎಲ್ಲಾ ಜಾಹೀರಾತು, ಪ್ರಕಟಣೆಗಳು, ವೆಬ್ ಸೈಟ್, ಸಾಮಾಜಿಕ ಮಾಧ್ಯಮಗಳಲ್ಲಿ ಮೈಸೂರು ದಸರಾ ಲಾಂಛನ ಪ್ರಕಟಿಸಿ ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡ ಬೇಕು. ಮೆಟ್ರೋಪಾಲಿಟನ್ ಸಿಟಿಗಳಾದ ಮುಂಬೈ, ದೆಹಲಿ ಹಾಗೂ ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚುರಪಡಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಿಗೆ ಸೂಚಿಸ ಲಾಗಿದೆ. ನವರಾತ್ರಿಗೆ 15 ದಿನ ಮುಂಚಿತವಾಗಿಯೇ ದಸರಾ ವಸ್ತು ಪ್ರದರ್ಶನ ಆರಂಭಿಸುವಂತೆ ತಿಳಿಸಲಾಗಿದೆ ಎಂದರು.

ಪಾರಂಪರಿಕ ಪದ್ದತಿ ಪುನರಾರಂಭ: ಸಾಂಪ್ರದಾಯಿಕ ಗಜಪಯಣ ಸೇರಿದಂತೆ ಪಾರಂಪರಿಕ ಪದ್ದತಿಗಳನ್ನು ಪುನ: ಪ್ರಾರಂಭಿಸಲಾಗುವುದು. ಇದರಿಂದ ಸ್ಥಳೀಯ ಹಾಗೂ ಗ್ರಾಮೀಣ ಭಾಗದಲ್ಲಿ ಮುಂಚಿತವಾಗಿಯೇ ದಸರಾ ಸಂಭ್ರಮ ಕಳೆಗಟ್ಟುತ್ತದೆ. ಹಾಗೆಯೇ ಕೊರೊನಾ ಪೂರ್ವದಲ್ಲಿದ್ದಂತೆ ಎಲ್ಲಾ ಸಾಂಸ್ಕøತಿಕ ಕಾರ್ಯಕ್ರಮಗಳು, ಕ್ರೀಡೆ ಆಯೋಜಿ ಸಲಾಗುತ್ತದೆ. ಈ ಬಾರಿ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದ ರಿಗೆ ಅವಕಾಶ ನೀಡುವುದರ ಜೊತೆಗೆ ಜನಾಕರ್ಷಣೆ ನಿಟ್ಟಿನಲ್ಲಿ ನಿತ್ಯ ಒಬ್ಬರು ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಕಲಾವಿದರನ್ನು ಆಹ್ವಾನಿಸಲು ತೀರ್ಮಾ ನಿಸಲಾಗಿದೆ ಎಂದು ತಿಳಿಸಿದರು.

ಸಿಎಸ್‍ಆರ್ ಬಳಕೆಗೆ ಸೂಚನೆ: ಅರ ಮನೆ ಆವರಣದಲ್ಲಿ ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮಗಳು ಇನ್ನಿತರ ವೆಚ್ಚವನ್ನು ಅರಮನೆ ಮಂಡಳಿ ಭರಿಸ ಲಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 10 ಕೋಟಿ ರೂ. ಒದಗಿಸಲಾಗುತ್ತದೆ. ಸ್ಥಳೀಯ ಅಭಿವೃದ್ಧಿ ಮತ್ತು ಮೂಲಸೌಕರ್ಯ ಕಲ್ಪಿಸಲು ಈ ಬಾರಿ ಕಾಪೆರ್Çೀರೇಟ್ ಸಾಮಾಜಿಕ ಹೊಣೆಗಾರಿಕೆ(ಸಿಎಸ್‍ಆರ್) ನಿಧಿಯನ್ನು ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಇನ್ನೂ ಅನುದಾನದ ಅಗತ್ಯವಿದ್ದರೆ ಅಂದಾಜು ಪಟ್ಟಿ ಸಲ್ಲಿಸಿದರೆ ಸರ್ಕಾರ ಅಗತ್ಯ ನೆರವು ನೀಡಲಿದೆ. ಈ ಬಾರಿ ಶ್ರೀರಂಗಪಟ್ಟಣ ಹಾಗೂ ಚಾಮರಾಜನಗರ ದಸರಾ ಉತ್ಸವಕ್ಕೂ ತಲಾ 1 ಕೋಟಿ ರೂ. ಬಿಡು ಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ಸಂಪ್ರದಾಯ ಅನುಸರಣೆ: ನವರಾತ್ರಿ ಉತ್ಸವ ಸೆಪ್ಟೆಂಬರ್ 26ರಿಂದ ಆರಂಭ ವಾಗಲಿದ್ದು, ಅಕ್ಟೋಬರ್ 5ರಂದು ವಿಜಯದಶಮಿ ನೆರವೇರಲಿದೆ. ಮುಂಚಿತ ವಾಗಿ ಆಗಸ್ಟ್ 7ರಂದು ವೀರನಹೊಸಹಳ್ಳಿ ಯಿಂದ ಗಜಪಯಣಕ್ಕೆ ಚಾಲನೆ ಸಿಗಲಿದೆ. ಗಜಪಯಣ ಆದಿಯಾಗಿ ಎಲ್ಲಾ ಸಾಂಪ್ರ ದಾಯಿಕ ಕೈಂಕರ್ಯಗಳೂ ಜರುಗಲಿವೆ ಎಂದು ತಿಳಿಸಿದರು. ದಸರಾ ಸಂದರ್ಭ ದಲ್ಲೇ ಮೈಸೂರು- ಬೆಂಗಳೂರು ದಶಪಥ ರಸ್ತೆ ಉದ್ಘಾಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಮಳೆಗಾಲವಾದ್ದರಿಂದ ರಸ್ತೆ ಕಾಮಗಾರಿ ಪೂರ್ಣವಾಗುವುದು ತಡವಾಗಬಹುದು. ಹೀಗಾಗಿ ದಸರಾ ನಂತರದ ಒಂದು ತಿಂಗಳ ಬಳಿಕ ದಶಪಥ ರಸ್ತೆ ಉದ್ಘಾಟನೆ ಆಗಬಹುದು ಎಂದರು. ಕೆಆರ್‍ಎಸ್‍ಗೆ ಬಾಗಿನ ಸಮರ್ಪಿಸುವ ಕೈಂಕರ್ಯಕ್ಕೆ ರಾಜಮನೆತನದವರನ್ನು ಆಹ್ವಾನಿಸ ಬೇಕೆಂಬ ಆಗ್ರಹಕ್ಕೆ ಪ್ರತಿಕ್ರಿಯಿಸಿ, ಇದುವರೆಗೆ ಅವರನ್ನು ಆಹ್ವಾನಿಸಿರಲಿಲ್ಲ, ಆದರೆ ಈಗ ಆಹ್ವಾನಿಸಿದರೆ ತಪ್ಪೇನಿಲ್ಲ ವಲ್ಲಾ? ಈ ಬಗ್ಗೆ ನಾನು ಮಾತನಾಡು ತ್ತೇನೆ ಎಂದರು.

ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೇಯರ್ ಸುನಂದಾ ಪಾಲನೇತ್ರ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ತನ್ವೀರ್ ಸೇಠ್, ಎಲ್.ನಾಗೇಂದ್ರ, ಸಾ.ರಾ.ಮಹೇಶ್, ಹರ್ಷ ವರ್ಧನ್, ಕೆ.ಮಹದೇವ್, ಹೆಚ್.ಪಿ. ಮಂಜುನಾಥ್, ರವೀಂದ್ರ ಶ್ರೀಕಂಠಯ್ಯ, ವಿಧಾನಪರಿಷತ್ ಸದಸ್ಯ ಎ.ಹೆಚ್. ವಿಶ್ವನಾಥ್, ಸಿ.ಎನ್.ಮಂಜೇಗೌಡ, ಡಾ.ತಿಮ್ಮಯ್ಯ, ಮಧು ಜಿ.ಮಾದೇಗೌಡ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಮೈಸೂರು ಜಿಲ್ಲಾಧಿ ಕಾರಿ ಡಾ.ಬಗಾದಿ ಗೌತಮ್, ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರ ಗುಪ್ತ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಮತ್ತಿತರರು ಭಾಗ ವಹಿಸಿದ್ದರು. ಮಂಡ್ಯ ಸಂಸದೆ ಸುಮ ಲತಾ ಅಂಬರೀಶ್, ಸೇರಿದಂತೆ ಕೆಲ ಜನಪ್ರತಿನಿಧಿಗಳು ಗೈರಾಗಿದ್ದರು.

Translate »