ಸೆ.26ರಂದು ಈ ಬಾರಿಯ ದಸರಾ ಉತ್ಸವಕ್ಕೆ ಚಾಲನೆ
ಮೈಸೂರು

ಸೆ.26ರಂದು ಈ ಬಾರಿಯ ದಸರಾ ಉತ್ಸವಕ್ಕೆ ಚಾಲನೆ

July 20, 2022

ಮೈಸೂರು, ಜು.19(ಎಸ್‍ಬಿಡಿ)- ಅಧಿದೇವತೆ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸೆ.26ರಂದು ಬೆಳಗ್ಗೆ 9.45ರಿಂದ 10.05ರ ನಡುವಿನ ವೃಶ್ಚಿಕ ಲಗ್ನ ದಲ್ಲಿ ಶೈಲಾ ವ್ರತ ಪೂಜೆ ಮೂಲಕ ದಸರಾ ಮಹೋತ್ಸವ(ಶರನ್ನವ ರಾತ್ರಿ)-2022ಕ್ಕೆ ಚಾಲನೆ ದೊರಕಲಿದೆ. ಅಂದು ಸಂಜೆ 5.45 ರಿಂದ 6.30ರ ಮೀನಲಗ್ನದಲ್ಲಿ ಅರಮನೆಯಲ್ಲಿ ಪೂಜಾ ಕೈಂಕರ್ಯ ನೆರವೇರಲಿದೆ.

ಚಾಮುಂಡೇಶ್ವರಿ ದೇವಿಯನ್ನು ಎರಡನೇ ದಿನ(ಸೆ.27) ಬ್ರಹ್ಮಚಾರಿಣಿ ರೂಪದಲ್ಲಿ, ಮೂರನೇ ದಿನ(ಸೆ.28) ಚಂದ್ರ ಘಂಟ ದೇವಿ, ನಾಲ್ಕನೇ ದಿನ(ಸೆ.29) ಕೂಷ್ಮಾಂಡ ದೇವಿ, ಐದನೇ ದಿನ (ಸೆ.30) ಸ್ಕಂದ ಮಾತೆ, ಆರನೇ ದಿನ(ಅ.1) ಕಾತ್ಯಾಯಿನಿ, ಏಳನೇ ದಿನ(ಅ.2) ಕಾಳರಾತ್ರಿ, ಎಂಟನೇ ದಿನ(ಅ.3) ದುರ್ಗಾಷ್ಟಮಿ ಸಿದ್ಧಿಧಾತ್ರಿ, 9ನೇ ದಿನ(ಅ.4)ಕ್ಕೆ ಮಹಾಗೌರಿ ರೂಪದಲ್ಲಿ ಪೂಜಿಸಲಾಗುತ್ತದೆ. ಅಂದು ಮಹಾನವಮಿ ಆಯುಧಪೂಜೆ, ಗಜಾಶ್ವಾದಿ ಪೂಜೆ, ಹಯಗ್ರೀವ ಪೂಜೆ ನೆರವೇರಲಿದೆ. ಏಳನೇ ದಿನ ಮೂಲ ನಕ್ಷತ್ರದಲ್ಲಿ ಪ್ರಾರಂಭಿಸುವ ಸರಸ್ವತಿ ಪೂಜೆ ಶ್ರವಣ ನಕ್ಷತ್ರದ ದಿನ ಅಂದರೆ ಅ.5ರಂದು ವಿಸರ್ಜನೆಯಾಗಲಿದೆ.

ಅ.5ಕ್ಕೆ ವಿಜಯ ದಶಮಿ: ಅ.5ರಂದು ಮಧ್ಯಾಹ್ನ 2.36 ರಿಂದ 2.50 ಮಕರ ಲಗ್ನದಲ್ಲಿ ಮುಖ್ಯಮಂತ್ರಿಯವರು ನಂದೀ ಧ್ವಜ ಪೂಜೆ ನೆರವೇರಿಸಲಿದ್ದಾರೆ. ಸಂಜೆ 5.07ರಿಂದ 5.18ಕ್ಕೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿಗಳು ಹಾಗೂ ಗಣ್ಯಾತಿಗಣ್ಯರಿಂದ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿತ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿದ ನಂತರ ವೈಭವದ ಜಂಬೂ ಸವಾರಿ ಆರಂಭಗೊಳ್ಳಲಿದೆ. ಜಂಬೂ ಸವಾರಿ ಬನ್ನಿಮಂಟಪ ತಲುಪಿದ ನಂತರ ಅಲ್ಲಿನ ಮೈದಾನದಲ್ಲಿ ಅತ್ಯಾಕರ್ಷಕ ಪಂಜಿನ ಕವಾಯತು ನಡೆಯಲಿದ್ದು, ಅದರೊಂದಿಗೆ ಈ ಬಾರಿಯ ದಸರೆಗೆ ತೆರೆ ಬೀಳಲಿದೆ. ಚಾಮುಂಡಿ ಬೆಟ್ಟದಲ್ಲಿ ಅ.9ರಂದು ಶ್ರೀ ಚಾಮುಂಡೇಶ್ವರಿ ರಥೋತ್ಸವ ನೆರವೇರಲಿದೆ. ಎಂದಿನಂತೆ ಮೈಸೂರು ಅರಮನೆ ಪಂಚಾಂಗ, ಒಂಟಿ ಕೊಪ್ಪಲು ಪಂಚಾಂಗ ಹಾಗೂ ಮೇಲುಕೋಟೆ ಪಂಚಾಂಗವನ್ನು ಆಧರಿಸಿ ದಸರಾ ಮಹೋತ್ಸವದ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಮುಹೂರ್ತ ನಿಗದಿಪಡಿಸಲಾಗಿದೆ.

Translate »