ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯನ್ನು ಸಾಂಪ್ರದಾಯಿಕ ಹಾಗೂ ಅದ್ಧೂರಿಯಾಗಿ ಬರಮಾಡಿ ಕೊಳ್ಳಲಾಗುವುದು. ವೀರನ ಹೊಸಹಳ್ಳಿ ಗ್ರಾಮದಿಂದ ಆ.7ರ ಬೆಳಗ್ಗೆ 9.01ರಿಂದ 9.35ರ ಕನ್ಯಾ ಲಗ್ನದಲ್ಲಿ ಜಿಲ್ಲಾಡಳಿತದ ವತಿಯಿಂದ ಪೂಜೆ ಸಲ್ಲಿಸುವ ಮೂಲಕ ಗಜ ಪಯಣಕ್ಕೆ ಚಾಲನೆ ಸಿಗಲಿದೆ. ಆ.10ರ 9.20ರಿಂದ 10 ಗಂಟೆ ನಡು ವಿನ ಕನ್ಯಾ ಲಗ್ನದಲ್ಲಿ ಗಜಪೂಜೆ ನೆರವೇರಿಸಿ ಮೈಸೂರು ಅರಮನೆ ಅಂಗಳಕ್ಕೆ ಗಜಪಡೆಯನ್ನು ಸಾಂಪ್ರದಾಯಿಕ ವಾಗಿ ಸ್ವಾಗತಿಸಲಾಗುತ್ತದೆ.
ನಂತರದಲ್ಲಿ ಆನೆಗಳಿಗೆ ಪೌಷಿಕ ಆಹಾರ ನೀಡಿ ತಯಾರಿ ಮಾಡುವುದರ ಜೊತೆಗೆ ಹಂತ ಹಂತವಾಗಿ ತಾಲೀಮು ನಡೆಸಿ ಜಂಬೂ ಸವಾರಿಗೆ ಸಜ್ಜುಗೊಳಿಸಲಾಗುತ್ತದೆ. ಇದರ ನಡುವೆಯೇ ಮಾವುತರು ಹಾಗೂ ಕಾವಾಡಿಗಳು ಹಾಗೂ ಅವರ ಕುಟುಂಬದವರಿಗೆ ತಾತ್ಕಾಲಿಕ ನೆಲೆ, ಅವರ ಮಕ್ಕಳಿಗೆ ಟೆಂಟ್ ಶಾಲೆ ಇನ್ನಿತರ ವ್ಯವಸ್ಥೆಯೂ ಆಗಲಿದೆ. ದಸರಾ ಮಹೋತ್ಸವ ಸಂಪನ್ನಗೊಂಡ ನಂತರ ಅಕ್ಟೋಬರ್ 7ರಂದು ಬೆ.6.30ರಿಂದ 6.45 ಕನ್ಯಾಲಗ್ನದಲ್ಲಿ ಮೈಸೂರು ಅರಮನೆಯಿಂದ ವೀರನಹೊಸಹಳ್ಳಿಗೆ ಗಜಪಡೆ ಪ್ರಯಾಣ ಬೆಳೆಸಲಿದೆ.