ಚಾಮುಂಡಿಬೆಟ್ಟಕ್ಕೆ ರಾತ್ರಿ ವಾಹನ ಪ್ರವೇಶ ನಿಷಿದ್ಧ ನಿರ್ಧಾರ ನೆನೆಗುದಿಗೆ
ಮೈಸೂರು

ಚಾಮುಂಡಿಬೆಟ್ಟಕ್ಕೆ ರಾತ್ರಿ ವಾಹನ ಪ್ರವೇಶ ನಿಷಿದ್ಧ ನಿರ್ಧಾರ ನೆನೆಗುದಿಗೆ

September 23, 2018

ಮೈಸೂರು:  ರಾತ್ರಿ ವೇಳೆ ಸ್ವೇಚ್ಛಾಚಾರಕ್ಕೆ ಬ್ರೇಕ್ ಹಾಕಿ, ಬೆಟ್ಟದ ಪಾವಿತ್ರ್ಯತೆಯನ್ನು ಕಾಪಾಡಲು ಚಾಮುಂಡಿ ಬೆಟ್ಟಕ್ಕೆ ರಾತ್ರಿ 10ರಿಂದ ಮುಂಜಾನೆ 5 ಗಂಟೆಯವರೆಗೆ ವಾಹನ ಸಂಚಾರ ನಿರ್ಬಂಧಿಸುವ ನಿರ್ಧಾರ ಸಿಬ್ಬಂದಿಗಳ ಕೊರತೆಯಿಂದಾಗಿ ನೆನೆಗುದಿಗೆ ಬಿದ್ದಿದೆ.

ಜಾಲಿ ರೈಡ್ ನೆಪದಲ್ಲಿ ರಾತ್ರಿ 9 ಗಂಟೆಯ ನಂತರ ಮೈಸೂರು ಸೇರಿದಂತೆ ವಿವಿಧೆಡೆಯಿಂದ ಬೈಕ್ ಹಾಗೂ ಕಾರುಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ತಂಡೋಪ ತಂಡವಾಗಿ ಬರುತ್ತಿರುವ ಯುವಪಡೆ ಮಾರ್ಗ ಮಧ್ಯೆ ರಸ್ತೆಯ ಬದಿ ವಾಹನ ನಿಲ್ಲಿಸಿ ಮದ್ಯಪಾನ ಮಾಡಿ, ಮಾಂಸಹಾರ ಸೇವಿಸುವ ಮೂಲಕ ಬೆಟ್ಟದ ಪರಿಸರವನ್ನು ಕಲುಷಿತ ಗೊಳಿಸುತ್ತಿದ್ದರು. ಇದರಿಂದ ಬೆಟ್ಟದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಬೆಟ್ಟಕ್ಕೆ ವಾಹನ ನಿಷೇಧಿಸುವಂತೆ ಭಕ್ತರು ಆಗ್ರಹಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ದೇವಾಲಯದ ಆಡಳಿತ ಮಂಡಳಿ 2016ರ ಅಕ್ಟೋಬರ್‌ನಿಂದ ಬೆಟ್ಟಕ್ಕೆ ರಾತ್ರಿ 10 ರಿಂದ ಮುಂಜಾನೆ 5 ಗಂಟೆಯವರೆಗೂ ವಾಹನ ಪ್ರವೇಶ ನಿರ್ಬಂಧಿಸಲು ನಿರ್ಧರಿಸಿ, ಚಾಮುಂಡಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮೂರು ರಸ್ತೆಗಳಲ್ಲಿ ಗೇಟ್ ಅಳವಡಿಸಿ ಪ್ರಾಯೋಗಿಕವಾಗಿ ರಾತ್ರಿ 10ರ ನಂತರ ವಾಹನ ಸಂಚಾರಕ್ಕೆ ತಡೆಯೊಡ್ಡಲಾಗಿತ್ತು. ಆದರೆ ಇದೀಗ ಸಿಬ್ಬಂದಿ ಕೊರತೆ ಹಾಗೂ ಪೊಲೀಸ್ ಇಲಾಖೆ ವಾಹನ ಸಂಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಅಧಿಸೂಚನೆ ಹೊರಡಿಸದೇ ಇರುವುದ ರಿಂದ ರಾತ್ರಿ ಸಂಚಾರ ನಿರ್ಬಂಧಿಸುವ ಯೋಜನೆ ನೆನೆಗುದಿಗೆ ಬಿದ್ದಿದೆ. ಸ್ವಲ್ಪಕಾಲ ಸ್ಥಗಿತಗೊಂಡಿದ್ದಯುವಕರ ಜಾಲಿ ರೈಡ್ ಮತ್ತೆ ಆರಂಭವಾಗಿದೆ. ಹಾಗಾಗಿ ಬೆಟ್ಟದ ರಸ್ತೆ ವಿವಿಧೆಡೆ ಮದ್ಯದ ಖಾಲಿ ಬಾಟಲಿಗಳು, ತಿಂಡಿ ತಿನಿಸು ತಿಂದು ಬೀಸಾಡಿರುವ ಪ್ಲಾಸ್ಟಿಕ್ ಕವರ್‍ಗಳು ಕಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಚಾಮುಂಡಿಬೆಟ್ಟದಲ್ಲಿ ವಾಹನ ಸಂಚಾರ ನಿರ್ಬಂಧ ಕೂಗು ಮತ್ತೆ ಕೇಳಿ ಬಂದಿದೆ.

ಅಧಿಸೂಚನೆಗೆ ಪತ್ರ ಬರೆಯಲಾಗಿದೆ: ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಆಡಳಿತಾಧಿಕಾರಿ ಕೆ.ಎಂ.ಪ್ರಸಾದ್, `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಈ ಹಿಂದೆ ರಾತ್ರಿ ವೇಳೆ ಯುವಕರ ತಂಡಗಳು ಚಾಮುಂಡಿಬೆಟ್ಟಕ್ಕೆ ಬಂದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಹಾಗಾಗಿ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿತ್ತು. ಈ ಹಿನ್ನೆಲೆ ಯಲ್ಲಿ ಬೆಟ್ಟದ ಪಾವಿತ್ರ್ಯತೆ ಕಾಪಾಡುವುದಕ್ಕೆ ರಾತ್ರಿ 10ರಿಂದ ಮುಂಜಾನೆ 5 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಲು ನಿರ್ಧರಿಸಲಾಯಿತು. ಇದಕ್ಕಾಗಿ ಮೂರು ರಸ್ತೆಗಳಲ್ಲಿಯೂ ಗೇಟ್ ಅಳವಡಿಸಿ, ಭದ್ರತಾ ಸಿಬ್ಬಂದಿ ತಂಗಲು ಶೆಡ್‍ಗಳನ್ನು ನಿರ್ಮಿಸಲಾಗಿತ್ತು. ಆದರೆ ವಾಹನ ಸಂಚಾರ ನಿರ್ಬಂಧಿಸುವ ಅಧಿಕಾರ ದೇವಾಲಯದ ಆಡಳಿತ ಮಂಡಳಿಗೆ ಇಲ್ಲ. ಈ ಹಿನ್ನೆಲೆಯಲ್ಲಿ ರಾತ್ರಿ ಸಂಚಾರ ನಿಷೇಧಿಸುವುದಕ್ಕೆ ಪೊಲೀಸ್ ಇಲಾಖೆ ಅಧಿಸೂಚನೆ ಹೊರಡಿಸಿ ಮೂರು ಗೇಟ್‍ಗಳಲ್ಲಿ ಪೊಲೀಸ್ ಸಿಬ್ಬಂದಿನಿಯೋಜಿಸುವಂತೆ ಕೋರಿದ್ದವು. ಪೊಲೀಸರೊಂದಿಗೆ ದೇವಾಲಯದ ವತಿಯಿಂದಲೂ ಓರ್ವ ಸಿಬ್ಬಂದಿಯನ್ನು ನಿಯೋಜಿಸುತ್ತೇವೆ. ಪೊಲೀಸ್ ಇಲಾಖೆ ಅಧಿಸೂಚನೆ ಹೊರಡಿಸಿ, ಪೊಲೀಸ್ ಸಿಬ್ಬಂದಿ ನೇಮಿಸಿದ ನಂತರವಷ್ಟೇ ವಾಹನ ಸಂಚಾರ ನಿರ್ಬಂಧಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಸಿಬ್ಬಂದಿ ಕೊರತೆಯಿದೆ: ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಚಾಮುಂಡಿಬೆಟ್ಟಕ್ಕೆ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸು ವಂತೆ ದೇವಾಲಯದ ಆಡಳಿತ ಮಂಡಳಿ ಬರೆದಿರುವ ಪತ್ರಕ್ಕೆ ಸಂಬಂಧಿಸಿದಂತೆ ಕೆ.ಆರ್.ಪೊಲೀಸ್ ಠಾಣೆಯ ಮೂಲಕ ಪ್ರತಿಕ್ರಿಯೆ ನೀಡಲಾಗಿದೆ. ಚಾಮುಂಡಿಬೆಟ್ಟಕ್ಕೆ ಭದ್ರತೆ ಕಲ್ಪಿಸಲು ಅರಮನೆಯಲ್ಲಿರುವಂತೆ ಪ್ರತ್ಯೇಕ ಭದ್ರತಾ ವಿಭಾಗ ಸ್ಥಾಪಿಸುವ ಅಗತ್ಯವಿದೆ. ಈಗಾಗಲೇ ಮೈಸೂರಿನಲ್ಲಿ ಪೊಲೀಸರ ಕೊರತೆ ಇರುವುದರಿಂದ ಚಾಮುಂಡಿ ಬೆಟ್ಟಕ್ಕೆ ಇನ್ನಷ್ಟು ಹೆಚ್ಚಿನ ಸಿಬ್ಬಂದಿ ನಿಯೋಜಿಸಲು ಸಾಧ್ಯವಾಗುತ್ತಿಲ್ಲ. ಖಾಸಗಿ ಭದ್ರತಾ ಸಿಬ್ಬಂದಿಗೆ ಈ ಜವಾಬ್ದಾರಿ ನೀಡುವುದಕ್ಕೂ ಸಾಧ್ಯವಿಲ್ಲ. ಅಲ್ಲದೆ ಖಾಸಗಿ ಭದ್ರತಾ ಸಿಬ್ಬಂದಿಯೊಂದಿಗೆ ಪೊಲೀಸರು ಕರ್ತವ್ಯ ನಿರ್ವಹಿಸುವುದಕ್ಕೂ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರ ಕೊರತೆ ನೀಗಿಸುವುದರೊಂದಿಗೆ ಪ್ರತ್ಯೇಕ ಭದ್ರತಾ ವಿಭಾಗವನ್ನು ಸ್ಥಾಪಿಸುವ ಸಂಬಂಧ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ ಎಂದರು.

ಯಾವ ಯಾವ ಗೇಟ್: ಚಾಮುಂಡಿಬೆಟ್ಟಕ್ಕೆ ತಾವರೆಕಟ್ಟೆ, ನಂದಿ ರಸ್ತೆ ಹಾಗೂ ಉತ್ತನಹಳ್ಳಿ ರಸ್ತೆ ಹಾಗೂ ಲಲಿತಮಹಲ್ ಕಡೆಯ ರಸ್ತೆಯಿಂದ ಪ್ರವೇಶಿಸಬಹುದು. ಈ ನಾಲ್ಕು ರಸ್ತೆಗಳಲ್ಲೂ ಈಗಾಗಲೇ ಅರಮನೆಯ ಆಡಳಿತ ಮಂಡಳಿಯಿಂದ ಗೇಟ್ ಅಳವಡಿಸಲಾಗಿದೆ. ಜಾಲಿ ರೈಡ್‍ಗೆ ಬರುವ ಯುವಕರು ವ್ಯೂವ್ ಪಾಯಿಂಟ್, ನಂದಿ ರಸ್ತೆ, ವೆಲ್‍ಕಮ್ ಬೋರ್ಡ್ ಬಳಿ ಸೇರಿದಂತೆ ವಿವಿಧೆಡೆ ಕುಳಿತುಕೊಂಡು ಮದ್ಯಪಾನ, ಧೂಮಪಾನ ಮಾಡುವ ಮೂಲಕ, ಇದನ್ನು ಪ್ರಶ್ನಿಸುವವರೊಂದಿಗೆ ಉದ್ದಟತನ ಪ್ರದರ್ಶಿಸುತ್ತಾರೆ. ಅಲ್ಲದೆ ಬೆಟ್ಟಕ್ಕೆ ಬರುವ ಭಕ್ತರಿಗೆ ವಿನಾಃ ಕಾರಣ ಕಿರುಕುಳ ನೀಡುವುದು, ದಾರಿ ಹೋಕರಿಗೆ ಮೊಟ್ಟೆಯಲ್ಲಿ ಹೊಡೆಯುವ ಮೂಲಕ ಕೀಟಲೆ ಮಾಡುತ್ತಿದ್ದರು. ಕೆಲವು ವೇಳೆ ಮತ್ತಿನಲ್ಲಿದ್ದ ಪುಂಡರು ಅಮಾಯಕರ ಸುಲಿಗೆ ಮಾಡಿರುವ ನಿದರ್ಶನಗಳಿವೆ. ಇದರಿಂದಾಗಿ ರಾತ್ರಿ ವೇಳೆ ಸಂಚಾರಕ್ಕೆ ಕಡಿವಾಣ ಹಾಕಿದರೆ ಇವೆಲ್ಲಾ ಚಟುವಟಿಕೆಗಳಿಗೆ ಬ್ರೇಕ್ ಬೀಳಲಿದೆ.

Translate »