ವಾಣಿಜ್ಯ ವಹಿವಾಟು ಕೇಂದ್ರವಾಗುತ್ತಿರುವ ಚಾಮುಂಡಿಬೆಟ್ಟದ ರಸ್ತೆ
ಮೈಸೂರು

ವಾಣಿಜ್ಯ ವಹಿವಾಟು ಕೇಂದ್ರವಾಗುತ್ತಿರುವ ಚಾಮುಂಡಿಬೆಟ್ಟದ ರಸ್ತೆ

September 23, 2018

ಮೈಸೂರು: ಪ್ರಮುಖ ಪ್ರವಾಸಿ ತಾಣವೂ ಆದ, ಪವಿತ್ರ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ರಸ್ತೆ, ಇದೀಗ ವ್ಯಾಪಾರ, ವಾಣಿಜ್ಯ ವಹಿವಾಟಿನ ಕೇಂದ್ರವಾಗಿ ಬದಲಾಗುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಭಕ್ತರು, ಪ್ರವಾಸಿಗರು ಹಾಗೂ ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ, ಅಧಿಕಾರಿ ವರ್ಗದ ಅಸಡ್ಡೆಯಿಂದಾಗಿ ಪವಿತ್ರ ಕ್ಷೇತ್ರಕ್ಕೆ ತೆರಳುವ ಮಾರ್ಗದಲ್ಲಿ ಹತ್ತಾರು ವ್ಯಾಪಾರ ಮಳಿಗೆಗಳು, ಗೂಡಂಗಡಿಗಳು, ಫಾಸ್ಟ್‍ಫುಡ್ ಗಾಡಿಗಳು ತಳವೂರಿವೆ. ಇನ್ನು ದಸರಾ ಸಂದರ್ಭ ದಲ್ಲಿ ನಾನಾ ವಸ್ತುಗಳ ಮಾರಾಟಕ್ಕೆಂದು ಹೊರಗಿನಿಂದ ಮೈಸೂರಿಗೆ ಬರುವವರೂ ಈ ರಸ್ತೆಯಲ್ಲಿ ಬೀಡುಬಿಟ್ಟಿದ್ದಾರೆ. ಮೈಸೂರಿಂದ ಪವಿತ್ರ ಧಾರ್ಮಿಕ ಹಾಗೂ ಪವಿತ್ರ ಸ್ಥಳ ಚಾಮುಂಡಿಬೆಟ್ಟದ ಸಂಪರ್ಕಕ್ಕಿರುವ ಪ್ರಮುಖ ವಿಶಾಲ ರಸ್ತೆ ಈಗ ವಿರೂಪವಾಗುತ್ತಿದೆ.

ರಸ್ತೆಯ ಎರಡೂ ಬದಿಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಿರುವುದರಿಂದ ಗ್ರಾಹಕರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಾರೆ. ಪರಿಣಾಮ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

ಕುರುಬಾರಹಳ್ಳಿ ಸರ್ಕಲ್(ಸಂಗೊಳ್ಳಿ ರಾಯಣ್ಣ ಸರ್ಕಲ್)ನಿಂದ ಚಾಮುಂಡಿಬೆಟ್ಟದ ತಪ್ಪಲಿನ ತಾವರೆಕಟ್ಟೆ ಗೇಟ್‍ವರೆಗೂ ವಾಣಿಜ್ಯ ರಸ್ತೆಯಂತೆ ಭಾಸವಾಗುತ್ತಿದೆ. ಕರಕುಶಲ ವಸ್ತುಗಳು, ಸೀರೆಗಳು, ಸ್ನ್ಯಾಕ್ಸ್, ಹೋಟೆಲ್, ಬ್ರಿಕ್ ಅಂಡ್ ಮೊರ್ಟಾರ್ ಅಂಗಡಿಗಳು, ಮೊಬೈಲ್ ಶಾಪ್‍ಗಳಂತಹ ಅಂಗಡಿ ಜೊತೆಗೆ ಹಲವು ತಾತ್ಕಾಲಿಕ ವ್ಯಾಪಾರಿ ಟೆಂಟ್‍ಗಳು ರಸ್ತೆಯ ಇಕ್ಕೆಲಗಳಲ್ಲಿ ತಲೆ ಎತ್ತಿರುವುದು ಅಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗಲು ಪ್ರಮುಖ ಕಾರಣವಾಗಿದೆ. ಹಾಗಾಗಿ ತ್ಯಾಜ್ಯ ಉತ್ಪತ್ತಿ ಹೆಚ್ಚಾಗಿ, ರಸ್ತೆಯಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ. ಇದರಿಂದ ಪ್ರಾಕೃತಿಕ ಸೌಂದರ್ಯವೂ ಹಾಳಾಗಿ ಹೋಗುತ್ತಿದೆ. ಅಲ್ಲದೆ ಪ್ರವಾಸಿ ಗರನ್ನು ಆಕರ್ಷಿಸಿ ಸಿಟಿ ಟೂರ್ ಮಾಡಿಸಲು ಚಾಮುಂಡಿಬೆಟ್ಟದ ರಸ್ತೆ ಬದಿಯಲ್ಲಿ ‘ಜೀಪ್ ಟೂರ್’ ಉದ್ಯಮವೂ ನೆಲೆಯೂರಿದೆ. ಪ್ರವಾಸಿಗರು ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸಿ, ಓಪನ್ ಜೀಪ್ ಬಾಡಿಗೆ ಪಡೆದು, ಮೈಸೂರು ಪ್ರದಕ್ಷಿಣೆಗೆ ತೆರಳುತ್ತಾರೆ. ಅವರು ವಾಪಸ್ಸಾಗುವವರೆಗೂ ಈ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಲ್ಭಣವಾಗಿರುತ್ತದೆ. ಇನ್ನಿತರೆ ಪ್ರವಾಸಿ ವಾಹನಗಳು ಹಾಗೂ ಸಾರಿಗೆ ಸಂಸ್ಥೆ ಬಸ್‍ಗಳ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಮನಗಾಣದೆ ಹೀಗೆ ಜೀಪ್ ಟೂರ್ ಮಾಡಿಸುವುದಕ್ಕೆ ಅನುಮತಿ ನೀಡಿದವರ್ಯಾರು?. ಹೀಗೆ ಟೂರ್ಸ್ ಅಂಡ್ ಟ್ರಾವೆಲ್ ಸಂಸ್ಥೆಗಳು ಮುಖ್ಯರಸ್ತೆಗಳಲ್ಲಿ ತಮ್ಮ ವ್ಯವಹಾರ ಆರಂಭಿಸಿದರೆ, ಕೆಆರ್‍ಎಸ್ ರಸ್ತೆಗಳಲ್ಲಿ ಟೂರಿಸ್ಟ್ ಟ್ಯಾಕ್ಸಿಗಳು, ಕೆಆರ್‍ಎಸ್ ಅಣೆಕಟ್ಟೆ ನೋಡಲು ಪ್ರವಾಸಿಗರನ್ನು ಕರೆದೊಯ್ಯಲು ಸಾಲುಗಟ್ಟಿ ನಿಲ್ಲುವಂತಾಗಬಹುದು. ಹಾಗಾದರೆ ಪ್ರವಾಸಿ ಕಚೇರಿಗಳೇಕಿರಬೇಕೆಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಈ ರಸ್ತೆಯ ಅವ್ಯವಸ್ಥೆ ಬಗ್ಗೆ ಯಾರಿಗೆ ದೂರುವುದು ಎಂಬುದೇ ಒಂದು ಗೊಂದಲ. ಯಾರಿಗೇಳಿದರೂ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅವರ ಗಮನಕ್ಕೆ ತನ್ನಿ, ಇವರಿಗೆ ತಿಳಿಸಿ ಎಂದು ನುಣುಚಿಕೊಳ್ಳುತ್ತಾರೆ. ಪೊಲೀಸರು, ಪಾಲಿಕೆ, ಮುಡಾ ಅಧಿಕಾರಿಗಳು ಯಾರಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಸದ್ಯ ಅವರಿಗೆ ಇದೊಂದು ಸಣ್ಣ ಸಮಸ್ಯೆ ಯಾಗಿರಬಹುದು. ಆದರೆ ಮುಂದೊಂದು ದಿನ ಇದೇ ದೊಡ್ಡ ಸಮಸ್ಯೆಯಾಗುತ್ತದೆ. ಆಗ ಯಾರು ಹೊಣೆಯಾಗುತ್ತಾರೆ. ಪವಿತ್ರ ಸ್ಥಳವಾದ ಚಾಮುಂಡಿಬೆಟ್ಟದ ಮುಖ್ಯ ರಸ್ತೆಯನ್ನೂ ಕಾಪಾಡಿಕೊಳ್ಳುವಲ್ಲಿ ಇಷ್ಟೊಂದು ಉದಾಸೀನ ಮಾಡುವುದು ಸರಿಯಲ್ಲ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ, ಸೂಕ್ತ ಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಂಚಾರಕ್ಕೆ ಅಡ್ಡಿಪಡಿಸುವವರ ವಿರುದ್ಧ ಕ್ರಮ: ಕಮೀಷ್ನರ್

ಮೈಸೂರು: ಚಾಮುಂಡಿಬೆಟ್ಟದ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗು ವುದು ಎಂದು ಮೈಸೂರು ನಗರ ಪೊಲೀಸ್ ಕಮೀಷ್ನರ್ ಡಾ. ಎ. ಸುಬ್ರಹ್ಮಣ್ಯೇ ಶ್ವರ ರಾವ್ ತಿಳಿಸಿದ್ದಾರೆ. `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿರುವ ಅವರು, ಫುಟ್‍ಪಾತ್ ಗಳು ಪಾಲಿಕೆ ವ್ಯಾಪ್ತಿಗೆ ಬರುತ್ತವೆ. ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದರೆ ಪೊಲೀಸರು ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದರು. ಈ ಬಗ್ಗೆ ಪರಿಶೀಲಿಸುವಂತೆ ಸಂಚಾರ ವಿಭಾಗದ ಡಿಸಿಪಿ ಡಾ. ವಿಕ್ರಂ ಅಮಟೆ ಅವರಿಗೆ ಹೇಳುತ್ತೇನೆ. ಒಂದು ವೇಳೆ ರಸ್ತೆ ಬದಿ ಅಂಗಡಿ-ಮುಂಗಟ್ಟು ಸ್ಥಾಪಿಸಿ ವಾಹನ ನಿಲ್ಲಿಸಿಕೊಂಡು ಸಂಚಾರಕ್ಕೆ ಅಡ್ಡಿಪಡಿಸುವುದು ಕಂಡು ಬಂದಲ್ಲಿ ಸಿದ್ಧಾರ್ಥ ಸಂಚಾರ ಠಾಣೆ ಪೊಲೀಸರ ಮೂಲಕ ಅವರು ಕ್ರಮ ವಹಿಸುತ್ತಾರೆ ಎಂದು ಕಮೀಷ್ನರ್ ತಿಳಿಸಿದರು.

ಪವಿತ್ರ ಕ್ಷೇತ್ರದ ರಸ್ತೆಯ ಪಾವಿತ್ರ್ಯತೆ ಕಾಪಾಡಬೇಕಲ್ಲವೇ?

ಮೈಸೂರು:  ಚಾಮುಂಡಿಬೆಟ್ಟ ಒಂದು ಪವಿತ್ರ, ಧಾರ್ಮಿಕ ಸ್ಥಳ. ದಿನನಿತ್ಯ ವಿದೇಶಿಯರು ಸೇರಿದಂತೆ ಸಾವಿರಾರು ಮಂದಿ ಭೇಟಿ ನೀಡುವ ಪ್ರವಾಸಿ ತಾಣವೂ ಹೌದು. ಇಲ್ಲಿಗೆ ಸಂಪರ್ಕಿ ಸುವ ಮುಖ್ಯರಸ್ತೆಯನ್ನೂ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದಿ ರುವುದು ವಿಷಾದನೀಯ. ಪ್ರೇಕ್ಷಣೀಯ ಸ್ಥಳವಾದ ಚಾಮುಂಡಿ ಬೆಟ್ಟದ ಪಾವಿತ್ರ್ಯತೆ, ಶುಚಿತ್ವ, ಘನತೆಯನ್ನು ಕಾಪಾಡಿಕೊಳ್ಳುವ ಜವಾ ಬ್ದಾರಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಮೇಲಿದೆ. ಹಾಗಾಗಿ ಚಾಮುಂಡಿಬೆಟ್ಟಕ್ಕೆ ಹೋಗುವ ಈ ಒಂದು ಪ್ರಮುಖ ರಸ್ತೆಯನ್ನು ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಿ, ಅಂದಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿತ್ತು. ಆದರೆ ನಮ್ಮ ಅಧಿಕಾರಿ ವರ್ಗ ಸುಮ್ಮನೆ ಕಚೇರಿಯಲ್ಲಿ ಕುಳಿತು, ಈ ರಸ್ತೆಯಲ್ಲಿ ವಾಣಿಜ್ಯ ವಹಿವಾಟಿಗೆ ಕಣ್ಮುಚ್ಚಿ ಅನುಮತಿ ಮಂಜೂರು ಮಾಡಿದೆ. ಈ ರಸ್ತೆಯಲ್ಲಿ ಹೋಟೆಲ್‍ಗಳು, ಬಟ್ಟೆ ಅಂಗಡಿಗಳು, ಕುರಿ, ಕೋಳಿ ಇನ್ನಿತರ ಮಾಂಸ ಮಾರಾಟ ಮಾಡುವ ಅಂಗಡಿಗಳು ತಲೆ ಎತ್ತಿವೆ. ಈ ವಾಣಿಜ್ಯ ವಹಿವಾಟಿನಿಂದ ಸಾಕಷ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗಿ, ಇಡೀ ರಸ್ತೆಯ ಶುಚಿತ್ವಕ್ಕೆ ಭಂಗವಾಗುತ್ತಿದೆ.

ಅಶುಚಿತ್ವ ತಾಂಡವವಾಡುತ್ತಿರುವ ರಸ್ತೆಯಲ್ಲಿ ಪವಿತ್ರ ಸ್ಥಳಕ್ಕೆ ತೆರಳಬೇಕಾದ ದುಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗೆ ಹದಗೆಟ್ಟ ರಸ್ತೆಯಲ್ಲಿ ದೇವಾಲಯಕ್ಕೆ ಸಾಗಿ, ಶುದ್ಧ ಮನಸ್ಸಿನಿಂದ ದೇವಿ ದರ್ಶನ ಮಾಡುವುದಾದರೂ ಹೇಗೆ?. ಇದು ಭಕ್ತಾಧಿಗಳ ಪ್ರಶ್ನೆ. ರಾಜ್ಯ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬ ನಾಣ್ಣುಡಿ ಯಂತೆ ಚಾಮುಂಡಿಬೆಟ್ಟದ ಪ್ರಮುಖ ಸಂಪರ್ಕ ರಸ್ತೆ ಅವ್ಯವಸ್ಥೆಯ ತಾಣವಾಗುವವರೆಗೂ ಯಾರೊಬ್ಬರೂ ಗಮನಹರಿಸುವುದಿಲ್ಲ ಎಂದೆನಿಸುತ್ತದೆ. ಪರಿಸ್ಥಿತಿ ಕೈಮೀರಿ, ಸಮಸ್ಯೆ ಸೃಷ್ಟಿಯಾದ ನಂತರ, ಅದರ ಪರಿಹಾರಕ್ಕೆ ಪರಿತಪಿಸುವ ಪರಿಪಾಟವನ್ನೇ ಮುಂದು ವರಿಸುವ ಲಕ್ಷಣಗಳು ಗೋಚರಿಸುತ್ತಿವೆ. ಈ ರಸ್ತೆಯ ಪರಿಸ್ಥಿತಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಸ್ಥಳೀಯ ಶಾಸಕರಾಗಲೀ, ಗಮನ ಹರಿಸದಿರುವುದು ಇದನ್ನು ಸಾಕ್ಷೀಕರಿಸುತ್ತದೆ. ನಮ್ಮ ಪುರಪಿತೃಗಳು, `ಪಿತೃ’ಸ್ಥಾನದಲ್ಲಿ ನಿಂತು ಸ್ಥಳೀಯ ಆಗು-ಹೋಗುಗಳನ್ನು ಅವಲೋಕಿಸಿ, ಪರಿಹಾರಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳುವ ಹೊಣೆಗಾರಿಕೆ ಹೊತ್ತವರು. ಆದರೆ ಇವರೂ ನಿರ್ಲಕ್ಷ್ಯ ತಾಳಿರುವುದು ಅತ್ಯಂತ ವಿಷಾದನೀಯ ಸಂಗತಿ. ಬೇರೆ ಯಾವುದೇ ರಾಜ್ಯ ಇಲ್ಲವೇ ದೇಶದಲ್ಲಿ ಇಂತಹ ಪ್ರಾಕೃತಿಕ ಸೌಂದರ್ಯದ ಮಡಿಲಲ್ಲಿರುವ ಪವಿತ್ರ, ಐತಿಹಾಸಿಕ, ಯಾತ್ರಾಸ್ಥಳದ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ತಳೆಯುವುದಿಲ್ಲ. ಪವಿತ್ರ, ಪ್ರವಾಸಿ ಕೇಂದ್ರಗಳು ಹಾಗೂ ಅವುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಮಹತ್ವ ನೀಡಿ, ಸೌಂದರ್ಯ, ಪಾವಿತ್ರ್ಯತೆ ಕಾಪಾಡಿಕೊಳ್ಳಲಾಗುತ್ತದೆ. ಆದರೆ ರಾಜಮಹಾರಾಜರು ಅಚ್ಚುಕಟ್ಟಾಗಿ ಕಟ್ಟಿರುವ, ಪಾರಂಪರಿಕ, ಐತಿಹಾಸಿಕ, ಸಾಂಸ್ಕøತಿಕ ನಗರದ ಮಹತ್ವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಾಲಿ ಆಡಳಿತ ವ್ಯವಸ್ಥೆ ಗಮನಹರಿಸ ದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಒಂದು ವೇಳೆ ವ್ಯಾಪಾರ-ವಹಿವಾಟು ನಡೆಸಲು ಹೀಗೆಯೇ ಅವಕಾಶ ನೀಡಿದರೆ ಮುಂದೆ ಚಾಮುಂಡಿಬೆಟ್ಟದ ರಸ್ತೆ ಮತ್ತೊಂದು ಎಂಜಿ ರಸ್ತೆಯಾಗಿ ವ್ಯಾಪಾರಿ ದಟ್ಟಣೆ ಸ್ಥಳವಾಗಿ ಪರಿವರ್ತನೆಯಾಗುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಸಾರ್ವಜನಿಕರ ಆತಂಕವೂ ಆಗಿದೆ.

Translate »