ಮೈಸೂರು: ಬಾಡಿಗೆ ಹಣ ಮತ್ತು ಲಾಭಾಂಶ ನೀಡುವ ಸಂಬಂಧ ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮೈಸೂರಿನ ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ಕಾವೇರಿ ಸಿಲ್ಕ್ ಉದ್ಯೋಗ ಎಂಪೋರಿಯಂ ಮಳಿಗೆಗೆ ತಹಶೀಲ್ದಾರ್ ಟಿ.ರಮೇಶ್‍ಬಾಬು ಇಂದು ಬೀಗಮುದ್ರೆ ಮಾಡಿಸಿದರು.
ಮಳಿಗೆ ಸ್ವಾಧೀನ ಪಡೆಯುವ ವಿಚಾರದಲ್ಲಿ ಅಕ್ಟೋಬರ್ 6ರಂದು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ದೂರು-ಪ್ರತಿದೂರು ನೀಡಿದ ಹಿನ್ನೆಲೆಯಲ್ಲಿ ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೋಮು ಸೌಹಾರ್ದತೆ ಕಾಪಾಡುವ ದೃಷ್ಟಿ ಹಾಗೂ ನಾಡಹಬ್ಬ ದಸರಾ ನಡೆಯುತ್ತಿರುವುದರಿಂದ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಉಭಯ ಗುಂಪುಗಳಿಂದ ಅಶಾಂತಿ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ ತುರ್ತಾಗಿ ಐಪಿಸಿ ಸೆಕ್ಷನ್ 145 ರೀತ್ಯಾ ಕಾನೂನು ಕ್ರಮ ವಹಿಸುವಂತೆ ನಜರ್‍ಬಾದ್ ಠಾಣೆ ಪೊಲೀಸರು ತಹಶೀಲ್ದಾರ್‍ರನ್ನು ಕೇಳಿಕೊಂಡಿದ್ದರು.
ಅವರ ಕೋರಿಕೆಯನ್ವಯ ತಾಲೂಕು ದಂಡಾಧಿಕಾರಿಯೂ ಆದ ಮೈಸೂರು ತಹಶೀಲ್ದಾರ್ ಟಿ.ರಮೇಶ್‍ಬಾಬು, ತಮಗೆ ದತ್ತವಾದ ಅಧಿಕಾರ ಬಳಸಿ ಸಿವಿಲ್ ನ್ಯಾಯಾ ಲಯದಲ್ಲಿ ವಿವಾದ ಇತ್ಯರ್ಥವಾಗುವವರೆಗೆ ಕಾವೇರಿ ಸಿಲ್ಕ್ ಉದ್ಯೋಗ ಎಂಪೋರಿಯಂ ಮಳಿಗೆಯನ್ನು ಮುಚ್ಚಿಸುವಂತೆ ಅಕ್ಟೋಬರ್ 9ರಂದು ಆದೇಶ ಹೊರಡಿಸಿದ್ದರು.
ಈ ಆದೇಶದನ್ವಯ ಮಳಿಗೆ ಮುಚ್ಚದೆ ವ್ಯಾಪಾರ ವಹಿವಾಟು ನಡೆಸುತ್ತಿದ್ದರಿಂದ ಪೊಲೀಸರು ಸ್ಥಳಕ್ಕೆ ತೆರಳಿ ಬಂದ್ ಮಾಡುವಂತೆ ಹೇಳಿದಾಗ ಕ್ಯಾಷ್ ಕೌಂಟರ್‍ನಲ್ಲಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆವೊಡ್ಡಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ರಮೇಶ್‍ಬಾಬು ಅವರೇ ತೆರಳಿ ನಿಯಮಾನುಸಾರ ಬೀಗ ಮುದ್ರೆ ಮಾಡಿಸಿದರು.ಈ ಸಂದರ್ಭ ನಜರ್‍ಬಾದ್ ಠಾಣೆ ಇನ್ಸ್‍ಪೆಕ್ಟರ್ ಮಹದೇವಸ್ವಾಮಿ ನೇತೃತ್ವದಲ್ಲಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.