ಬಂಡೀಪುರ ಉಳಿಸಿ, ವನ್ಯಜೀವಿಗಳನ್ನು ರಕ್ಷಿಸಿ
ಮೈಸೂರು

ಬಂಡೀಪುರ ಉಳಿಸಿ, ವನ್ಯಜೀವಿಗಳನ್ನು ರಕ್ಷಿಸಿ

October 12, 2018

ಕಾಡಿನೊಳಗೆ ಮೇಲ್ಸೇತುವೆ ನಿರ್ಮಾಣ ಪ್ರಯತ್ನಕ್ಕೆ ಪರಿಸರವಾದಿಗಳ ಆಕ್ರೋಶ, ಪ್ರತಿಭಟನೆ
ಮೈಸೂರು:  ಬಂಡೀಪುರ ಉಳಿಸಿ, ವನ್ಯಜೀವಿಗಳನ್ನು ರಕ್ಷಿಸಿ ಎಂದು ವಿವಿಧ ಪರಿಸರ ಪೂರಕ ಸಂಘಟನೆಗಳು ಗುರುವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದವು.

ಮೈಸೂರು ಗ್ರಾಹಕರ ಪರಿಷತ್, ಸೇವ್ ವೈಲ್ಡ್‍ಲೈಫ್, ಪರಿಸರ ಸಂರಕ್ಷಣಾ ಸಮಿತಿ, ಪ್ರಕೃತಿ ಸಾವಯವ ಕೃಷಿಕರು ಸೇರಿದಂತೆ ಇನ್ನಿತರ ಪರಿಸರಪೂರಕ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಯಾವುದೇ ಕಾರಣಕ್ಕೂ ಬಂಡೀಪುರ ಅಭಯಾರಣ್ಯದಲ್ಲಿ ಎಲಿವೇಟೆಡ್ ರಸ್ತೆ ನಿರ್ಮಿಸಲು ಅವಕಾಶ ನೀಡಬಾರದು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

ಬಂಡೀಪುರ ಅಭಯಾರಣ್ಯದೊಳಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಯಲ್ಲಿ ರಾತ್ರಿ 9ರಿಂದ ಮುಂಜಾನೆ 6 ಗಂಟೆ ವರೆಗೆ ವಾಹನ ಸಂಚಾರ ನಿಷೇಧವಿದೆ. ಅಲ್ಲಿನ ವನ್ಯಜೀವಿಗಳ ರಕ್ಷಣೆ ಹಾಗೂ ಕಾಡಿನ ರಕ್ಷಣೆ ಹಿನ್ನೆಲೆಯಲ್ಲಿ ಈ ನಿಷೇಧವಿದ್ದರೂ ಮಾಫಿಯಾಗಳು ಬಂಡೀಪುರ ಅರಣ್ಯದ ನಡುವೆ ಎಲಿವೇಟೆಡ್ ರಸ್ತೆ ನಿರ್ಮಿಸಲು ಮುಂದಾಗಿವೆ. ರಾಷ್ಟ್ರೀಯ ಹೆದ್ದಾರಿ 212 ರಲ್ಲಿ ತಲಾ ಒಂದು ಕಿ.ಮೀ. ಉದ್ದದ 5 ಎಲಿವೇಟೆಡ್ ರಸ್ತೆ ನಿರ್ಮಿಸುವ ಪ್ರಯತ್ನ ಗಳನ್ನು ನಡೆಸಿವೆ. ಸುಮಾರು 450ರಿಂದ 500 ಕೋಟಿ ರೂ. ಅಂದಾಜಿನಲ್ಲಿ ಶೇ.50 ರಷ್ಟು ಹಣವನ್ನು ಕೇಂದ್ರ ಸರ್ಕಾರದ ಭೂ ಸಾರಿಗೆ ಇಲಾಖೆ ಹಾಗೂ ಉಳಿದ ಶೇ.50 ರಷ್ಟು ಹಣವನ್ನು ಕೇರಳ ಸರ್ಕಾರ ಹೂಡ ಲಿದೆ ಎಂದು ವರದಿಯಾಗಿದೆ. ಆದರೆ ಯಾವುದೇ ಕಾರಣಕ್ಕೂ ರಾತ್ರಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ಹೇಳಿದ್ದರೂ ಇಂತಹ ಪ್ರಯತ್ನ ಗಳು ಪರಿಸರ ಪ್ರೇಮಿಗಳಿಗೆ ನೋವು ತಂದಿದೆ ಎಂದು ಪೂರ್ಣಚಂದ್ರ ತೇಜಸ್ವಿ ಅವರ `ಮನುಷ್ಯನಿಗೆ ಪ್ರಕೃತಿಯ ಅವಶ್ಯಕತೆ ಇದೆ ವಿನಃ ಪ್ರಕೃತಿಗೆ ಮನುಷ್ಯನ ಅವಶ್ಯಕತೆ ಇಲ್ಲ’ ಎಂಬ ವಾಕ್ಯ ಇರುವ ಭಿತ್ತಿಪತ್ರ ಪ್ರದರ್ಶಿಸಿದರು. ಒಂದು ಮರ ಕಡಿದರೆ ಕಾಡು ಕಡಿದಂತೆ, ಕಾಡುಗಳಿಲ್ಲದ ಕಾಡು ಪ್ರಾಣಿಗಳಿಲ್ಲದ ಪರಿಸರವು ಸ್ಮಶಾನಕ್ಕಿಂತ ಭೀಕರವಾಗಿ ಕಾಡುತ್ತವೆ. ಕಾಡಿಗೆ ನಾಡಿನ ಹಂಗಿಲ್ಲ-ನಾಡಿಗೆ ಬೇಕು ಕಾಡ ಹಂಗು. ನಾವಿಲ್ಲದೇ ಕಾಡು ಇರಬಲ್ಲದು, ನಾವು ಇರಬಲ್ಲೆವೇ? ಎಂದು ವನ್ಯಜೀವಿಗಳೇ ಹೇಳುವ ರೀತಿಯಲ್ಲಿ ಭಿತ್ತಿಪತ್ರಗಳಿದ್ದವು.

ವನ್ಯಜೀವಿ ಹಾಗೂ ಸಸ್ಯ ಸಂರಕ್ಷಿಸುವ ಕಾಯ್ದೆ ಹಾಗೂ ಪರಿಸರ ಸಂರಕ್ಷಣೆ ಕಾಯ್ದೆ ಪ್ರಕಾರ ರಾಷ್ಟ್ರೀಯ ಉದ್ಯಾನವನ ಸಂರಕ್ಷಿತ ತಾಣಗಳ ಗಡಿಯಿಂದ ಹತ್ತು ಕಿ.ಮೀ.ದೂರದವರೆಗೆ ಯಾವುದೇ ಬೃಹತ್ ಕಟ್ಟಡಗಳನ್ನು ನಿರ್ಮಿಸಲು ಅನುವು ಮಾಡಿ ಕೊಡುವುದಿಲ್ಲ. ಹಾಗಿದ್ದಲ್ಲಿ ಹುಲಿ ಯೋಜನೆ ಅಡಿಯಲ್ಲಿ ಬರುವ ಬಂಡೀಪುರ ರಾಷ್ಟ್ರೀಯ ಉದ್ಯಾನದ ಒಳಗೆ 5 ಮೇಲ್ಸೇತುವೆಗಳನ್ನು ಕಟ್ಟಲು ಹೇಗೆ ಅನುವು ಮಾಡಿಕೊಡಲಾಗು ತ್ತದೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಕೇಂದ್ರ ಸರ್ಕಾರವು ನಮ್ಮ ರಾಜ್ಯದ ಹಿತಕ್ಕಾಗಿ ವನ್ಯಜೀವಿ, ಕಾಡು ಹಾಳಾಗುವ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು ಎಂದು

ಆಗ್ರಹಿಸಿದರು. ಮೇಲ್ಸೇತುವೆ ನಿರ್ಮಾಣದಿಂದ ಬಂಡಿಪುರದಲ್ಲಿರುವ ಸಸ್ಯ ಸಂಪತ್ತು ಹಾಳಾಗುವುದಲ್ಲದೆ, ಕಳ್ಳ ಬೇಟೆ ಹಾಗೂ ಇನ್ನಿತರ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಂತಾ ಗುತ್ತದೆ. ಹುಲಿ ಸಂರಕ್ಷಿತ ಪ್ರದೇಶವು ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್, ಕೊಳೆತ ತರಕಾರಿ ಗಳನ್ನು ಸುರಿಯುವ ಪ್ರದೇಶವಾಗುವ ಜೊತೆಗೆ ವನ್ಯಜೀವಿ ಸಂಕುಲಕ್ಕೂ ಹಾನಿಯಾಗು ತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ಕಾಡಿನೊಳಗೆ ಮೇಲ್ಸೇತುವೆ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುವ ಮನವಿ ಪತ್ರವನ್ನು ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ನೀಡಿದರು.

ಪ್ರತಿಭಟನೆಯಲ್ಲಿ ಮೈಸೂರು ಗ್ರಾಹಕರ ಪರಿಷತ್‍ನ ಮೇಜರ್ ಜನರಲ್ ಒಂಬತ್ಕೆರೆ, ಶೋಭನಾ, ಪರಿಸರವಾದಿಗಳಾದ ಶಿವಪ್ರಕಾಶ ಅಡ್ವಾಣೆ, ಗುರುಪ್ರಸಾದ್, ಭಾನು ಮೋಹನ್, ಭಾಗ್ಯಲಕ್ಷ್ಮಿ, ಸಂಧ್ಯಾ ದಿನೇಶ್, ಶಶಿಭೂಷಣ್, ಪ್ರಕೃತಿ ಬಾಲಚಂದರ್, ಚಂದ್ರಶೇಖರ್, ಶೈಲಜೇಶ್, ಕೇಶವಮೂರ್ತಿ, ಜನಾ ರ್ಧನ್ ಇನ್ನಿತರರು ಭಾಗವಹಿಸಿದ್ದರು.

Translate »