ಕಾಂಗ್ರೆಸ್ ಅತೃಪ್ತ ಶಾಸಕರು ಚೆನ್ನೈಗೆ, ಮತ್ತೆ ಕೆಲವರು ಮುಂಬೈಗೆ ಹೋದರಂತೆ!
ಮೈಸೂರು

ಕಾಂಗ್ರೆಸ್ ಅತೃಪ್ತ ಶಾಸಕರು ಚೆನ್ನೈಗೆ, ಮತ್ತೆ ಕೆಲವರು ಮುಂಬೈಗೆ ಹೋದರಂತೆ!

September 23, 2018

ಬೆಂಗಳೂರು: ಕಾಂಗ್ರೆಸ್‍ನ 8 ಅತೃಪ್ತ ಶಾಸಕರು ಮುಂಬೈಗೆ ತೆರಳಿ ದ್ದಾರೆ…ಮೂವರು ಶಾಸಕರು ಚೆನ್ನೈನತ್ತ ಪ್ರಯಾಣ ಬೆಳೆಸಿದ್ದು, ಅವರು ಅಲ್ಲಿಂದ ಮುಂಬೈಗೆ ತೆರಳಲಿದ್ದಾರೆ… ಕಾಂಗ್ರೆಸ್ ಶಾಸಕರ ಬಂಡಾಯದ ಬಗ್ಗೆ ಶೃಂಗೇರಿ ಯಲ್ಲಿ ಮುಖ್ಯಮಂತ್ರಿಗಳಿಗೆ ಗುಪ್ತಚರ ಇಲಾಖೆಯಿಂದ ಕ್ಷಣಕ್ಷಣದ ಮಾಹಿತಿ… ಇವೆಲ್ಲವೂ ಇಂದು ದಿನವಿಡೀ ಖಾಸಗಿ ವಾಹಿನಿಗಳಲ್ಲಿ ಹರಿದಾಡಿದ ಸುದ್ದಿಗಳ ಮಹಾಪೂರ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬ ಇಂದು ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ಮೃತ್ಯುಂಜಯ ಹಾಗೂ ಗಣಪತಿ ಹೋಮ ಏರ್ಪಡಿಸಿತ್ತು. ಅದರಲ್ಲಿ ಗೌಡರ ಕುಟುಂಬವರ್ಗದವರು ಭಾಗವಹಿಸಿದ್ದರು. ಆದರೆ ಆಪರೇಷನ್ ಕಮಲ ಮತ್ತು ಕಾಂಗ್ರೆಸ್ ಅತೃಪ್ತ ಶಾಸಕರ ಬಂಡಾಯದಿಂದ ಪಾರಾಗಿ ಸರ್ಕಾರ ಉಳಿಸಿಕೊಳ್ಳಲು ಗೌಡರ ಕುಟುಂಬ ಶೃಂಗೇರಿ ಶಾರದಾಂಬೆ ಮೊರೆ ಹೋಗಿದೆ ಎಂದು ವಾಹಿನಿಗಳು ಪ್ರಸಾರ ಮಾಡಿದವು.

ಕಾಂಗ್ರೆಸ್ ಶಾಸಕರಾದ ಡಾ.ಡಿ.ಸುಧಾ ಕರ್, ಎಂಟಿಬಿ ನಾಗರಾಜು ಹಾಗೂ ಪಕ್ಷೇತರ ಶಾಸಕ ನಾಗೇಶ್ ಅವರು ಕಾರಿನಲ್ಲಿ ಬೆಂಗ ಳೂರಿನಿಂದ ಹೊಸೂರು ಕಡೆಗೆ ಪ್ರಯಾಣ ಬೆಳೆಸಿದರು. ಸುದ್ದಿವಾಹಿನಿಯ ಒಂದು ವಾಹನ ಇವರ ಕಾರನ್ನು ಚೇಸ್ ಮಾಡಿತು. ಈ ಶಾಸಕರು ಚೆನ್ನೈಗೆ ತೆರಳುತ್ತಿದ್ದಾರೆ. ಅಲ್ಲಿಂದ ವಿಮಾನದಲ್ಲಿ ಅವರು ಮುಂಬೈಗೆ ತೆರಳಲಿದ್ದಾರೆ ಎಂದು ವಾಹಿನಿ ಪ್ರಸಾರ ಮಾಡಿತು. ಮಾರ್ಗ ಮಧ್ಯೆ ಈ ಶಾಸಕರು ಹೋಟೆಲ್‍ವೊಂದರಲ್ಲಿ ಉಪಹಾರ ಸೇವಿಸುತ್ತಿದ್ದುದ್ದನ್ನು ಕೂಡ ಖಾಸಗಿ ವಾಹಿನಿಗಳು ಪ್ರಸಾರ ಮಾಡಿ ಇವರು ಆಪರೇಷನ್ ಕಮಲಗೆ ಒಳಗಾಗಿ ಚೆನ್ನೈಗೆ ತೆರಳುತ್ತಿದ್ದಾರೆ ಎಂದು ಪ್ರಸಾರ ಮಾಡಿತು. ಅಲ್ಲದೆ ಬೆಳಗಾವಿ ಕಡೆಯಿಂದಲೂ ಕೆಲವು ಶಾಸಕರು ಮುಂಬೈಗೆ ತೆರಳಿದ್ದಾರೆ. ಮುಂಬೈನ ರೆಸಾರ್ಟ್‍ವೊಂದರಲ್ಲಿ ಕಾಂಗ್ರೆಸ್‍ನ 8 ಅತೃಪ್ತ ಶಾಸಕರು ಈಗಾಗಲೇ ವಾಸ್ತವ್ಯ ಹೂಡಿದ್ದಾರೆ. ಚೆನ್ನೈನತ್ತ ತೆರಳಿರುವ ಮೂವರು ಶಾಸಕರೂ ಮುಂಬೈನ ಅತೃಪ್ತ ಶಾಸಕರನ್ನು ಸೇರಿಕೊಳ್ಳಲಿದ್ದು, ಒಟ್ಟು 11 ಶಾಸಕರು ಆಪರೇಷನ್ ಕಮಲಗೆ ಒಳಗಾಗಿದ್ದಾರೆ ಎಂದು ವಾಹಿನಿಗಳು ಪ್ರಸಾರ ಮಾಡಿದವು.

ಶೃಂಗೇರಿಯಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗುಪ್ತಚರ ಇಲಾಖೆಯ ಸಂಪರ್ಕ ಹೊಂದಿದ್ದು, ಅತೃಪ್ತ ಶಾಸಕರ ಚಲನ-ವಲನದ ಮೇಲೆ ಗುಪ್ತಚರ ಇಲಾಖೆ ನಿಗಾ ವಹಿಸಿದ್ದು, ಕ್ಷಣಕ್ಷಣದ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ರವಾನಿಸುತ್ತಿದೆ. ಕಾಂಗ್ರೆಸ್‍ನ ಅತೃಪ್ತ ಶಾಸಕರು ಮುಂಬೈಗೆ ತೆರಳಲಿರುವ ಮಾಹಿತಿ ಇಂದು ಬೆಳಿಗ್ಗೆಯೇ ಮುಖ್ಯಮಂತ್ರಿಗಳಿಗೆ ಗುಪ್ತಚರ ಇಲಾಖೆ ಮೂಲಕ ತಿಳಿದಿದೆ ಎಂದು ವಾಹಿನಿಗಳು ಪ್ರಸಾರ ಮಾಡಿದವಾದರೂ, ಮುಂಬೈನಲ್ಲಿರುವ 8 ಶಾಸಕರು ಯಾರು ಎಂಬುದನ್ನು ವಾಹಿನಿಗಳು ಅಪ್ಪಿ-ತಪ್ಪಿಯೂ ಹೇಳಿಲ್ಲ.

ವಾಹಿನಿಗಳು ಈ ಸುದ್ದಿ ಪ್ರಸಾರ ಮಾಡುತ್ತಿದ್ದಂತೆಯೇ ಚೆನ್ನೈಗೆ ಪ್ರಯಾಣ ಬೆಳೆಸಿರುವ ಮೂವರು ಅತೃಪ್ತ ಶಾಸಕರು ಎನ್ನಲಾದವರ ಪೈಕಿ ಒಬ್ಬರಾದ ಡಾ.ಡಿ.ಸುಧಾಕರ್ ಅವರು, ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಯನ್ನು ಅಲ್ಲಗಳೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದರು.

Translate »