ಮೈಸೂರು,ಅ.31(ಎಂಟಿವೈ)- ಮೈಸೂರು ನಗರದ ಸೌಂದರ್ಯಕ್ಕೆ ಧಕ್ಕೆಯುಂಟು ಮಾಡುತ್ತಿರುವ ರಿಂಗ್ ರಸ್ತೆ ಸುತ್ತಮುತ್ತಲಿನ ವಾತಾವರಣ ಸುಧಾರಿಸಿ, ಸುಂದರಗೊಳಿ ಸಲು 4 ಗ್ರಾಮ ಪಂಚಾಯಿತಿಗಳನ್ನು ಮಹಾ ನಗರ ಪಾಲಿಕೆ ವ್ಯಾಪ್ತಿಗೆ ತರುವ ಮಹತ್ತರ ಯೋಜನೆಗೆ ನಗರದಾಚೆಗಿನ ಜೆಡಿಎಸ್ ಶಾಸಕ ಅಡ್ಡಿಪಡಿಸುತ್ತಿರುವುದು ತಿಳಿದು ಬಂದಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಪರೋಕ್ಷ ವಾಗಿ ಕೆ.ಆರ್.ನಗರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ವಿರುದ್ಧ ಕಿಡಿಕಾರಿದ್ದಾರೆ.
ಮೈಸೂರಲ್ಲಿ ಶನಿವಾರ ಪತ್ರಕರ್ತರೊಂ ದಿಗೆ ಮಾತನಾಡಿದ ಜಿಟಿಡಿ, ಮೈಸೂರು ಸಾಂಸ್ಕøತಿಕ ನಗರ ಎಂದು ಪ್ರಸಿದ್ಧಿಯಾಗಿದೆ. ಪ್ರಮುಖ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರಗಳನ್ನೂ ಒಳಗೊಂಡಿದೆ. ನಗರಕ್ಕೆ ಪ್ರತಿ ದಿನ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರು ತ್ತಿದ್ದಾರೆ. ಮೈಸೂರು ಪ್ರವೇಶಿಸುತ್ತಿದ್ದಂತೆ ಎದುರಾಗುವ ರಿಂಗ್ ರಸ್ತೆಯ ಸುತ್ತಮುತ್ತ ಕಸದ ರಾಶಿಯೇ ಕಾಣುತ್ತದೆ. ಇದು ಮೈಸೂರು ನಗರದ ಸೌಂದÀರ್ಯಕ್ಕೆ ಧÀಕ್ಕೆಯುಂಟು ಮಾಡುತ್ತಿದೆ. ಇದನ್ನು ಮನಗಂಡು ಮೈಸೂರು ನಗರಕ್ಕೆ ಹೊಂದಿಕೊಂಡಿರುವ ಚಾಮುಂಡಿಬೆಟ್ಟ, ಆಲನಹಳ್ಳಿ, ಶ್ರೀರಾಂ ಪುರ ಹಾಗೂ ಹಿನಕಲ್ ಗ್ರಾಪಂ ವ್ಯಾಪ್ತಿ ಪ್ರದೇಶಗಳನ್ನು ಪಾಲಿಕೆ ಆಡಳಿತಕ್ಕೆ ಸೇರಿಸ ಬೇಕೆಂದು ಶ್ರಮಿಸುತ್ತಿದ್ದೇನೆ ಎಂದರು.
ಉಂಡುವಾಡಿ ಯೋಜನೆ: ನಾನು ಅಭಿ ವೃದ್ಧಿ ವಿಚಾರದಲ್ಲಿ ಜಾತಿ ರಾಜಕಾರಣ ಮಾಡಲ್ಲ. ಮೈಸೂರು ನಗರದ ಸಮಗ್ರ ಅಭಿ ವೃದ್ಧಿಗೆ ಶ್ರಮಿಸುತ್ತಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಕಬಿನಿಯಿಂದ ಮೈಸೂ ರಿಗೆ ಕುಡಿಯುವ ನೀರಿನ ಪೂರೈಕೆಗೆ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿದ್ದೆ. ಉಂಡುವಾಡಿ ಯೋಜನೆ ಜಾರಿಗೆ ಕ್ರಮ ಕೈಗೊಂಡಿದ್ದೆ. 550 ಕೋಟಿ ರೂ.ಗಳ ಯೋಜನೆಯಲ್ಲಿ ಈವರೆಗೆ 330 ಕೋಟಿ ರೂ. ಬಿಡುಗಡೆಯಾಗಿದೆ. ಈ ಯೋಜನೆ ಯಿಂದ ಮೈಸೂರು ನಗರದ ಎಲ್ಲಾ ವಿಧಾನ ಸಭಾ ಕ್ಷೇತ್ರದೊಂದಿಗೆ ಚಾಮುಂಡೇಶ್ವರಿ ಕ್ಷೇತ್ರದ ಜನರಿಗೂ ಕುಡಿಯುವ ನೀರಿನ ಪೂರೈಕೆಯಾಗಲಿದೆ.ಇಂತಹ ಅಭಿವೃದ್ಧಿ ಯೋಜನೆ ಪರ ನಿಂತಿದ್ದೇನೆ ಎಂದು ಜಿಟಿಡಿ ಹೇಳಿದರು.
ಪಾಲಿಕೆ ಠರಾವು: ಗ್ರಾಪಂಗಳನ್ನು ಪಾಲಿಕೆ ವ್ಯಾಪ್ತಿಗೆ ತರಲು ಪಾಲಿಕೆ ವಿರೋಧ ವ್ಯಕ್ತಪಡಿಸುತ್ತಿದೆ. ಇದರ ಸಾಧಕ-ಬಾಧಕ ಮನವರಿಕೆ ಮಾಡಿಕೊಡಲು ನಾನೇ ಕೌನ್ಸಿಲ್ ಸಭೆಗೆ ಹೋಗಿದ್ದೆ. ಆದರೂ ಪಾಲಿಕೆ ಸ್ಪಂದಿಸಲಿಲ್ಲ. 2017ರಲ್ಲಿಯೇ ಈ ಗ್ರಾಪಂಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಲು ಪಾಲಿಕೆಯಲ್ಲಿಯೇ ಠರಾವು ಮಾಡಲಾಗಿದೆ. ಸರ್ಕಾರವೂ ಒಪ್ಪಿದೆ. ಆದರೆ ಈಗ ಪಾಲಿಕೆ ನಿರ್ಧಾರ ಬದಲಿಸಿದೆ. ಇದರ ಹಿಂದೆ ಜೆಡಿಎಸ್ ಶಾಸಕ ರೊಬ್ಬರ ಕೈವಾಡ ಇದೆ ಎಂದು ಗೊತ್ತಾಗಿದೆ ಎಂದು ನುಡಿದರು.