ಚಂದ್ರು ಹತ್ಯೆ: ತನಿಖೆ ಸಿಐಡಿಗೆ
ಮೈಸೂರು

ಚಂದ್ರು ಹತ್ಯೆ: ತನಿಖೆ ಸಿಐಡಿಗೆ

April 11, 2022

ಬೆಂಗಳೂರು,ಏ.೧೦-ಸಾಕಷ್ಟು ವಿವಾದಕ್ಕೆ ಕಾರಣವಾಗಿ ರುವ ಚಂದ್ರು ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಯಾರ ಹೇಳಿಕೆಯೂ ಮುಖ್ಯವಲ್ಲ, ಸತ್ಯ ಹೊರಬರಬೇಕು ಅಷ್ಟೇ. ಯಾರು ವಾಗ್ದಾಳಿ ಮಾಡ್ತಾರೋ, ಯಾರು ಹೇಳಿಕೆ ಕೊಡ್ತಾರೋ ಅದು ಮುಖ್ಯವಾಗುವುದಿಲ್ಲ. ಘಟನೆಯ ಸತ್ಯಾಂಶ ಜನರಿಗೆ ಗೊತ್ತಾಗಬೇಕಿದೆ. ಈ ಹಿನ್ನೆಲೆ ನಿನ್ನೆ ನಾನು ಪೊಲೀಸ್ ಕಮಿಷನರ್ ಮತ್ತು ಡಿಜಿಯವರ ಬಳಿ ಮಾತನಾಡಿದ್ದೇನೆ. ಈ ಪ್ರಕರಣವನ್ನು ಸಿಐಡಿಗೆ ಕೊಡ ಬೇಕೆಂದು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ಚಂದ್ರು ಹತ್ಯೆ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ಯಾಗಿ ಸತ್ಯ ಹೊರಗಡೆ ಬರಬೇಕು. ೩ನೇ ಪಾರ್ಟಿಯಿಂದಲೇ ತನಿಖೆಯಾಗಲಿ, ಒಟ್ಟಾರೆ ಸತ್ಯ ಹೊರಗಡೆ
ಬಂದರೆ ಸಾಕು. ಹೀಗಾಗಿ ಸಿಐಡಿ ತನಿಖೆಗೆ ಕೊಡಬೇಕೆಂದು ಹೇಳಿದ್ದೇನೆ. ಇಂದು ಬಹುತೇಕ ಕಮಿಷನರ್ ಅವರು ಡಿಜೆಗೆ ಪತ್ರ ಬರೆದು ಸಿಐಡಿಗೆ ವಹಿಸುತ್ತಾರೆ ಎಂದು ತಿಳಿಸಿದ್ದಾರೆ. ರಾಜ್ಯ ಪ್ರವಾಸ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ಮುಂಬರುವ ರಾಜ್ಯ ವಿಧಾನಸಭಾ ಚುನಾವಣಾ ಪೂರ್ವತಯಾರಿಗೆ ಬಿಜೆಪಿ ಸಕಲ ಸಿದ್ಧತೆ ಮಾಡಿ ಕೊಳ್ಳುತ್ತಿದೆ. ೩ ತಂಡದಲ್ಲಿ ರಾಜ್ಯ ಪ್ರವಾಸ ಮಾಡಲಾಗುತ್ತದೆ ಎಂದಿದ್ದಾರೆ.

ಬೂತ್ ಮತ್ತು ಜಿಲ್ಲಾ ಮಂಡಲ ಮಟ್ಟದಲ್ಲಿ ಪ್ರವಾಸ ನಡೆಯಲಿದ್ದು, ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ಮಾಡುತ್ತೇವೆ. ಎಲ್ಲರೂ ಎರಡೆರಡು ದಿನ ಮೂರು ವಿಭಾಗದಲ್ಲಿ ೩ ತಂಡದಲ್ಲಿ ಪ್ರವಾಸ ನಡೆಯಲಿದೆ. ಈ ಪ್ರವಾಸದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಸೇರಿದಂತೆ ಎಲ್ಲಾ ನಾಯಕರು ಇರುತ್ತಾರೆ ಎಂದು ಮಾಹಿತಿ ನೀಡಿದರು.

Translate »