ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷನಾಳೆ ಹಲವು ಜನಪರ ಯೋಜನೆಗಳ ಘೋಷಣೆ
News

ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷನಾಳೆ ಹಲವು ಜನಪರ ಯೋಜನೆಗಳ ಘೋಷಣೆ

July 27, 2022

ಬೆಂಗಳೂರು, ಜು.26(ಕೆಎಂಶಿ)- ಮುಂಬರುವ ವಿಧಾನಸಭಾ ಚುನಾವಣಾ ದೃಷ್ಟಿಯನ್ನಿಟ್ಟುಕೊಂಡು ಮತದಾರರನ್ನು ಸೆಳೆಯಲು ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೆಲವು ಜನಪರ ಯೋಜನೆಗಳಿಗೆ ಜುಲೈ 28 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಕ್ತಿ ನೀಡಲಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳ ಸಕ್ರಮದ ಆದೇಶ ಸೇರಿ ದಂತೆ ಎಂಟು ಹೊಸ ಯೋಜನೆ ಪ್ರಕಟ ಮಾಡುವು ದಲ್ಲದೆ, ಆದೇಶವನ್ನು ಅಂದೇ ಹೊರಡಿಸಲಿದ್ದಾರೆ.

ವಿಧಾನಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ಅಂದು ಬೆಳಗ್ಗೆ ನಡೆಯುವ ತಮ್ಮ ಒಂದು ವರ್ಷದ ಸಾಧನಾ ಸಮಾವೇಶದಲ್ಲಿ ನಗರಾಭಿವೃದ್ಧಿ, ಕಂದಾಯ, ಜಲ ಸಂಪನ್ಮೂಲ, ಶಿಕ್ಷಣ ಆರೋಗ್ಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಪಶುಸಂಗೋಪನಾ ಇಲಾಖೆಯ ವ್ಯಾಪ್ತಿಯಲ್ಲಿ ಬಡವರು ಮತ್ತು ಜನರಿಗೆ ಸ್ಪಂದಿಸುವ ಕಾರ್ಯ ಕ್ರಮಗಳನ್ನು ಪ್ರಕಟಿಸಲಿದ್ದಾರೆ. ಯೋಜನೆಗೆ ಸಾವಿರಾರು ಕೋಟಿ ರೂ. ತಗಲು ತ್ತಿದ್ದು, ಈ ಹಣವನ್ನು ಆಯಾ ಇಲಾಖೆಯಲ್ಲೇ ವೆಚ್ಚವಾಗದೇ ಉಳಿದಿರುವ ಸಂಪನ್ಮೂಲದಲ್ಲೇ ಭರಿಸುತ್ತಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗಿ ಎಂಟು ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಅದೇ ಪ್ರಮಾಣದ ಯೋಜನೆಗಳನ್ನು ಪ್ರಕಟ ಮಾಡುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮಕ್ಕೆ ಸಚಿವರು, ಶಾಸಕರು ಅಲ್ಲದೆ ಎಲ್ಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು, ಆಯ್ದ ಮಂದಿಗೆ ಅಷ್ಟೇ ಪ್ರವೇಶ.

ಕಳೆದ ಮಾರ್ಚ್ ತಿಂಗಳಲ್ಲಿ ಚೊಚ್ಚಲ ಬಜೆಟ್ ಮಂಡನೆ ಸಂದರ್ಭದಲ್ಲೂ ಮುಖ್ಯಮಂತ್ರಿಯವರು ಮುಂಬ ರುವ ವಿಧಾನಸಭಾ ಚುನಾವಣೆಯನ್ನು ಗಮನ ದಲ್ಲಿಟ್ಟುಕೊಂಡೇ ಯಾರಿಗೂ ಹೊರೆಯಾಗದಂತೆ ಕೆಲವು ಯೋಜನೆಗಳನ್ನು ಪ್ರಕಟಿಸಿದ್ದರು.

ಇದೀಗ ವರಿಷ್ಠರ ಸಲಹೆಯಂತೆ ಮತದಾರರನ್ನು ಗಮನದಲ್ಲಿಟ್ಟುಕೊಂಡೇ ಎಂಟು ಯೋಜನೆಗಳನ್ನು 28 ರಂದು ಪ್ರಕಟಿಸಲು ಮುಂದಾಗಿದ್ದಾರೆ. ಮುಂದಿನ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಸರ್ಕಾರ 2023-24ರ ರಾಜ್ಯ ಬಜೆಟ್ ಮಂಡಿಸುವುದು ಸಹ ಸಂಪ್ರದಾಯವಾದರೂ ವಿಧಾನ ಸಭಾ ಚುನಾವಣೆಗಳು ಹತ್ತಿರ ಬಂದ ಸಂದರ್ಭದಲ್ಲಿ ಸರ್ಕಾರ ಮಾಡುವ ಹೊಸ ಘೋಷಣೆಗಳ ಬಗ್ಗೆ ಜನ ಮುಂಚಿತವಾಗಿಯೇ ನಿರೀಕ್ಷೆ ಇಟ್ಟುಕೊಂಡಿ ರುತ್ತಾರೆ. ಆದರೆ ಜನ ನಿರೀಕ್ಷೆ ಮಾಡುವ ಮುನ್ನವೇ  ಸಾವಿರಾರು ಕೋಟಿ ರೂ. ವೆಚ್ಚ ಮಾಡುವ ಹೊಸ ಯೋಜನೆಗಳನ್ನು ಘೋಷಿಸಿದರೆ ಅದು ಜನರ ನೆನಪಿನಲ್ಲಿರುತ್ತದೆ ಎಂಬುದು ಮುಖ್ಯಮಂತ್ರಿಗಳ ಲೆಕ್ಕಾಚಾರ ಎಂದು ಸಮೀಪವರ್ತಿ ಮೂಲಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಇದು ಬಜೆಟ್ ಅಲ್ಲವಾದರೂ ತಾಂತ್ರಿಕವಾಗಿ ಬಜೆಟ್ ಸ್ವರೂಪವನ್ನು ಹೊಂದಿರಲಿದ್ದು,ಈ ಹಿನ್ನೆಲೆಯಲ್ಲಿ ಇದನ್ನು ಮಿನಿ ಬಜೆಟ್ ಎಂದು ಬಣ್ಣಿಸಲಾಗುತ್ತಿದೆ. ಯೋಜನೆ ಪ್ರಕಟಿಸಿದ ನಂತರ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ, ತಮ್ಮ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ ಘೋಷಣೆ ಉದ್ದೇಶಿಸಿದ್ದು, ಬಿಜೆಪಿ ವತಿಯಿಂದ ದೊಡ್ಡಬಳ್ಳಾಪುರದಲ್ಲಿ ಬೃಹತ್ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Translate »