ಬೆಂಗಳೂರು,ಅ.21(ಕೆಎಂಶಿ)-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಸುದ್ದಿ ಇದೀಗ ಭಾರೀ ಕೋಲಾ ಹಲ ಸೃಷ್ಟಿಸಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಮುಂದಿನ 3 ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸ್ಪಷ್ಟ ಪಡಿಸಿದ್ದಾರೆ. ಟ್ವೀಟ್ ಮೂಲಕ ನಾಯಕತ್ವದ ವಿರುದ್ಧ ಅಶಿಸ್ತು ಪ್ರದರ್ಶಿಸಿದರೆ, ಅಂತಹವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲ,
ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆಗೆ ಹೋಗಲಿದ್ದೇವೆ. ಪಕ್ಷ ಮತ್ತು ಸರ್ಕಾರದ ವಿರುದ್ಧ ಅಶಿಸ್ತಿನಿಂದ ನಡೆದುಕೊಂಡರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗು ತ್ತದೆ ಎಂದು ಎಚ್ಚರಿಸಿದ್ದಾರೆ. ನಳೀನ್‍ಕುಮಾರ್ ಎಚ್ಚರಿಕೆಗೆ ಸೊಪ್ಪು ಹಾಕದ ಯತ್ನಾಳ್ ಇಂದೂ ಕೂಡ ಯಡಿಯೂರಪ್ಪನವರ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯಾಧ್ಯಕ್ಷರು ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ ಬೆನ್ನಲ್ಲೇ ಯತ್ನಾಳ್ ಸರಣಿ ಟ್ವೀಟ್ ಮಾಡಿ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಯಾರ ಮನೆ ಬಾಗಿಲಿಗೆ ಹೋಗಿ, ಮಂತ್ರಿಗಾಗಿ ಅಂಗಲಾಚುವುದಿಲ್ಲ. ಅವರ ಕಾಲು ಹಿಡಿಯುವುದಿಲ್ಲ. ಅಧಿಕಾರ ತಾನಾಗಿಯೇ ನನ್ನ ಮನೆ ಬಾಗಿಲಿಗೆ ಬರುತ್ತದೆ ಎಂದಿದ್ದಾರೆ. ಉತ್ತರ ಕರ್ನಾಟಕ ಭಾಗದ ನಮ್ಮ ಪಕ್ಷದ ಶಾಸಕರೊ ಬ್ಬರು ಮುಂದಿನ ಸಿಎಂ ಎಂದು ಮತ್ತೆ ತಮ್ಮ ಟ್ವೀಟ್‍ನಲ್ಲಿ ಪುನರುಚ್ಛರಿಸಿದ್ದಾರೆ. ಯತ್ನಾಳ್ ಫೇಸ್‍ಬುಕ್‍ನಲ್ಲಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರ ವಿರುದ್ಧ ಕಿಡಿಕಾರಿದ್ದಾರೆ. ಅಪ್ಪನ ಹೆಸರಿನಿಂದ ರಾಜ್ಯಭಾರ ಮಾಡುವವರೇ ಉತ್ತರ ಕರ್ನಾಟಕ ದವರ ಬಗ್ಗೆ ಹಗುರವಾಗಿ ಮಾತನಾಡಿದರೆ ಜನ ಕ್ಷಮಿಸುವುದಿಲ್ಲ. ವಿಜಯೇಂದ್ರ ಒಬ್ಬನೇ ಉಪಚುನಾವಣೆ ಗೆಲ್ಲುವುದಾದರೆ, ನರೇಂದ್ರ ಮೋದಿ, ಅಮಿತ್ ಷಾ, ನಳೀನ್‍ಕುಮಾರ್ ಕಟೀಲ್ ಹಾಗೂ ರಾಷ್ಟ್ರೀಯ ಬಿಜೆಪಿಯ ಪದಾಧಿಕಾರಿಗಳ ಪಾತ್ರವೇನು? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳೇ ಉತ್ತರಿಸುತ್ತಿರಾ, ಹಗಲಿರುಳು ಪಕ್ಷಕ್ಕಾಗಿ ಶ್ರಮಿಸುತ್ತಿರುವವರ ನಿಷ್ಠಾವಂತ ಕಾರ್ಯಕರ್ತರ ಪಾಡೇನು. ಪುತ್ರ ವ್ಯಾಮೋಹದ ಹೇಳಿಕೆ ಕೊಡುವುದನ್ನು ಬಿಟ್ಟು, ನಮ್ಮ ಭಾಗದಲ್ಲಿ ಉಂಟಾಗಿರುವ ನೆರೆ ಸಂತ್ರಸ್ತರಿಗೆ ನೆರವಾಗಿ ಎಂದಿದ್ದಾರೆ. ಯತ್ನಾಳ್ ಹೇಳಿಕೆ ಬಗ್ಗೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡದೇ ನಿರಾಕರಿಸಿದ್ದರೆ, ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತ್ರ ಯೋಗ ಮತ್ತು ಯೋಗ್ಯತೆ ಇರುವವರು ಯಾರಾದರೂ ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿಯಾಗಬಹುದು. ಇದು ಉತ್ತರ ಕರ್ನಾಟಕಕ್ಕೆ ಸೀಮಿತ ಎನ್ನುವುದಿಲ್ಲ. ಅಖಿಲ ಕರ್ನಾಟಕದ ಪಕ್ಷದ ಯಾವುದೇ ಕಾರ್ಯಕರ್ತರು ಇಂತಹ ಹುದ್ದೆ ಅಲಂಕರಿಸಬಹುದು. ನಾಯಕತ್ವ ಬದಲಾವಣೆ ಕುರಿತಂತೆ ಯತ್ನಾಳ್ ಹೇಳಿಕೆಗೆ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ ಎಂದಿದ್ದಾರೆ. ಮತ್ತೊಂದೆಡೆ ಡಿಸಿಎಂ ಅಶ್ವತ್ಥ್ ನಾರಾಯಣ್, ನಾಯಕತ್ವದ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.