ಮಂಡ್ಯ, ಅ.21-ರಾಷ್ಟ್ರೀಯ ಹೆದ್ದಾರಿ 275ರ ಕಾಮಗಾರಿಗಾಗಿ ಭೂ ಸ್ವಾಧೀನವಾಗಿರುವ ಸರ್ಕಾರಿ ನೌಕರರ ಸಂಘದ ನಿವೇಶನಗಳ ಪರಿಹಾರದ ಮೊತ್ತ 11,32,42,375 ರೂ.ಗಳನ್ನು ಸಂಘದ ಮಾಜಿ ಅಧ್ಯಕ್ಷ ಮತ್ತು ಖಜಾಂಚಿ ತಮ್ಮ ಖಾತೆಗಳಿಗೆ ವರ್ಗಾ ವಣೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ಮಂಡ್ಯ ಶಾಖೆ ಅಧ್ಯಕ್ಷ ಎಸ್. ಶಂಭುಗೌಡ ಅವರು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂಘದ ಮಾಜಿ ಅಧ್ಯಕ್ಷ ಟಿ.ಹೆಚ್.ರಾಮಕೃಷ್ಣ, ಮಾಜಿ ಖಜಾಂಚಿ ಸಾಕಮ್ಮ, ರಾಷ್ಟ್ರೀಯ ಹೆದ್ದಾರಿ 275, ಬೆಂಗಳೂರು-ಮೈಸೂರು ವಿಭಾಗದ ಮಂಡ್ಯ ಶಾಖೆ ವಿಶೇಷ ಭೂ ಸ್ವಾಧೀನಾಧಿಕಾರಿ, ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯ ಸಿಬ್ಬಂದಿ ಹಾಗೂ ಇತರರು ಎಫ್‍ಐಆರ್‍ನ ಆರೋಪಿತರ ಪಟ್ಟಿಯಲ್ಲಿ ನಮೂದಿಸಲಾಗಿದೆ.
ವಿವರ: ಟಿ.ಹೆಚ್.ರಾಮಕೃಷ್ಣ ಅವರು ಸಂಘದ ಅಧ್ಯಕ್ಷರಾಗಿದ್ದಾಗ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಮಿತಿ ರಚಿಸಲಾಗಿತ್ತು. ಸಂಘದ ಅಧ್ಯಕ್ಷರೇ ಈ ಸಮಿತಿಯ ಅಧ್ಯಕ್ಷರಾಗಿಯೂ ಇದ್ದರು. ಆದರೆ ರಾಮ ಕೃಷ್ಣ ಅವರ ಅಧ್ಯಕ್ಷರ ಅವಧಿ ಮುಗಿದಿದ್ದರೂ ಕೂಡ ಗೃಹ ನಿರ್ಮಾಣ ಸಮಿತಿಯ ಅಧ್ಯಕ್ಷ ಸ್ಥಾನವನ್ನು ನೂತನ ಅಧ್ಯಕ್ಷರಿಗೆ ವರ್ಗಾಯಿಸದೇ ಮಂಡ್ಯ ಜಿಲ್ಲಾ ಧಿಕಾರಿಗಳ ಕಚೇರಿ ಬಳಿ ಇರುವ ಸರ್ಕಾರಿ ನೌಕರರ ಭವನದಿಂದ ಗೃಹ ನಿರ್ಮಾಣ ಸಮಿತಿಯ ಕಚೇರಿ ಯನ್ನು ಮಂಡ್ಯ ನೂರಡಿ ರಸ್ತೆಯಲ್ಲಿರುವ ಕೆ.ಕೆ. ಕಾಂಪ್ಲೆಕ್ಸ್‍ಗೆ ಸ್ಥಳಾಂತರಿಸಿಕೊಂಡು ನಿವೇಶನಕ್ಕಾಗಿ ಹಣ ಪಾವತಿಸಿರುವ ಸದಸ್ಯರಿಗೆ
ನಿವೇಶನ ಹಂಚದೆ ಅವ್ಯವಹಾರ ನಡೆಸಿದ್ದ ಹಿನ್ನೆಲೆಯಲ್ಲಿ 2019ರ ಡಿ.20ರಂದು ಗೃಹ ನಿರ್ಮಾಣ ಸಮಿತಿಯನ್ನು ವಿಸರ್ಜಿಸಲಾಯಿತು. ಸಮಿತಿಯ ವ್ಯವಹಾರ ಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಘದ ಅಧ್ಯಕ್ಷರಿಗೆ ನೀಡಬೇಕು ಎಂದು ಸಂಘದ ಸಭೆಯಲ್ಲಿ ನಿರ್ಣಯಿಸಲಾಗಿತ್ತು ಎಂದು ಶಂಭುಗೌಡ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಮಂಡ್ಯ ತಾಲೂಕು ಕೋಣನಹಳ್ಳಿ ತಿಟ್ಟು ಬಿಜಿಎಸ್ ಬಡಾವಣೆಯಲ್ಲಿರುವ ಗೃಹ ನಿರ್ಮಾಣ ಸಮಿತಿಗೆ ಸೇರಿದ ನಿವೇಶನಗಳನ್ನು ರಾಷ್ಟ್ರೀಯ ಹೆದ್ದಾರಿ-275ರ ನಿರ್ಮಾಣಕ್ಕಾಗಿ ಭೂ ಸ್ವಾಧೀನಪಡಿಸಲಾಗಿದೆ. ಈ ನಿವೇಶನಗಳ ಪರಿಹಾರದ ಹಣವನ್ನು ಗೃಹ ನಿರ್ಮಾಣ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಹಾಗೂ ನಿವೇಶನದ ಡೆವಲಪರ್‍ಗೆ ನೀಡಬಾರದು ಎಂದು ವಿಶೇಷ ಭೂ ಸ್ವಾಧೀನಾಧಿಕಾರಿಗಳಿಗೆ ಸರ್ಕಾರಿ ನೌಕರರ ಸಂಘದಿಂದ 2019ರ ಆಗಸ್ಟ್ 2 ಮತ್ತು ಸೆ.24ರಂದು ಲಿಖಿತವಾಗಿ ಮನವಿ ನೀಡಲಾಗಿತ್ತು. ನಂತರ ಗೃಹ ನಿರ್ಮಾಣ ಸಮಿತಿಗೆ ಸಂಬಂಧಪಟ್ಟಂತೆ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ದಲ್ಲಿ ನಡೆಯುತ್ತಿರುವ ವಿಚಾರಣೆ ಮುಗಿದು ತೀರ್ಪು ಹೊರ ಬರುವವರೆಗೆ ಪರಿಹಾರದ ಹಣವನ್ನು ಬಿಡುಗಡೆ ಮಾಡಬಾರದು ಎಂದು ರಾಷ್ಟ್ರೀಯ ಹೆದ್ದಾರಿ-275ರ ವಿಶೇಷ ಭೂ ಸ್ವಾಧೀನಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದರೂ ವಿಶೇಷ ಭೂ ಸ್ವಾಧೀನಾಧಿಕಾರಿಗಳು 2020ರ ಆಗಸ್ಟ್ 26ರಂದು ಸಂಘದ ಮಾಜಿ ಅಧ್ಯಕ್ಷ ರಾಮಕೃಷ್ಣ ಅವರ ವೈಯಕ್ತಿಕ ಖಾತೆಗೆ 3,13,64,682 ರೂ. ಮತ್ತು ಸೆ.5ರಂದು 8,22,77,693 ರೂ. ಸೇರಿದಂತೆ ಒಟ್ಟು 11,36,42,375 ರೂ. ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದಾರೆ. ಈ ಹಣವನ್ನು ಸಂಘದ ಮಾಜಿ ಅಧ್ಯಕ್ಷ ರಾಮಕೃಷ್ಣ ಮತ್ತು ಮಾಜಿ ಖಜಾಂಚಿ ಸಾಕಮ್ಮ ಅವರು ಸಂಘದ ಸದಸ್ಯರಿಗೆ ನೀಡದೆ ವಂಚಿಸಿದ್ದಾರೆ. ಇವರ ಈ ವಂಚನೆಗೆ ರಾಷ್ಟ್ರೀಯ ಹೆದ್ದಾರಿ-275ರ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಹಾಗೂ ಅವರ ಕಚೇರಿಯ ಸಿಬ್ಬಂದಿ ಒಳಸಂಚು ರೂಪಿಸಿ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ವಂಚನೆಗೆ ಸಹಕರಿಸಿದ್ದು, ಇವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಂಭುಗೌಡ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಇವರ ದೂರಿನನ್ವಯ ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಭಾರತೀಯ ದಂಡ ಸಂಹಿತೆ 120-ಬಿ, 406, 408, 409, 417, 420, 465 ಮತ್ತು 468ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.