ಪೋಷಕರ ವೇಗದ ಹೆಜ್ಜೆಗೆ ಮಕ್ಕಳೇ ಸ್ಫೂರ್ತಿ! ಪೋಷಕರಲ್ಲಿ ಕ್ರೀಡಾ ಉತ್ಸಾಹ… ಮಕ್ಕಳಲ್ಲಿ ಉಲ್ಲಾಸ…!!
ಮೈಸೂರು

ಪೋಷಕರ ವೇಗದ ಹೆಜ್ಜೆಗೆ ಮಕ್ಕಳೇ ಸ್ಫೂರ್ತಿ! ಪೋಷಕರಲ್ಲಿ ಕ್ರೀಡಾ ಉತ್ಸಾಹ… ಮಕ್ಕಳಲ್ಲಿ ಉಲ್ಲಾಸ…!!

February 28, 2022

ಮೈಸೂರು,ಫೆ.27(ಪಿಎಂ)- ಪೋಷಕರ ವೇಗದ ಹೆಜ್ಜೆಗೆ ಮಕ್ಕಳೇ ಸ್ಫೂರ್ತಿ! ಹೌದು, ಆ ಉದ್ಯಾನದಲ್ಲಿ ಪ್ರಾಕೃತಿಕ ಸೊಬಗಿನ ನಡುವೆ ಪೋಷಕರ ವೇಗದ ಹೆಜ್ಜೆಗೆ ಅವರ ಮಕ್ಕಳು ಚಪ್ಪಾಳೆ ಮೂಲಕ ಹುರಿದುಂಬಿಸಿ, ಗೆಲುವಿನ ವಿಶ್ವಾಸ ಮೂಡಿಸಿ ದರು. ನಡಿಗೆಯೊಂದಿಗೆ ಪೋಷಕರು ಕ್ರೀಡಾ ಸ್ಫೂರ್ತಿ ಮೆರೆಯುತ್ತಿದ್ದರೆ ಅವರ ಮಕ್ಕಳು ರೋಮಾಂಚನದಲ್ಲಿ ತೇಲಾಡಿದರು.

ಹೀಗೆ, ಮೈಸೂರಿನ ವಿಜಯನಗರದ ಶ್ರೀ ಯೋಗನರಸಿಂಹಸ್ವಾಮಿ ದೇವಸ್ಥಾನದ ಎದುರಿನ ಉದ್ಯಾನವನದಲ್ಲಿ ತಮ್ಮ ಮಕ್ಕಳ ಎದುರು ಪೋಷಕರು ಕ್ರೀಡಾ ಉತ್ಸಾಹ ಅನಾವರಣ ಮಾಡಿದರು. ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಭಾರತೀಯ ವಿದ್ಯಾಭವನ (ಬಿವಿಬಿ-ಭವನ್ಸ್ ಬೆಳ್ಳೂರು ಕಮಲಮ್ಮ ಸುಬ್ಬಣ್ಣ ವಿದ್ಯಾಭವನ ಶಾಲೆ) ತನ್ನ ಶಾಲಾ ಮಕ್ಕಳ ಪೋಷಕರಿಗೆ ಇಂತಹ ಅಪರೂಪದ ಕಾರ್ಯಕ್ರಮ ಏರ್ಪಡಿಸಿತ್ತು.

ಭಾನುವಾರ ನಡೆದ ಈ ವಾಕಥಾನ್ (ವೇಗದ ನಡಿಗೆ) ಸ್ಪರ್ಧೆಯಲ್ಲಿ 250ಕ್ಕೂ ಹೆಚ್ಚು ಪೋಷಕರು ಪಾಲ್ಗೊಂಡು ತಮ್ಮ ಮಕ್ಕಳೆದುರು ತಮ್ಮ ಕ್ರೀಡಾ ಕೌಶಲ್ಯ ಮೆರೆದರು. ಭಾರತೀಯ ವಿದ್ಯಾಭವನದ (ಬಿವಿಬಿ) ಉದಾತ್ತ ಸಂಸ್ಕøತಿಯ ಪ್ರತೀಕವಾಗಿ ಮತ್ತು ಕ್ರೀಡಾ ಚಟುವಟಿಕೆ ಒಳಗೊಂಡ ಜೀವನ ಶೈಲಿಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ವೇಗದ ನಡಿಗೆಯಲ್ಲಿ ಮಕ್ಕಳ ತಂದೆ, ತಾಯಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರೆ, ಮಕ್ಕಳ ಅಜ್ಜ-ಅಜ್ಜಿಯಂದಿರು ಕೆಲವೇ ಸಂಖ್ಯೆಯಲ್ಲಿ ಭಾಗವಹಿಸಿದ್ದರೂ ತಮ್ಮ ಇಳಿ ವಯಸ್ಸಿನ ಭಾವ ತೊರೆದು, ಉಲ್ಲಾಸದ ಹೆಜ್ಜೆ ಹಾಕಿ, ಮೊಮ್ಮಕ್ಕಳು ಹುಬ್ಬೇರಿಸುವಂತೆ ಮಾಡಿದರು.

ಪೋಷಕರಲ್ಲಿ ಕ್ರೀಡಾ ಉತ್ಸಾಹ ಹೊರ ಹೊಮ್ಮುತ್ತಿದ್ದರೆ, ಅವರ ಮಕ್ಕಳಲ್ಲಿ ಉಲ್ಲಾಸ ಮನೆ ಮಾಡಿತ್ತು. ಉದ್ಯಾನವನದಲ್ಲಿರುವ ವಾಕಿಂಗ್ ಪಾತ್‍ನ ಒಂದು ಸುತ್ತಳತೆಯ ಒಂದು ಕಿಲೋಮೀಟರ್‍ವರೆಗೆ ವೇಗದ ನಡಿಗೆಗೆ ಅಂತರ ನಿಗದಿ ಮಾಡಲಾಗಿತ್ತು. ಪ್ರತಿನಿತ್ಯ ತಮ್ಮ ಉದ್ಯೋಗದ ಅನುಸಾರ ತಮ್ಮದೇ ಒತ್ತಡ ದಲ್ಲಿ ಮುಳುಗಿದ್ದ ಪೋಷಕರು ತಮ್ಮ ಮಕ್ಕಳ ಸಮ್ಮುಖದಲ್ಲೇ ನವಚೈತನ್ಯದಲ್ಲಿ ಹೆಜ್ಜೆ ಹಾಕುವ ಮೂಲಕ ಹೊಸ ಅನುಭವ ಪಡೆದರು.

ಅಮ್ಮ-ಅಪ್ಪನ ಅಪರೂಪದ ನಡಿಗೆಗೆ ಉತ್ತೇಜಿಸುವ ಚಪ್ಪಾಳೆಯೊಂದಿಗೆ ಮಕ್ಕಳು ಅವರಲ್ಲಿ ಗೆಲುವಿನ ವಿಶ್ವಾಸದಲ್ಲಿ ಮುನ್ನುಗ್ಗು ವಂತೆ ಮಾಡುತ್ತಿದ್ದ ಸನ್ನಿವೇಶ ಕಂಡು ಬಂದಿತು. ಅದೆಷ್ಟೋ ಗೃಹಿಣಿಯರು, ಉದ್ಯೋಗಸ್ಥ ಮಹಿಳೆಯರು ತಮ್ಮ ಮಕ್ಕಳೆದುರು ಕ್ರೀಡಾ ಪಟುಗಳಂತೆ ಗೆಲುವಿನ ಭರವಸೆಯೊಂದಿಗೆ ವೇಗದ ಹೆಜ್ಜೆ ಹಾಕಿದರು. ಆ ಮೂಲಕ ತಮ್ಮ ನಿತ್ಯದ ಜಂಜಾಟ ಮರೆತು, ಕ್ರೀಡೆಯ ರೋಚಕ ಅನುಭವ ಪಡೆದರು. ಅಂತೆಯೇ ಮಕ್ಕಳ ತಂದೆ ಯಂದಿರು ಇಂದು ವೇಗದ ನಡಿಗೆಯಲ್ಲಿ ಭಾಗವಹಿಸಿ, ತಮ್ಮ ನಿತ್ಯದ ಉದ್ಯೋಗದ ಒತ್ತಡ ಮರೆತು ಸಂಭ್ರಮಿಸಿದರು.

ಎಲ್ಲಾ ವಿಭಾಗಗಳಿಗೂ ಒಂದು ಕಿಲೋ ಮೀಟರ್ ಅಂತರದ ನಡಿಗೆ ನಿಗದಿ ಮಾಡ ಲಾಗಿತ್ತು. ಮಹಿಳಾ ವಿಭಾಗದಲ್ಲಿ 25ರಿಂದ 35 ವರ್ಷ ವಯೋಮಾನ, 36ರಿಂದ 46 ವರ್ಷ ವಯೋಮಾನ ಹಾಗೂ 46 ವರ್ಷ ಹಾಗೂ ಅದಕ್ಕೂ ಮೇಲ್ಟಟ್ಟವರ ಗುಂಪಿನಲ್ಲಿ ಸ್ಪರ್ಧೆ ನಡೆಯಿತು. 46ರಿಂದ 55 ವರ್ಷ, 56ರಿಂದ 65 ವರ್ಷ ಮತ್ತು 66 ವರ್ಷ ಮೇಲ್ಟಟ್ಟ ಗುಂಪುಗಳಲ್ಲೂ ಸ್ಪರ್ಧೆ ನಡೆಸಲು ಉದ್ದೇಶಿಸಿತ್ತಾದರೂ ಸ್ಪರ್ಧಿಗಳಿಲ್ಲದ ಕಾರಣ ಈ ಗುಂಪುಗಳನ್ನು ಕೈಬಿಡಲಾಯಿತು.
ಅಂತೆಯೇ ಪುರುಷರ ವಿಭಾಗದಲ್ಲಿ 30ರಿಂದ 40 ವರ್ಷ ಮತ್ತು 41 ವರ್ಷ ಮೇಲ್ಪಟ್ಟವರ ಗುಂಪಿನಲ್ಲಿ ಸ್ಪರ್ಧೆಗಳು ನಡೆದವು. 41ರಿಂದ 50 ವರ್ಷ, 51ರಿಂದ 60 ವರ್ಷ, 61ರಿಂದ 70 ವರ್ಷ ಹಾಗೂ 70 ವರ್ಷ ಮೇಲ್ಪಟ್ಟವರ ಗುಂಪುಗಳನ್ನು ಸ್ಪರ್ಧಾಳುಗಳು ಇಲ್ಲದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಯಿತು. ಶಾಲೆಯ ಎನ್‍ಸಿಸಿ ವಿದ್ಯಾರ್ಥಿಗಳು ಮಾರ್ಗದುದ್ದಕ್ಕೂ ಸ್ಪರ್ಧಾಳುಗಳ ಮೇಲ್ವಿಚಾರಣೆ ನಡೆಸಿ, ವಾಕಥಾನ್ ಯಶಸ್ಸಿಗೆ ಸಹಕರಿಸಿದರು.

ಎಲ್ಲಾ ಗುಂಪುಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ಆಯ್ಕೆ ನಡೆ ಯಲಿದ್ದು, ಆಯ್ಕೆಯಾದವರಿಗೆ ಕ್ರಮವಾಗಿ 3 ಸಾವಿರ ರೂ., 2 ಸಾವಿರ ರೂ. ಮತ್ತು 1 ಸಾವಿರ ರೂ. ನಗದು ಬಹಮಾನ ದೊರೆ ಯಲಿದೆ. ಫೆ.28ರಂದು ವಿಜೇತರ ಪಟ್ಟಿ ಪ್ರಕಟಗೊಳ್ಳಲಿದ್ದು, ಮಾ.19ರಂದು ಬಹು ಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಚಾಲನೆ: ಶಾಸಕ ಎಲ್.ನಾಗೇಂದ್ರ ವಾಕಥಾನ್‍ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ತಮ್ಮ ಮಕ್ಕಳೆ ದುರು ಪೋಷಕರು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುತ್ತಿರುವುದು ನಿಜಕ್ಕೂ ವಿಶೇಷ. ಇಂತಹ ಅವಕಾಶ ಕಲ್ಪಿಸಿರುವ ಭಾರತೀಯ ವಿದ್ಯಾಭವನಕ್ಕೆ ಅಭಿನಂದಿಸುವುದಾಗಿ ತಿಳಿಸಿದರು.
ಮಕ್ಕಳಾಗಲಿ ಅಥವಾ ಪೋಷಕರಾಗಲಿ ಉತ್ತಮ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆ ಯಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ. ಶಾಲಾ ಕ್ರೀಡಾ ಚಟುವಟಿಕೆಯಲ್ಲಿ ಮಕ್ಕಳಿಗೆ ಮಾತ್ರವಲ್ಲದೆ, ಮಕ್ಕಳ ಪೋಷಕರಿಗೂ ವೇದಿಕೆ ಕಲ್ಪಿಸಿರುವುದು ಅಪರೂಪ ದೊಂದಿಗೆ ಅನುಕರಣೀಯ ಎಂದರು.

ಪಲ್ಸ್ ಪೋಲಿಯೋ ಹನಿ: ಇದೇ ಉದ್ಯಾನ ವನದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಇದಕ್ಕೆ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿದರು. ಶಾಲೆಯ ಐದು ವರ್ಷ ದೊಳಗಿನ ಮಕ್ಕಳಿಗೆ ಇಲ್ಲಿಯೇ ಪಲ್ಸ್ ಪೋಲಿಯೋ ಲಸಿಕೆ ಕೊಡಿಸಲು ಅನುಕೂಲ ಕಲ್ಪಿಸಲಾಗಿತ್ತು. ಪಾಲಿಕೆ ಸದಸ್ಯ ಎಂ. ಯು.ಸುಬ್ಬಯ್ಯ, ಶಾಲೆಯ ಪ್ರಾಂಶುಪಾಲರಾದ ವಿಜಯ ನರಸಿಂಹಂ, ಭಾರತೀಯ ವಿದ್ಯಾಭವನ ಮೈಸೂರು ಗೌರವ ಕಾರ್ಯ ದರ್ಶಿ ಪಿ.ಎಸ್.ಗಣಪತಿ, ಖಜಾಂಚಿ ಎ.ಟಿ. ಭಾಷ್ಯಂ, ಆಡಳಿತಾಧಿಕಾರಿ ಸುಧೀಂದ್ರ, ಸದಸ್ಯ ಹರೀಶ್ ಮತ್ತಿತರರು ಹಾಜರಿದ್ದರು.

Translate »