ಭಾರತಕ್ಕೆ ಪಾಕಿಸ್ತಾನಕ್ಕಿಂತ ಚೀನಾ ದೊಡ್ಡ ಶತ್ರು
ಮೈಸೂರು

ಭಾರತಕ್ಕೆ ಪಾಕಿಸ್ತಾನಕ್ಕಿಂತ ಚೀನಾ ದೊಡ್ಡ ಶತ್ರು

July 1, 2018
  • ಸ್ವದೇಶಿ ಜಾಗರಣ ಮಂಚ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಕಶ್ಮೀರಿ ಲಾಲ್ ಜೀ ಅಭಿಮತ
  • ಚೀನಾದ ಉತ್ಪನ್ನಗಳು ಅಧಿಕ ಪ್ರಮಾಣದಲ್ಲಿ ಭಾರತಕ್ಕೆ ರಫ್ತಾಗುತ್ತಿವೆ

ಮೈಸೂರು: ಪಾಕಿಸ್ತಾನಕ್ಕಿಂತ ದೊಡ್ಡ ಶತ್ರು ಚೀನಾ. ಇದು ತಾನು ವರ್ಷಕ್ಕೆ 64 ಬಿಲಿಯನ್ ಡಾಲರ್‍ನಷ್ಟು ವಸ್ತುಗಳನ್ನು ಭಾರತಕ್ಕೆ ರಫ್ತು ಮಾಡುತ್ತಿದೆಯೇ ಹೊರತು ಭಾರತದಿಂದ ಹೆಚ್ಚು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿಲ್ಲ. ಹಾಗಾಗಿ ಅವರಿಗೆ ಕೊಡಬೇಕಾದ ಹಣ ಹೆಚ್ಚಾಗುತ್ತಿದೆ ಎಂದು ಸ್ವದೇಶಿ ಜಾಗರಣ ಮಂಚ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಕಶ್ಮೀರಿ ಲಾಲ್ ಜೀ ಅಭಿಪ್ರಾಯಪಟ್ಟರು.

ಲಕ್ಷ್ಮೀಪುರಂನ ಗೋಪಾಲಸ್ವಾಮಿ ಶಿಶುವಿಹಾರ ಪಿಯು ಕಾಲೇಜಿನ ಸಭಾಂಗಣದಲ್ಲಿ ಸ್ವದೇಶಿ ಜಾಗರಣ ಮಂಚ್ ಮೈಸೂರು ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ `ಪ್ರಸ್ತುತ ಆರ್ಥಿಕ ಪರಿಸ್ಥಿತಿ ಹಾಗೂ ಸ್ವದೇಶಿ ಪರಿಹಾರ ಮಾರ್ಗ’ ಕುರಿತು ಮಾತನಾಡಿದ ಅವರು, ಭಾರತವು 130 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ಅದರಲ್ಲಿ ಸುಮಾರು 50 ಕೋಟಿ ಯುವಕರಿದ್ದಾರೆ. ಚೀನಾಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿದ್ದು, ಪ್ರಯತ್ನಿಸಿದರೆ ನಾವು ಉತ್ತಮ ವಸ್ತುಗಳನ್ನು ತಯಾರಿಸಬಹುದು. ಸ್ವದೇಶಿ ವಸ್ತುಗಳನ್ನು ಕೊಂಡರೆ ನಮ್ಮ ದೇಶದವರಿಗೆ ಉದ್ಯೋಗ ಸಿಗುತ್ತದೆ ಎಂದು ಹೇಳಿದರು.

ಭಾರತದ 8 ಜನರ ಬಳಿ ದೇಶದ ಅರ್ಧಕ್ಕೂ ಹೆಚ್ಚು ಸಂಪತ್ತು ಸಂಗ್ರಹವಾಗಿದೆ. ಆದರೂ ಸ್ವದೇಶಿ ವಸ್ತುಗಳನ್ನು ಕೊಂಡುಕೊಳ್ಳುವ ಮೂಲಕ ನಮ್ಮವರಿಗೆ ಲಾಭ ತಂದುಕೊಡುವುದು ಒಳ್ಳೆಯದು. ಏಕೆಂದರೆ, ಲಾಭದ ಹಣ ನಮ್ಮ ದೇಶದಲ್ಲೇ ಇರುತ್ತದೆ. ಹಾಗಾಗಿ ಎಲ್ಲರೂ ವಿದೇಶಿ ವಸ್ತುಗಳನ್ನು ತ್ಯಜಿಸಿ, ಸ್ವದೇಶಿ ವಸ್ತುಗಳನ್ನೇ ಬಳಸಬೇಕು. ಭಾರತದಲ್ಲಿ ಶೇ.3ರಷ್ಟು ಮಾತ್ರ ಸರ್ಕಾರಿ ಉದ್ಯೋಗದಲ್ಲಿದ್ದು, ಅಷ್ಟೇ ಮಂದಿ ಕೆಲಸಕ್ಕಾಗಿ ಹೊರ ದೇಶಗಳಿಗೆ ಹೋಗುತ್ತಿದ್ದಾರೆ. ಶೇ.45ರಷ್ಟು ಮಂದಿ ಕೃಷಿಯಲ್ಲಿ ತೊಡಗಿಕೊಂಡರೆ, ಶೇ.40ರಷ್ಟು ಮಂದಿ ಸಣ್ಣಪುಟ್ಟ ಉದ್ಯೋಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಸ್ವದೇಶಿ ಮೊಬೈಲ್ ಮೈಕ್ರೋಮ್ಯಾಕ್ಸ್ 8 ಸಾವಿರವಿದ್ದರೆ, ಅದೇ ಫೀಚರ್ ಇರುವ ಐಫೋನ್ 40 ಸಾವಿರ ರೂ. ಇರಲಿದೆ. ಹಾಗೆಯೇ ನಾನು ವಿದೇಶಿ ಬಟ್ಟೆ ಧರಿಸಿದ್ದರೆ ವರ್ಷಕ್ಕೆ 15 ಸಾವಿರ ರೂ. ಖರ್ಚುಮಾಡಬೇಕಿತ್ತು. ಆದರೆ, ಸ್ವದೇಶಿ ಬಟ್ಟೆ ಖರೀದಿಸುವುದರಿಂದ 5 ಸಾವಿರ ರೂ. ಖರ್ಚು ಮಾಡುತ್ತೇನೆ. ಹಾಗಾಗಿ ಸ್ವದೇಶಿ ವಸ್ತುಗಳನ್ನೇ ಉಪಯೋಗಿಸಬೇಕು. ಆ ಮೂಲಕ ವಿದೇಶಿ ವಸ್ತುಗಳನ್ನು ದಿಕ್ಕರಿಸಬೇಕು ಎಂದ ಅವರು, ಪದವಿ ಪಡೆದ 100 ಜನರಲ್ಲಿ 7 ಮಂದಿ ಮಾತ್ರ ಉದ್ಯೋಗಿಗಳು ಎಂದು ಹೇಳುತ್ತಿದ್ದಾರೆ. ಹಾಗಾಗಿ ಸ್ವ-ಉದ್ಯೋಗ ಮಾಡುವುದು ಒಳ್ಳೆಯದು ಎಂದರು.

ನಾನು ಒಮ್ಮೆ 12 ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಮಾಡುವ ಯುವಕನೊಬ್ಬನನ್ನು ನಿನಗೆ ಎಷ್ಟು ಆದಾಯ ಬರುತ್ತದೆ ಎಂದು ಕೇಳಿದಾಗ, ಸರ್ಕಾರಿ ಅಧಿಕಾರಿಗಳಲ್ಲಿ ಅತೀ ಹೆಚ್ಚು ಸಂಬಳ ತೆಗೆದುಕೊಳ್ಳುವವರಿಗಿಂತ ಹೆಚ್ಚು ಆದಾಯ ಬರುತ್ತದೆ ಎಂದು ಹೇಳಿದ. ಹಾಗೆಯೇ ಬಿಟಿಡಬ್ಲ್ಯು ಕಂಪೆನಿಯೊಂದು 45 ಸಾವಿರ ಮಂದಿಗೆ ಉದ್ಯೋಗ ನೀಡಿದ್ದು, ಉತ್ತಮ ವಿದ್ಯುತ್ ಉಪಕರಣಗಳನ್ನು ತಯಾರಿಸುತ್ತಿದೆ. ಹಾಗಾಗಿ ನಮ್ಮ ದೇಶದ ಯುವಕರು ಶ್ರಮಪಟ್ಟು ದುಡಿದರೆ ಚೀನಾಕ್ಕಿಂತ ಉತ್ತಮ ವಸ್ತುಗಳನ್ನು ತಯಾರಿಸಬಹುದು. ಆ ಯೋಗ್ಯತೆ ನಮಗಿದೆ ಆದರೆ, ಸ್ವಂತ ಉದ್ಯಮ ಆರಂಭಿಸಿ, ನಿರ್ವಹಿಸುವ ಆತ್ಮವಿಶ್ವಾಸವಿಲ್ಲ. ಅದನ್ನು ತಂದುಕೊಳ್ಳಬೇಕು ಎಂದರು.

ಭಾರತೀಯರು ಉಡ್‍ಲ್ಯಾಂಡ್, ಕಾರ್ಬನ್ ಮೊಬೈಲ್ ಸೇರಿದಂತೆ ಎಷ್ಟೋ ವಿದೇಶಿ ಕಂಪೆನಿಗಳನ್ನು ಭಾರತೀಯರು ತೆಗೆದುಕೊಂಡಿರುವುದರಿಂದ ವಸ್ತುಗಳನ್ನು ಕೊಳ್ಳುವಾಗ ಮೇಡ್ ಇನ್ ಇಂಡಿಯಾ ಎಂದು ನೋಡದೆ ಮೇಡ್ ಬೈ ಇಂಡಿಯನ್ ಎಂದು ನಮೂದಿಸಿರುವುದನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಾರದಾವಿಲಾಸ ಶಿಕ್ಷಣ ಸಂಸ್ಥೆಯ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಡೀನ್ ಪ್ರೊ.ಸತ್ಯನಾರಾಯಣ, ಸ್ವದೇಶಿ ಜಾಗರಣ ಮಂಚ್‍ನ ರಾಜ್ಯ ಸಂಯೋಜಕ ಎನ್.ಆರ್.ಮಂಜುನಾಥ್, ನಗರ-ಜಿಲ್ಲಾ ಸಂಯೋಜಕ ಜಿ.ಆರ್.ಶ್ರೀವತ್ಸ ಉಪಸ್ಥಿತರಿದ್ದರು.

Translate »