ಬೆಂಬಲ ಬೆಲೆ ಯೋಜನೆಯಡಿ  ಭತ್ತ ಖರೀದಿಗೆ ಕ್ರಮ: ಡಿಸಿ
ಮೈಸೂರು

ಬೆಂಬಲ ಬೆಲೆ ಯೋಜನೆಯಡಿ  ಭತ್ತ ಖರೀದಿಗೆ ಕ್ರಮ: ಡಿಸಿ

July 1, 2018

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2018ರ ಜುಲೈನಿಂದ ಹಿಂಗಾರು ಬೆಳೆಯ ಭತ್ತ ಖರೀದಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ವಿವಿಧ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 2017-18ನೇ ಸಾಲಿನ ಹಿಂಗಾರು(ರಬಿ) ಋತುವಿನ ಕನಿಷ್ಠ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಯನ್ನು ಜುಲೈ ಮಾಹೆಯಿಂದ ಪ್ರಾರಂಭಿಸಿ 31-08-2018ಕ್ಕೆ ಮುಕ್ತಾಯಗೊಳಿಸಲಾಗುವುದು. ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ಖರೀದಿ ಏಜೆನ್ಸಿಯಾಗಿರುತ್ತದೆ. ಸಣ್ಣ ಮತ್ತು ಅತಿಸಣ್ಣ ರೈತರಿಂದ ಎಫ್‍ಎಕ್ಯೂ ಗುಣಮಟ್ಟದ ಭತ್ತವನ್ನು ಖರೀದಿಸಲಾಗುವುದು.

ಮೈಸೂರು ಜಿಲ್ಲೆಯಲ್ಲಿ 7867 ಹೆಕ್ಟೇರ್‍ನಲ್ಲಿ 393350 ಕ್ವಿಂಟಾಲ್ ಭತ್ತ ಉತ್ಪಾದಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಈ ಅಂದಾಜಿನ ಪ್ರಕಾರ ಖರೀದಿ ಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು.ಜುಲೈ 2 ರಿಂದ ಖರೀದಿಗೆ ನೋಂದಣಿ ಪ್ರಾರಂಭಿಸಲಾಗುತ್ತಿದೆ. ಖರೀದಿ ಕೇಂದ್ರದಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಸರು ನೋಂದಾಯಿಸಿಕೊಳ್ಳುವ ಸಂದರ್ಭದಲ್ಲಿ ಮಾರಾಟ ಮಾಡುವ ಭತ್ತದ ಮಾದರಿ ನೀಡಿ ಗುಣಮಟ್ಟವನ್ನು ದೃಢೀಕರಿಸಿಕೊಂಡ ನಂತರ ಉತ್ಪನ್ನವನ್ನು ಮಾರಾಟಕ್ಕೆ ತರುವಂತೆ ರೈತರಿಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳು ತಿಳಿಸಿದರು.

ಭತ್ತದ ಗುಣಮಟ್ಟದ ತೇವಾಂಶ ಶೇ. 17 ಗರಿಷ್ಠ ಮಿತಿಯೊಳಗಿರಬೇಕು. ಇದಕ್ಕಿಂತ ಹೆಚ್ಚಿನ ತೇವಾಂಶವಿದ್ದಲ್ಲಿ ಭತ್ತವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಮಾರಾಟದ ಸಮಯದಲ್ಲಿ ಫಸಲು ಪಹಣಿ ಯನ್ನು ಸಂಬಂಧಪಟ್ಟ ತಹಶೀಲ್ದಾರಿಂದ ದೃಢೀಕರಿಸಿ ಸಲ್ಲಿಸಬೇಕು. 50 ಕೆ.ಜಿ. ತೂಕದ ಒಂದು ಬಾರಿ ಉಪಯೋಗಿಸಲಾದ ಚೀಲವನ್ನು ಪ್ರತಿ ಚೀಲಕ್ಕೆ ರೂ. 12/- ಪಾವತಿಸಿ ಖರೀದಿಸಬೇಕು ಎಂದರು.

ಮೈಸೂರು ತಾಲೂಕಿನ ಬಂಡೀಪಾಳ್ಯದ ಎಪಿಎಂಸಿ, ನಂಜನಗೂಡಿನ ಎಪಿಎಂಸಿ ಯಾರ್ಡ್, ಟಿ.ನರಸೀಪುರದ ಎಪಿಎಂಸಿ ಯಾರ್ಡ್, ಬನ್ನೂರಿನ ಎಪಿಎಂಸಿ ಯಾರ್ಡ್, ಕೆ.ಆರ್.ನಗರದ ಎಪಿಎಂಸಿ ಯಾರ್ಡ್, ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಹಾಗೂ ಸರಗೂರಿನ ಎಪಿಎಂಸಿ ಯಾರ್ಡ್‍ನಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು. ಪ್ರತಿ ಕ್ವಿಂಟಾಲ್ 1,550/- ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲಾಗುವುದು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಿರಿಯ ಉಪನಿರ್ದೇಶಕ ಡಾ. ಕಾ. ರಾಮೇಶ್ವರಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಮಹೇಶ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪನಿರ್ದೇಶಕ ನಂಜುಂಡಸ್ವಾಮಿ, ಕೆಎಎಸ್ ಪ್ರೊಬೆಷನರಿ ಅಧಿಕಾರಿ ರಾಜು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Translate »