ವಿಹೆಚ್‍ಪಿ ಮುಖಂಡ ಮುರಳಿಧರ್ ಗೆ ನುಡಿನಮನ
ಮೈಸೂರು

ವಿಹೆಚ್‍ಪಿ ಮುಖಂಡ ಮುರಳಿಧರ್ ಗೆ ನುಡಿನಮನ

July 1, 2018

ಮೈಸೂರು: ಇತ್ತೀಚೆಗೆ ನಿಧನರಾದ ವಿಹೆಚ್‍ಪಿ ಮುಖಂಡರಾದ ಜಿ.ಮುರುಳಿಧರ್ ಅವರು ಸಂಘದ ಸಕ್ರಿಯ ಕಾರ್ಯಕರ್ತರಾಗಿ, ಹಲವು ವರ್ಷಗಳಿಂದ ಸಂಘದ ಬೆಳವಣಿಗೆಗೆ ಶ್ರಮಿಸಿದ್ದರು ಎಂದು ದಕ್ಷಿಣ ಪ್ರಾಂತ ಸಂಘ ಚಾಲಕ ಮಾ.ವೆಂಕಟರಾವ್ ತಿಳಿಸಿದರು.

ಜೆಎಲ್‍ಬಿ ರಸ್ತೆಯ ಮಾಧವ ಕೃಪಾ ಆವರಣದಲ್ಲಿ ವಿಹೆಚ್‍ಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಇತ್ತೀಚೆಗೆ ನಿಧನರಾದ ವಿಹೆಚ್‍ಪಿಯ ಪ್ರಾಂತ ಸಹ ಸೇವಾ ಪ್ರಮುಖ್ ಮುರುಳಿಧರ್ ಅವರ ಭಾವಚಿತ್ರಕ್ಕೆ ದಕ್ಷಿಣ ಪ್ರಾಂತ ಸಂಘ ಚಾಲಕ ಮಾ.ವೆಂಕಟರಾವ್, ಆರ್‍ಎಸ್‍ಎಸ್ ಮುಖಂಡರಾದ ಡಾ.ವಾಮನ್ ರಾವ್ ಬಾಪಟ್, ಬಸವರಾಜ್ ಅವರು ಪುಷ್ಪಾರ್ಚನೆ ಮಾಡಿ, ನುಡಿ ನಮನ ಸಮರ್ಪಿಸಿದರು.

ಕಳೆದ 20 ವರ್ಷಗಳಿಂದ ವಿಹೆಚ್‍ಪಿಯ ಕಾರ್ಯ ಚಟುವಟಿಕೆಗೆ ಯುವಕರನ್ನು ತೊಡಗಿಸುವಲ್ಲಿ ಮುರುಳಿಧರ್ ಅವರ ಪಾತ್ರ ಪ್ರಮುಖವಾಗಿದೆ. ಹಿಂದೂ ಧರ್ಮದ ಜಾಗೃತಿಗಾಗಿ ಚಾಮರಾಜನಗರ, ಹಾಸನ, ಮೈಸೂರಿನಲ್ಲಿ ಹತ್ತು-ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಘದ ಚಟುವಟಿಕೆಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು ಎಂದರು.

ಚಾಮರಾಜನಗರದ ಸೇವಾ ಭಾರತಿ ಶಾಲೆಯ ಟ್ರಸ್ಟಿ, ಚಾಮುಂಡೆಶ್ವರಿ ದೇವಸ್ಥಾನದ ಸದಸ್ಯರು ಹಾಗೂ ಸಂಘದ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಸದಾ ಸಮಾಜ ಮುಖಿಯಾಗಿ ಯೋಚಿಸುತ್ತಿದ್ದರು. ಅವರಿಗೆ ವಹಿಸುತ್ತಿದ್ದ ಸಂಘದ ಜವಾಬ್ದಾರಿಗಳನ್ನು ಯಾವುದೇ ಪ್ರತಿಫಲಾಪಕ್ಷೆಯಿಲ್ಲದೆ ನಿರ್ವಹಿಸುತ್ತಿದ್ದರು. ಇವರ ಆತ್ಮಕ್ಕೆ ಆ ಭಗವಂತ ಚಿರಶಾಂತಿ ನೀಡಲಿ ಎಂದು ನುಡಿ ನಮನ ಸಲ್ಲಿಸಿದರು.

ವಿಭಾಗೀಯ ಸಂಘ ಚಾಲಕ ಡಾ.ವಾಮನ್‍ರಾವ್ ಬಾಪಟ್ ಮಾತನಾಡಿ, ಮುರುಳಿಧರ್ ಅವರ ಜೀವಿತಾವಧಿಯಲ್ಲಿ ಸಂಘ ಜೀವಿ, ಸ್ನೇಹ ಜೀವಿಯಾಗಿ ಪ್ರತಿಯೊಬ್ಬರ ಜೊತೆಯಲ್ಲೂ ಉತ್ತಮ ಬಾಂಧವ್ಯ ಹೊಂದಿದ್ದರು. ಅವರೊಡನೆ ಅಪರಿಚಿತರು ಒಮ್ಮೆ ಸ್ನೇಹಿತರಾದರೆ, ಆ ಪರಿಚಯವನ್ನು ಬಹುಕಾಲದವರೆಗೂ ಉಳಿಸಿಕೊಳ್ಳುತ್ತಿದ್ದರು. ಪರಿಚಿತರು ಸಂಘದ ಸಂಸ್ಕಾರ, ಕಾರ್ಯ ಚಟುವಟಿಕೆಗಳಿಂದ ಆಕರ್ಷಿತರಾಗುವಂತೆ ಮಾಡುವ ಗುಣ ಅವರಲ್ಲಿತ್ತು. ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಇದೇ ಸಂದರ್ಭದಲ್ಲಿ ವಿಹೆಚ್‍ಪಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಜಿ.ಬಸವರಾಜ್, ನಗರ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಆರ್‍ಎಸ್‍ಎಸ್ ಕಾರ್ಯಕರ್ತರಾದ ಜೋಗಿ ಮಂಜು, ಸುಮತ್ ಭರಣಿ , ಸವಿತಾ ಘಾಟ್ಗೆ, ಗೋಪಾಲರಾವ್ ಉಪಸ್ಥಿತರಿದ್ದರು.

Translate »