ಸ್ವಚ್ಛ ಸರ್ವೇಕ್ಷಣೆ ಹಿನ್ನೆಲೆ ರಸ್ತೆಗಳ ಮೀಡಿಯನ್‍ನಲ್ಲಿ ಹೂಕುಂಡಗಳ ಜೋಡಣೆ
ಮೈಸೂರು

ಸ್ವಚ್ಛ ಸರ್ವೇಕ್ಷಣೆ ಹಿನ್ನೆಲೆ ರಸ್ತೆಗಳ ಮೀಡಿಯನ್‍ನಲ್ಲಿ ಹೂಕುಂಡಗಳ ಜೋಡಣೆ

March 31, 2021

ಮೈಸೂರು, ಮಾ. 30(ಆರ್‍ಕೆ)- ಮೈಸೂರು ನಗರದ ಸೌಂದರ್ಯ ವೃದ್ಧಿಸಲು ಮೈಸೂರು ಮಹಾನಗರ ಪಾಲಿಕೆಯು ಅಲಂಕಾರಿಕ ಹೂಗಿಡಗಳಿರುವ ಪಾಟ್‍ಗಳನ್ನು ರಸ್ತೆಗಳ ಮೀಡಿಯನ್‍ಗಳಿಗೆ ಜೋಡಿಸುತ್ತಿದೆ. 2021ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಪ್ರಕ್ರಿಯೆ ನಡೆಯುತ್ತಿರುವುದರಿಂದ ಮೈಸೂರು ನಗರದಾದ್ಯಂತ ಪೌರಕಾರ್ಮಿಕರಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿರುವ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರು ಒಳಚರಂಡಿ ನೀರು ಹರಿಯದಂತೆ ಎಚ್ಚರ ವಹಿಸುತ್ತಿದ್ದಾರೆ.

ಅದೇ ರೀತಿ ನಗರದ ಸೌಂದರ್ಯ ಹೆಚ್ಚಿಸಲು ಹಸಿರೀಕರಣ ಹಾಗೂ ನಾನಾ ಬಣ್ಣಬಣ್ಣದ ಅಲಂಕಾರಿಕ ಹೂ ಗಿಡ ಹಾಗೂ ಅಲಂಕಾರಿಕ ಗಿಡಗಳ ಪಾಟ್‍ಗಳನ್ನು ಮೀಡಿಯನ್ ಇರುವ ರಸ್ತೆಗಳಲ್ಲಿ ಅಳವಡಿಸುವ ಕೆಲಸ ಕಳೆದ ಒಂದು ವಾರದಿಂದ ಆರಂಭವಾಗಿದೆ. ಗ್ರಾಮಾಂತರ ಬಸ್ ನಿಲ್ದಾಣದೆದುರು ಪೀಪಲ್ಸ್ ಪಾರ್ಕ್‍ಗೆ ಹೊಂದಿಕೊಂಡಂತಿರುವ ಪಾಲಿಕೆಯ ನರ್ಸರಿ, ಕುಪ್ಪಣ್ಣ ಪಾರ್ಕ್, ಸಿಟಿ ಬಸ್ ನಿಲ್ದಾಣದ ಬಳಿ ಇರುವ ನರ್ಸರಿಯಲ್ಲಿ ಬೆಳೆಸಿರುವ ಗಿಡಗಳ ಪಾಟ್‍ಗಳನ್ನು ರಸ್ತೆ ವಿಭಜಕಗಳಲ್ಲಿ ಇಟ್ಟು ಟ್ಯಾಂಕರ್‍ಗಳ ಮೂಲಕ ಪಾಲಿಕೆಯು ನೀರುಣಿಸತೊಡಗಿದೆ.
ಈಗಾಗಲೇ ಅರಮನೆ ಸುತ್ತಲಿನ ರಸ್ತೆ, ಹುಣಸೂರು ರಸ್ತೆ, ಸಯ್ಯಾಜಿರಾವ್ ರಸ್ತೆಗಳ ಮೀಡಿಯನ್ ಇರುವೆಡೆ ಹೂ ಕುಂಡಗಳನ್ನು ಅಳವಡಿಸಲಾಗಿದ್ದು, ಇಂದು ಮೈಸೂರು ಡೈರಿಯಿಂದ ಯರಗನಹಳ್ಳಿ ಸರ್ಕಲ್‍ವರೆಗೆ ಸಿದ್ಧಾರ್ಥ ಬಡಾವಣೆಯ ರಸ್ತೆ ವಿಭಜಕ ದಲ್ಲಿ ಹೂ ಕುಂಡಗಳನ್ನು ಪಾಲಿಕೆಯ ತೋಟಗಾರಿಕೆ ವಿಭಾಗದ ಸಿಬ್ಬಂದಿ ಜೋಡಿಸಿ ದರು. ಮೈಸೂರು ನಗರದಾದ್ಯಂತ 1 ಸಾವಿರ ಪಾಟ್‍ಗಳನ್ನು ಜೋಡಿಸಲಾಗುತ್ತಿದ್ದು, ಎರಡು ಟ್ಯಾಂಕರ್‍ಗಳಲ್ಲಿ ನಿತ್ಯ ಪಾಟ್‍ಗಳಿಗೆ ನೀರು ಹಾಕಲು ವ್ಯವಸ್ಥೆ ಮಾಡಲಾಗಿದೆ. ಆಸ್ತಿ ತೆರಿಗೆ ಜೊತೆಯಲ್ಲೇ ಪ್ರತೀ ಮಾಲೀಕರಿಂದ ಉದ್ಯಾನ ಅಭಿವೃದ್ಧಿಗೆ 400 ರೂ. ಹಾಗೂ ಸ್ಮಶಾನ ಅಭಿವೃದ್ಧಿ ಮತ್ತು ನಿರ್ವಹಣೆಗೆಂದು 150 ರೂ. ಕರ ವಸೂಲಿ ಮಾಡುತ್ತಿರುವುದರಿಂದ ಆ ಅನುದಾನದ ಸ್ವಲ್ಪ ಭಾಗವನ್ನು ರಸ್ತೆ ಮೀಡಿಯನ್‍ನಲ್ಲಿನ ಹೂಗಿಡಗಳ ನಿರ್ವಹಣೆಗೆ ಬಳಸಲು ಪಾಲಿಕೆ ಆಯುಕ್ತರು ಚಿಂತನೆ ನಡೆಸಿದ್ದಾರೆ.

ಕೆಲ ಖಾಸಗಿ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಉದ್ಯಾನ ಮತ್ತು ರಸ್ತೆ ವಿಭಜಕ ಗಳ ಹೂ ಗಿಡಗಳಿಗೆ ನೀರು ಹಾಕಿ, ನಿರ್ವಹಿಸುವ ಬಗ್ಗೆಯೂ ಆಸಕ್ತಿ ತೋರಿರುವ ಶಿಲ್ಪಾ ನಾಗ್ ಅವರು, ಕೇವಲ ಸ್ವಚ್ಛ ಸರ್ವೇಕ್ಷಣೆ ವೇಳೆಯಲ್ಲಷ್ಟೇ ಅಲ್ಲದೆ, ವರ್ಷ ಪೂರ್ತಿ ಸೌಂದರ್ಯ ವೃದ್ಧಿಸುವಂತೆ ಮಾಡಲು ಮುಂದಾಗಿದ್ದಾರೆ. ಈ ಸಂಬಂಧ ಆಯುಕ್ತರು ಏಪ್ರಿಲ್ 2 ಅಥವಾ 3ರಂದು ತೋಟಗಾರಿಕೆ, ಆರೋಗ್ಯ, ಕಂದಾಯ ವಿಭಾಗದ ಅಧಿಕಾರಿಗಳು, ಸರ್ಕಾರೇತರ ಸಂಘ-ಸಂಸ್ಥೆಗಳು, ಕೈಗಾರಿಕೋದ್ಯಮಿ ಗಳು, ಸ್ಟೇಕ್ ಹೋಲ್ಡರ್‍ಗಳ ಸಭೆ ಕರೆದಿದ್ದಾರೆ. ಪಾರ್ಕ್ ಮತ್ತು ರಸ್ತೆಗಳ ಮೀಡಿಯನ್ ಹೂ ಕುಂಡಗಳ ನಿರ್ವಹಣೆ ಕುರಿತಂತೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ.

Translate »