ಕೊರೊನಾ 2ನೇ ಅಲೆಯನ್ನು ಲೆಕ್ಕಿಸದ ಮಹಾಜನ!
ಮೈಸೂರು

ಕೊರೊನಾ 2ನೇ ಅಲೆಯನ್ನು ಲೆಕ್ಕಿಸದ ಮಹಾಜನ!

March 31, 2021

ಮೈಸೂರು,ಮಾ.30(ಪಿಎಂ)-ಕೋವಿಡ್-19 2ನೇ ಅಲೆ ಆತಂಕದ ನಡುವೆಯೂ ಜನದಟ್ಟಣೆ ನಿಯಂ ತ್ರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿಗೆ ನಿರ್ಬಂಧ ಇದ್ದಂತೆ ಕಾಣುತ್ತಿಲ್ಲ. ಅದೆಕೋ ಬಹುತೇಕರು ಕೋವಿಡ್‍ಗೆ ಡೋಂಟ್ ಕೇರ್ ಎನ್ನುತ್ತಿದ್ದಾರೆ!

ಮೈಸೂರಿನ ಪೂರ್ವ ಉಪ ನೋಂದಣಾ ಧಿಕಾರಿ ಕಚೇರಿಯಲ್ಲಿ ಮಂಗಳವಾರ ನೆರೆದಿದ್ದ ಜನದಟ್ಟಣೆ ಕಂಡು ಪ್ರಜ್ಞಾವಂತ ನಾಗರಿಕರು ಕೊರೊನಾ ಎರಡನೇ ಅಲೆಯ ಆತಂಕದ ಸ್ಥಿತಿಯಲ್ಲಿ ಈ ಪರಿ ಜನ ಸೇರುವುದು ಸೂಕ್ತವೇ? ಎಂದು ಬೇಸರ ವ್ಯಕ್ತಪಡಿಸಿದರು.

ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಅತ್ಯಂತ ಮುಖ್ಯವಾದ ಕ್ರಮ ದೈಹಿಕ ಅಂತರ ಕಾಯ್ದು ಕೊಳ್ಳು ವುದಾಗಿದ್ದರೂ ಬಹುತೇಕರು ಇದನ್ನು ಪಾಲಿಸುವ ಗೋಜಿಗೆ ಹೋದಂತೆ ಕಾಣುತ್ತಿಲ್ಲ. ಇದು ಬಹು ತೇಕ ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬರುತ್ತಿದ್ದು, ಮೈಸೂರಿನ ಡಾ.ರಾಜ್‍ಕುಮಾರ್ ರಸ್ತೆಯ ಕಲ್ಯಾಣ ಗಿರಿಯಲ್ಲಿರುವ ಈ ಉಪ ನೋಂದಣಾಧಿಕಾರಿ ಕಚೇರಿ ಯಲ್ಲೂ ಗಿಜಿಗುಡುವಂತೆ ಜನದಟ್ಟಣೆ ಸೇರಿದ್ದನ್ನು ನೋಡಿದರೆ ಕೊರೊನಾ ಸ್ಫೋಟಗೊಳ್ಳಲು ಆಸ್ಪದ ನೀಡಿದಂತಲ್ಲವೇ? ಎಂಬ ಪ್ರಶ್ನೆ ಮೂಡದಿರದು.

ಕೊರೊನಾ ಎರಡನೇ ಅಲೆಯ ಆರ್ಭಟಕ್ಕೆ ಅವ ಕಾಶ ನೀಡಬಾರದೆಂದು ಸಭೆ-ಸಮಾರಂಭಗಳಿಗೂ ಜನಸಂಖ್ಯೆಯ ಮಿತಿ ಹೇರಲಾಗಿದೆ. ಮದುವೆ, ಸಭೆ-ಸಮಾರಂಭ ಮಾತ್ರವಲ್ಲದೆ, ಅಂತ್ಯಸಂಸ್ಕಾ ರಕ್ಕೂ ಜನ ಸೇರುವುದಕ್ಕೆ ಮಿತಿ ನಿಗದಿ ಮಾಡ ಲಾಗಿದೆ. ನಿನ್ನೆಯಷ್ಟೇ ಮುಂದಿನ 15 ದಿನಗಳು ಯಾವುದೇ ಮೆರವಣಿಗೆ, ಧರಣಿ, ಚಳುವಳಿಗೆ ಅವಕಾಶ ಇಲ್ಲ ಎಂದು ಮುಖ್ಯಮಂತ್ರಿಗಳು ಪ್ರಕಟಿಸಿ ದ್ದಾರೆ. ಹೀಗೆ ಒಂದೆಡೆ ಕಟ್ಟುನಿಟ್ಟಿನ ಕ್ರಮಗಳನ್ನು ವಿಧಿಸುತ್ತಿದ್ದರೂ ಮತ್ತೊಂದೆಡೆ ಮುನ್ನೆಚ್ಚರಿಕಾ ಕ್ರಮಗಳು ಕೇವಲ ಘೋಷಣೆಗೆ ಸೀಮಿತವಾದಂತೆ ಆಗಿದೆ.

ಇದಕ್ಕೆ ತಾಜಾ ಉದಾಹರಣೆ ಪೂರ್ವ ಉಪ ನೋಂದಣಾಧಿಕಾರಿ ಕಚೇರಿ. ಅಲ್ಲಿ ಮಂಗಳವಾರ ಇದ್ದ ಜನದಟ್ಟಣೆ ಈ ಸಂದರ್ಭದಲ್ಲಿ ಆತಂಕಕಾರಿ. ಮತ್ತೊಂದು ಆಘಾತಕಾರಿ ವಿಷಯ ಎಂದರೆ ಅಲ್ಲಿನ ಹಲವರು ಮಾಸ್ಕ್ ಸಹ ಧರಿಸಿರಲಿಲ್ಲ. ಕೋವಿಡ್ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸ ಲಾಗಿದೆ ಎಂದು ಸರ್ಕಾರದ ಸುತ್ತೋಲೆಯಲ್ಲಿ ಇದೆಯಾದರೂ ಅವುಗಳು ಇಂತಹ ಪ್ರದೇಶಗಳಿಗೆ ಅನ್ವಯಿಸದೇ? ಎಂಬ ಪ್ರಶ್ನೆ ಮೂಡುತ್ತದೆ.

ಅಲ್ಲಿ ನೆರೆದಿದ್ದ ಜನದಟ್ಟಣೆ ಕಂಡ ಪ್ರಜ್ಞಾವಂತ ನಾಗರಿಕರು, ಇಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮ ಗಳು ಪಾಲನೆಯಾಗುವಂತೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇಂತಹ ಸ್ಥಳ ಗಳಿಂದಲೇ ಕೋವಿಡ್ ಸ್ಫೋಟಗೊಳ್ಳಲಿದೆ. ಅದಕ್ಕೆ ಅವಕಾಶ ನೀಡದೇ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು. ಭದ್ರತಾ ಸಿಬ್ಬಂದಿ ನಿಯೋ ಜಿಸಿ, ಟೋಕನ್ ವಿತರಿಸುವ ಮೂಲಕ ಸೇವೆ ನೀಡಿ ದರೆ ದೈಹಿಕ ಅಂತರ ಕಾಯ್ದುಕೊಳ್ಳಲು ಅನುಕೂಲ ವಾಗಲಿದೆ. ಮೈಸೂರಿನಲ್ಲಿರುವ ಇನ್ನೂ ಮೂರು ಉಪ ನೋಂದಣಾಧಿಕಾರಿಗಳ ಕಚೇರಿಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಮಿನಿ ವಿಧಾನಸೌಧದಲ್ಲಿರುವ ಮೈಸೂರು ಉತ್ತರ, ವಿಜಯನಗರದಲ್ಲಿರುವ ಮೈಸೂರು ಪಶ್ಚಿಮ ಹಾಗೂ ರಾಮಕೃಷ್ಣನಗರದಲ್ಲಿರುವ ಮೈಸೂರು ದಕ್ಷಿಣ ಉಪ ನೋಂದಣಾಧಿಕಾರಿ ಕಚೇರಿಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂಬುದು ಕಳಕಳಿ ಇರುವ ನಾಗರಿ ಕರ ಬೇಸರವಾಗಿದೆ. ಈ ಎಲ್ಲೆಡೆ ಕೋವಿಡ್ ಮುನ್ನೆ ಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ವಹಿಸಬೇಕು ಎಂಬುದು ಅವರ ಆಗ್ರಹವಾಗಿದೆ.
ಮುನ್ನೆಚ್ಚರಿಕೆ ವಹಿಸಿದ್ದೇವೆ: ಉಪ ನೋಂದಣಿ ಕಚೇರಿಗಳಲ್ಲಿ ದಾಖಲೆಗಳ ನೋಂದಣಿ ಪ್ರಮಾಣ ವನ್ನು ಈ ಹಿಂದಿನ ದಿನಗಳಿಗೆ ಹೋಲಿಸಿದರೆ ಪ್ರಸ್ತುತ ಕಡಿಮೆ ಇದೆ. ಇದನ್ನು ಅವಲೋಕಿಸಿದರೆ ಅಂತಹ ಜನದಟ್ಟಣೆ ಇಲ್ಲ. ಅದಾಗ್ಯೂ ನಮ್ಮ ಕಚೇರಿಗಳಲ್ಲಿ ಕೋವಿಡ್ ಸಂಬಂಧ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುತ್ತಾರೆ ಕಚೇರಿ ಅಧಿಕಾರಿಗಳು.

Translate »