ಸರಳ ದಶಮಂಟಪ ಶೋಭಾಯಾತ್ರೆ ಮಡಿಕೇರಿ ದಸರಾಗೆ ತೆರೆ
ಕೊಡಗು

ಸರಳ ದಶಮಂಟಪ ಶೋಭಾಯಾತ್ರೆ ಮಡಿಕೇರಿ ದಸರಾಗೆ ತೆರೆ

October 27, 2020

ಮಡಿಕೇರಿ, ಅ. 26- ಮಡಿಕೇರಿ ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಶಮಂಟಪಗಳ ಶೋಭಾಯಾತ್ರೆ ಅತ್ಯಂತ ಸರಳವಾಗಿ ನಡೆಯಿತು. ಮೈಸೂರು ದಸರಾಗೆ ಜಂಬೂಸವಾರಿ ಕಳಸಪ್ರಾಯ ವಾಗಿದ್ದರೆ, ಮಡಿಕೇರಿ ದಸರಾಗೆ ವರ್ಣರಂಜಿತ ದಶಮಂಟ ಪಗಳ ಶೋಭಾಯಾತ್ರೆ ಮೆರಗು ನೀಡುತ್ತಿತ್ತು.

10 ದೇವಾಲಯಗಳ ಮಂಟಪಗಳನ್ನು ಅತ್ಯಂತ ಆಕರ್ಷಣೀಯವಾಗಿ ಸಿದ್ಧಗೊಳಿಸ ಲಾಗುತ್ತಿತ್ತು. ಅದಕ್ಕಾಗಿ ತಮಿಳುನಾಡಿನ ಕಲಾವಿದರನ್ನು ಕರೆತರಲಾಗುತ್ತಿತ್ತು. ದಶ ಮಂಟಪಗಳ ಮಧ್ಯೆ ಸ್ಪರ್ಧೆಯನ್ನೇ ರ್ಪಡಿಸಿ, ಬಹುಮಾನ ವಿತರಿಸಲಾಗುತ್ತಿತ್ತು. ದಶಮಂಟಪಗಳ ಶೋಭಾಯಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಆಗಮಿ ಸುತ್ತಿದ್ದರು. ಅನೇಕರು ಮೈಸೂರಿನ ಜಂಬೂಸವಾರಿ ಮುಗಿಯುತ್ತಿದ್ದಂತೆಯೇ ಮಡಿಕೇರಿಯತ್ತ ಪ್ರಯಾಣ ಬೆಳೆಸುತ್ತಿದ್ದರು.

ಈ ಬಾರಿ ಕೊರೊನಾ ಕರಿನೆರಳಿನ ನಡುವೆ ಅತ್ಯಂತ ಸರಳವಾಗಿ, ಸಾಂಪ್ರದಾಯಿ ಕವಾಗಿ ದಶಮಂಟಪಗಳ ಶೋಭಾಯಾತ್ರೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಈ ಬಾರಿ ದಶಮಂಟಪಗಳು ನವರಾತ್ರಿ ವೇಳೆ ಸಂಚರಿಸಲಿಲ್ಲ. ವಿಜಯದಶಮಿ ದಿನ ವಿದ್ಯುತ್ ದೀಪಾಲಂಕಾರಗಳೊಂದಿಗೆ ಕಥಾಹಂದರ ಗಳನ್ನೊಳಗೊಂಡ ದಶಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವುದು ವಾಡಿಕೆ. ಆದರೆ, ಈ ಬಾರಿ ಕಥಾಹಂದರಕ್ಕೆ ತಕ್ಕಂತೆ ಚಲಿಸುವ ಮಂಟಪಗಳನ್ನು ರಚಿಸದೇ ಕೇವಲ ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮಂಟಪಗಳನ್ನಷ್ಟೇ ತಯಾರಿಸಲಾಗಿತ್ತು.

ಪ್ರತಿವರ್ಷ ಮಂಟಪಗಳ ಶೋಭಾ ಯಾತ್ರೆ ಆರಂಭವಾದ ಸ್ಥಳದಿಂದ ಪ್ರಮುಖ ರಸ್ತೆಗಳಲ್ಲಿ ಸಾಗಿ ಬನ್ನಿಮಂಟಪ ತಲುಪಿ ಬನ್ನಿ ಕಡಿದ ನಂತರ ಹಿಂತಿರುಗುತ್ತಿತ್ತು. ಅಲ್ಲಲ್ಲಿ ಕಥಾಹಂದರಗಳಿಗೆ ತಕ್ಕಂತೆ ಸಂಗೀತ ಹಾಗೂ ಸಂಭಾಷಣೆಯೊಂದಿಗೆ ಸಂದೇಶ ಸಾರಿ ಸ್ವಸ್ಥಳಕ್ಕೆ ಮರುದಿನ ಸಂಜೆ ವೇಳೆಗೆ ತಲುಪುತ್ತಿತ್ತು. ಆದರೆ, ಈ ಬಾರಿ ದಶ ಮಂಟಪದ ಮೆರಗು ಅಷ್ಟೇನೂ ಕಾಣಿಸಲಿಲ್ಲ. ಆದರೆ, ಮಂಟಪಗಳನ್ನು ವಿದ್ಯುತ್ ದೀಪ ಗಳಿಂದ ಸಿಂಗರಿಸಲಾಗಿತ್ತು. ಕಥಾಹಂದರ ವಾಗಲೀ, ಧ್ವನಿವರ್ಧಕದ ಶಬ್ದವಾಗಲೀ, ಸಂಗೀತ ಹಾಗೂ ಸಂಭಾಷಣೆ ಇಲ್ಲದೇ ಸರಳವಾಗಿ ಮಂಟಪಗಳು ಚಲಿಸಿದವು.

ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಕುದುರು ಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿ ಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ಪೇಟೆ ರಾಮಮಂದಿರ, ಶ್ರೀ ಕೋಟೆ ಗಣಪತಿ, ದೇಚೂರು ಶ್ರೀರಾಮ ಮಂದಿರ, ಕರವಲೆ ಭಗವತಿ, ಶ್ರೀ ಚೌಡೇಶ್ವರಿ, ಶ್ರೀ ಕೋದಂಡ ರಾಮ ಮಂಟಪಗಳು ಶೋಭಾಯಾತ್ರೆ ಯಲ್ಲಿ ಭಾಗವಹಿಸಿದ್ದವು. ಎಲ್ಲಾ ಮಂಟಪಗಳು ಯಾವುದೇ ರೀತಿಯ ಕಥಾಹಂದರದ ಚಲನೆ ಇಲ್ಲದೇ ಬನ್ನಿಮಂಟಪಕ್ಕೆ ಸಾಗಿದವು. ಮುಂಜಾನೆ ವೇಳೆಗೆ ಎಲ್ಲಾ ಮಂಟಪಗಳು ಸ್ವಸ್ಥಾನ ತಲುಪಿದವು. ಪ್ರತಿವರ್ಷ ವಿಜಯ ದಶಮಿಯಂದು ದಶಮಂಟಪ ವೀಕ್ಷಿಸಲು ಮಡಿಕೇರಿ ನಗರದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ನೆರೆದಿ ರುತ್ತಿದ್ದರು. ಶೋಭಾಯಾತ್ರೆ ಅಂಗವಾಗಿ ಪೊಲೀಸರು ವಾಹನ ಸಂಚಾರ ಮಾರ್ಗ ವನ್ನು ಬದಲಿಸುತ್ತಿದ್ದರು. ಆದರೆ, ಈ ಬಾರಿ ಬೆರಳೆಣಿಕೆಯಷ್ಟು ಪ್ರವಾಸಿಗರು ಮಾತ್ರ ಕಂಡುಬಂದರು. ಸ್ಥಳೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿರಲಿಲ್ಲ.

ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲೇ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡ ಲಾಗಿತ್ತು. ಜಿಲ್ಲೆಯ ವಿವಿಧ ಠಾಣೆಗಳ ಸಿಬ್ಬಂದಿ ಜೊತೆಗೆ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ, ಕೆಎಸ್‍ಆರ್‍ಪಿ ತುಕಡಿಗಳು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗಿತ್ತು.