ಸಿಎಂ ಬದಲಾವಣೆಗೆ ಪುಷ್ಟಿ ನೀಡಿದ ಕಟೀಲ್ ಆಡಿಯೋ
News

ಸಿಎಂ ಬದಲಾವಣೆಗೆ ಪುಷ್ಟಿ ನೀಡಿದ ಕಟೀಲ್ ಆಡಿಯೋ

July 20, 2021

ಬೆಂಗಳೂರು, ಜು.19(ಕೆಎಂಶಿ)- ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯ ಕತ್ವ ಬದಲಾಗಲಿದೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಿಶ್ಚಿತ ಎಂದು ಬಿಜೆಪಿ ರಾಜ್ಯಾ ಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಮಾತ ನಾಡಿರುವ ಆಡಿಯೋ ಬಹಿರಂಗಗೊಂಡಿ ರುವುದು ರಾಜಕೀಯ ಸಂಚಲನ ಸೃಷ್ಟಿಸಿದೆ.

ಜುಲೈ ಅಂತ್ಯದೊಳಗೆ ನಾಯಕತ್ವ ಬದ ಲಾವಣೆಯಾಗಲಿದ್ದು, ದೆಹಲಿಯಿಂದಲೇ ಹೊಸ ನಾಯಕನ ಘೋಷಣೆಯಾಗಲಿದೆ ಎಂದು ಕಟೀಲ್ ತಮ್ಮ ಆಪ್ತರೊಂದಿಗೆ ಮಾತನಾಡಿರುವ ಈ ಆಡಿಯೋ ವೈರಲ್ ಆಗುತ್ತಿದ್ದಂತೆ ಯಡಿಯೂರಪ್ಪನವರಿಂದ ತೆರವಾಗುತ್ತಿರುವ ಸ್ಥಾನಕ್ಕೆ 7 ಹೆಸರುಗಳು ಕೇಳಿ ಬರುತ್ತಿವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಉಪಮುಖ್ಯ ಮಂತ್ರಿ ಡಾ.ಅಶ್ವತ್ಥ್‍ನಾರಾಯಣ್, ವೀರಶೈವ ಸಮಾಜದ ಪಂಚಮಸಾಲಿ ಸಮುದಾಯದ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಮುರುಗೇಶ್ ನಿರಾಣಿ ಹಾಗೂ ಅರವಿಂದ್ ಬೆಲ್ಲದ್ ಹೆಸರು ಪ್ರಮುಖವಾಗಿ ಕೇಳಿ ಬಂದಿವೆ. ಈ ಮಧ್ಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರೂ, ಮುಂದಿನ ಒಂದು ವಾರ ಕಾಲ ಅವರು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಮುಖ್ಯಮಂತ್ರಿ ಸ್ಥಾನ ತೊರೆಯುವುದು ನಿಶ್ಚಿತ ಎಂಬಂತಿದೆ. ಜುಲೈ 26ಕ್ಕೆ ಯಡಿ ಯೂರಪ್ಪನವರು ಅಧಿಕಾರ ವಹಿಸಿಕೊಂಡು ಎರಡು ವರ್ಷಗಳು ಪೂರ್ಣಗೊಳ್ಳಲಿದೆ. ಅಂದು ಎರಡು ವರ್ಷದ ಸಾಧನೆ ಕಿರು ಪುಸ್ತಕ ಬಿಡುಗಡೆ ಮಾಡಿ, ಪಕ್ಷದ ಶಾಸಕರು ಹಾಗೂ ಮುಖಂಡರೊಟ್ಟಿಗೆ ಸಮಾಲೋಚನೆ ನಡೆಸಲಿದ್ದಾರೆ. ಆನಂತರ ರಾಜಭವನಕ್ಕೆ ತೆರಳಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಮುಖ್ಯಮಂತ್ರಿಯವರು 22ರ ಸಂಜೆ ಮಂತ್ರಿ ಮಂಡಲ ಸಭೆ ಕರೆದಿದ್ದು, ಅಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಂಡು ತಾವೇ ನಿರ್ಧಾರ ಘೋಷಣೆ ಮಾಡಲಿದ್ದಾರೆ. ನಂತರ ಶಿಕಾರಿಪುರಕ್ಕೆ ತೆರಳಿ, ಮನೆ ದೇವರಿಗೆ ಪೂಜೆ ಸಲ್ಲಿಸಿ, ಜೊತೆಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಶಿಕಾರಿಪುರದಿಂದ ಹಿಂತಿರುಗುತ್ತಿದ್ದಂತೆ ಜುಲೈ 25 ರಂದು ಸಂಜೆ ಪಕ್ಷದ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕಚೇರಿ ಸಿಬ್ಬಂದಿಯವರಿಗೂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಔತಣಕೂಟ ನೀಡಲು ನಿರ್ಧರಿಸಿದ್ದಾರೆ. ಇದರೊಟ್ಟಿಗೆ ನೀರಾವರಿ ನಿಗಮ ಸೇರಿದಂತೆ ಕೆಲವು ನಿಗಮಗಳ ಸಭೆ ನಡೆಸಿ, ಪ್ರಮುಖ ಯೋಜನೆಗಳಿಗೆ ತರಾತುರಿಯಲ್ಲಿ ಅನುಮತಿ ನೀಡುತ್ತಿದ್ದಾರೆ.

ಅಷ್ಟೇ ಅಲ್ಲ, ಬಹುದಿನಗಳಿಂದ ಬೇಡಿಕೆಯಿದ್ದ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗಾಗಿ 1200 ಕೋಟಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ. ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಪಕ್ಷದ ಯಾವ ಶಾಸಕರೂ ಅಪಸ್ವರ ಎತ್ತುತ್ತಿಲ್ಲ. ಆರೋಪ ಪ್ರತ್ಯಾರೋಪ ಮಾಡುತ್ತಿಲ್ಲ. ರಾಜೀನಾಮೆ ನೀಡುವಂತೆ ಹೇಳಿರುವ ವರಿಷ್ಠರು, ಮುಂದಿನ ನಾಯಕತ್ವಕ್ಕೆ ಗೌಪ್ಯವಾಗಿ ಅನ್ವೇಷಣೆ ಕಾರ್ಯ ಆರಂಭಿಸಿದ್ದಾರೆ.

Translate »