ಕೆಆರ್‍ಎಸ್ ಜಲಾಶಯದ ಸಣ್ಣ ಗೋಡೆ ಕುಸಿತ
ಮಂಡ್ಯ

ಕೆಆರ್‍ಎಸ್ ಜಲಾಶಯದ ಸಣ್ಣ ಗೋಡೆ ಕುಸಿತ

July 20, 2021

ಶ್ರೀರಂಗಪಟ್ಟಣ, ಜು.19 (ವಿನಯ್‍ಕಾರೇಕುರ)-ಅಕ್ರಮ ಗಣಿಗಾರಿಕೆ ಯಿಂದ ತಾಲೂಕಿನ ವಿಶ್ವವಿಖ್ಯಾತ ಕೃಷ್ಣರಾಜ ಸಾಗರÀ ಅಣೆಕಟ್ಟೆಗೆ ಗಂಡಾಂತರ ಕಾದಿದೆ ಎಂಬ ಸಂಸದೆ ಸುಮ ಲತಾ ಅಂಬರೀಷ್À ಅವರ ಹೇಳಿಕೆ ಬೆನ್ನಲ್ಲೇ ಭಾನುವಾರ ತಡರಾತ್ರಿ ಕೆಆರ್‍ಎಸ್ ಅಣೆಕಟ್ಟೆಯ +80 ಅಡಿ ಗೇಟು ಗಳ ಬಳಿ ಪಾದಚಾರಿ ರಸ್ತೆ ತಳಹದಿಯ ಕಲ್ಲು ಕುಸಿದಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಕೆಲ ದಿನಗಳಿಂದ ರಾಜ್ಯ ಮಟ್ಟದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಕೃಷ್ಣರಾಜ ಸಾಗರ ಅಣೆಕಟ್ಟೆಯ ಬಿರುಕು ಸುದ್ದಿ, ಸದ್ಯ ಕಳೆದ ಒಂದು ವಾರ ದಿಂದ ತಣ್ಣಗಾಗಿತ್ತು. ಇದೀಗ ತಳಹದಿಯ ಕಲ್ಲು ಕುಸಿದಿರುವುದ ರಿಂದ ಮತ್ತೆ ‘ಬಿರುಕು’ ಚರ್ಚೆಗೆ ಗ್ರಾಸವಾಗಿದೆ. ಅಣೆಕಟ್ಟೆಯ ಕಾವೇರಿ ಮಾತೆಯ ಪ್ರತಿಮೆ ಬಳಿ ಗಾರ್ಡನ್‍ಗೆ ಹೋಗುವ ಪಾದಚಾರಿ ಮಾರ್ಗದಲ್ಲಿ ಮೂವತ್ತಕ್ಕೂ ಹೆಚ್ಚು ಕಲ್ಲುಗಳು ಕುಸಿದಿದ್ದು, ಕಲ್ಲು ಕುಸಿದಿರುವ ಸ್ಥಳ ಅಣೆಕಟ್ಟೆಯ ಮಧ್ಯ ಭಾಗವಾಗಿದೆ. +80 ಗೇಟ್‍ನ ಬದಲಾವಣೆ ಕಾಮಗಾರಿ ವೇಳೆ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸುಮಾರು 90 ವರ್ಷ ಹಳೆಯದಾದ ಅಣೆಕಟ್ಟೆಯಲ್ಲಿ ಏಕಾಏಕಿ 30ಕ್ಕೂ ಅಧಿಕ ಕಲ್ಲುಗಳು ಕುಸಿದಿರುವುದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ಸುದ್ದಿ ತಿಳಿಯುತ್ತಿದ್ದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಜೆ ವೇಳೆಗೆ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೆಲ ದಿನಗಳಿಂದ ಸಂಸದೆ ಸುಮಲತಾ ಅಂಬರೀಷ್ ಕೆಆರ್‍ಎಸ್ ಅಣೆಕಟ್ಟೆಯಲ್ಲಿ ಬಿರುಕು ಬಿಟ್ಟಿದೆ. ಜಲಾಶಯದ ಸುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯೇ ಡ್ಯಾಂ ಬಿರುಕು ಬಿಡಲು ಕಾರಣ ಎಂಬ ಹೇಳಿಕೆ ಸ್ಥಳೀಯ ಶಾಸಕರು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನಡುವೆ ಮಾತಿನ ಸಮರವೇ ನಡೆದಿತ್ತು. ಅಲ್ಲದೆ ಸಂಸದೆ ಸುಮಲತಾ ಅಂಬರೀಷ್ ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳ ಪ್ರದೇಶಕ್ಕೆ ಭೇಟಿ ನೀಡಿದ್ದರಲ್ಲದೆ, ಜುಲೈ 14 ರಂದು ಕೆಆರ್‍ಎಸ್ ಅಣೆಕಟ್ಟೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಅಣೆಕಟ್ಟೆಯಲ್ಲಿ ಯಾವುದೇ ಬಿರುಕಿಲ್ಲ, ಅಣೆಕಟ್ಟೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಸಂಸದೆ ಸುಮಲತಾ ಅಂಬರೀಷ್ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ಅಣೆಕಟ್ಟೆಯ ಕಲ್ಲುಗಳು ಕುಸಿದಿರುವುದು ಆತಂಕ ತಂದೊಡ್ಡಿದೆ.

ಶಾಸಕ ರವೀಂದ್ರ ಭೇಟಿ: ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಕಲ್ಲು ಕುಸಿದ ಸ್ಥಳ ಹಾಗೂ ಅಣೆಕಟ್ಟೆಗೆ ತುಂಬಾ ಅಂತರವಿದೆ. ಈ ಗೋಡೆ ಮಣ್ಣಿನಲ್ಲಿ ಕಟ್ಟಿದ್ದು, ಅಣೆಕಟ್ಟೆಯನ್ನು ಚುರ್ಕಿ ಗಾರೆಯಲ್ಲಿ ನಿರ್ಮಿಸಲಾಗಿದೆ. ಈ ಗೋಡೆ ಮಣ್ಣಿನಿಂದ ನಿರ್ಮಿಸಿರುವುದರಿಂದ ನಿರಂತರ ಮಳೆಗೆ ಕುಸಿದಿದೆ. ಆದ್ದರಿಂದ ಸಾರ್ವನಿಕರು ಅಣೆಕಟ್ಟೆಯ ಸುರಕ್ಷತೆಯ ಬಗ್ಗೆ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ಈ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಸುಮಲತಾ ಅಂಬರೀಷ್ ಸಂಸದೆ: ಭಾನುವಾರ ರಾತ್ರಿ 9ರ ಸುಮಾರಿಗೆ ದೆಹಲಿಗೆ ತೆರಳಿದ ನಂತರ ಕೆಆರ್‍ಎಸ್ ಹಾಗೂ ಶ್ರೀರಂಗಪಟ್ಟಣದ ಸ್ಥಳೀಯರು ನನಗೆ ಕರೆ ಮಾಡಿ ಅಣೆಕಟ್ಟೆಯಲ್ಲಿ ಗೋಡೆ ಕುಸಿದು ಬಿದ್ದಿದೆ ಎಂದು ಮಾಹಿತಿ ನೀಡಿದರು. ತಕ್ಷಣ ನಾನು ಕಾವೇರಿ ನೀರಾವರಿ ನಿಗಮದ ಚೀಫ್ ಇಂಜಿನಿಯರ್ ಶಂಕರೇಗೌಡ ಅವರಿಗೆ ದೂರವಾಣಿ ಮೂಲಕ ಮಾಹಿತಿ ಪಡೆದೆ. ಒಂದೆರಡು ಕಲ್ಲು ಕುಸಿದಿದ್ದು, ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಮಾಹಿತಿ ನೀಡಿದರು. ಆದರೆ ಸ್ಥಳೀಯರ ಪ್ರಕಾರ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದಾಗ ನನಗೆ ಮಾಹಿತಿ ಇಲ್ಲ ಎಂದರು. ನಾನು ಸಂಪೂರ್ಣ ಮಾಹಿತಿ ಕೊಡಿ ಎಂದು ಹೇಳಿದ್ದೇನೆ. ಕೆಆರ್‍ಎಸ್ ಅಣೆಕಟ್ಟೆ ನಮ್ಮ ರಾಜ್ಯದ ಜೀವನಾಡಿ. ಇಂತಹ ಸೂಕ್ಷ್ಮ ವಿಚಾರದಲ್ಲಿ ಅಧಿಕಾರಿ ಗಳಿಗೇ ಮಾಹಿತಿ ಕೊರತೆ ಇದೆ. ಇಲ್ಲಿಯವರೆಗೂ ಅಧಿಕಾರಿಗಳು ಡ್ಯಾಂ ಸಂಪೂರ್ಣ ಸುರಕ್ಷಿತ ಎಂದು ಹೇಳುತಿದ್ದರು. ಆದರೆ ಗೋಡೆ ಕುಸಿದಿರುವ ಬಗ್ಗೆ ಪ್ರಶ್ನೆ ಕೇಳಿದರೆ ಅಧಿಕಾರಿಗಳ ಬಳಿ ಸಮರ್ಪಕ ಉತ್ತರವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆಆರ್‍ಎಸ್ ಅಣೆಕಟ್ಟೆಯ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ನಿರಂತರ. ಐತಿಹಾಸಿಕವಾದ ಅಣೆಕಟ್ಟೆಯನ್ನು ನಾವು ಉಳಿಸಿಕೊಳ್ಳ ಬೇಕಿದೆ. ಮುಂದೆ ಇಂತಹ ಒಂದು ಅಣೆಕಟ್ಟೆ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ ಇರುವ ನಮ್ಮ ಕೆ.ಆರ್.ಎಸ್ ಅಣೆಕಟ್ಟೆಯನ್ನು ಉಳಿಸಿಕೊಳ್ಳುವ ಹೊಣೆ ನನ್ನದಾಗಿದೆ. ಈ ವಿಚಾರವಾಗಿ ನನಗೆ ಸದನದಲ್ಲಿ ಅವಕಾಶ ಸಿಕ್ಕರೆ ಪ್ರಸ್ತಾಪಿಸುತ್ತೇನೆ, ಈ ಬಗ್ಗೆ ಸಂಬಂಧಪಟ್ಟ ಸಚಿವರು ಹಾಗೂ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಮಾತನಾಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

Translate »